ಕೆಂಭಾವಿ: ‘ಪಟ್ಟಣದ ಐತಿಹಾಸಿಕ ಮಲ್ಲಯ್ಯನ ಬಂಡಿ ಉತ್ಸವವು ಶುಕ್ರವಾರ ಸಹಸ್ರಾರು ಭಕ್ತರ ಜಯಘೋಷಣೆಯ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಶೃಂಗಾರಗೊಂಡ ಮಲ್ಲಯ್ಯನ ಪ್ರತಿಮೆ ಹೊತ್ತ ಬಂಡಿಯನ್ನು ಮಧ್ಯಾಹ್ನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಐತಿಹಾಸಿಕ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡು ಮಲ್ಯಯ್ಯನ ದರ್ಶನ ಪಡೆದರು. ಸಂಬಳ, ಡೊಳ್ಳು ಕುಣಿತ, ಭಜನೆ ನೋಡುಗರ ಮನ ತಣಿಸಿತು.
ಮಲ್ಲಯ್ಯನ ದೇವಸ್ಥಾನದಲ್ಲಿ ಬಂಡಿಗೆ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಿದ್ದಂತೆ ಇತ್ತ ಭಕ್ತರು ಭಂಡಾರ ಎರಚಿ ಸಂಭ್ರಮಿಸಿದರು.
ಶಿಬಾರದಲ್ಲಿ ಸರಪಳಿ ಹರಿಯುವದು, ಹೇಳಿಕೆ ನೀಡುವುದು ಮುಂತಾದ ಕಾರ್ಯಕ್ರಮಗಳ ಜೊತೆಗೆ ಬೆಳಿಗ್ಗೆಯಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಹಿರಿಯರು ಮಲ್ಲಯ್ಯನ ಬಂಡಿಗೆ ಕಾಯಿ ಒಡೆದು, ಬಂಢಾರ ಎರಚಿ ಹರಕೆ ತೀರಿಸಿದರು. ಮಕ್ಕಳು ಆಟಿಕೆ ಸಾಮಾನುಗಳ ಖರೀದಿಸಿ ಖುಷಿ ಪಟ್ಟರು.
ಬೆಳಿಗ್ಗೆಯಿಂದಲೇ ಪಟ್ಟಣದ ಸಾವಿರಾರು ಮಹಿಳೆಯರು ಮಕ್ಕಳು ಮಲ್ಲಯ್ಯನ ಬಂಡಿ ಉತ್ಸವವನ್ನು ಅಂಗಡಿಗಳ ಮಾಳಿಗೆ ಮೇಲೆ, ಮಹಡಿಗಳ ಮೇಲೆ ಕುಳಿತು ಉತ್ಸವವನ್ನು ಸಂಭ್ರಮಿಸಿದರು.
ಯುವಕರ ಉತ್ಸಾಹ
ಮಲ್ಲಯ್ಯನ ಹೊತ್ತ ಬಂಡಿ ಮುಖ್ಯ ಬಜಾರ ಪ್ರವೇಶಿಸುತ್ತಿದ್ದಂತೆ ಸುಮಾರು ಒಂದು ಗಂಟೆಗಳ ಕಾಲ ಯುವಕರು ಬಂಡಿಯನ್ನು ಹಿಂದೆ ಮತ್ತು ಮುಂದೆ ಹಗ್ಗದಿಂದ ಎಳೆದಾಡಿ ಶಿಬಾರಕ್ಕೆ ಹೋಗುವುದು ನಡೆದು ಬಂದ ವಾಡಿಕೆಯಾಗಿದೆ. ಇಂತಹ ಉತ್ಸಾಹ ನೋಡಲು ಪ್ರತಿವರ್ಷ ಜಾತ್ರೆಗೆ ಅನೇಕ ಊರುಗಳಿಂದ ಜನ ಸೇರುವುದು ವಿಶೇಷ. ಮುಖ್ಯ ಬಜಾರ ರಸ್ತೆಯಲ್ಲಿ ಬಂಡಿಯನ್ನು ಹಿಂದೆ ಮುಂದೆ ಎಳೆಯುವ ಸಂದರ್ಭದಲ್ಲಿ ಯುವಕರು ಉತ್ಸಾಹದಿಂದ ‘ಏಳು ಕೋಟಿಗೆ ಏಳು ಕೋಟಿಗೋ’ ಎಂದು ಜಯ ಘೋಷಣೆ ಕೂಗುತ್ತಾ ಭಂಡಾರ ಎರಚಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.