ADVERTISEMENT

ಯಾದಗಿರಿ| ರಾಜ್ಯದ ನಾಯಕತ್ವ ಬದಲಾಗಲ್ಲ, ಎದೆಗುಂದ ಬೇಡಿ: ಸಚಿವ ಕೆ.ಜೆ. ಜಾರ್ಜ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 6:15 IST
Last Updated 25 ನವೆಂಬರ್ 2025, 6:15 IST
   

ಯಾದಗಿರಿ: ‘ರಾಜ್ಯದ ನಾಯಕ್ವತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಪಕ್ಷತ ಕಾರ್ಯಕರ್ತರು ಎದೆಗುಂದದೆ ಮುಂಬರುವ ಚುನಾವಣೆಗಳಿಗೆ ಸಜ್ಜಾಗಬೇಕು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದಲ್ಲಿ ಸೋಮವಾರ ಶಾಸಕ ಚನ್ನಾರೆಡ್ಡಿ ‍ಪಾಟೀಲ ತುನ್ನೂರು ಅವರ ಶಾಸಕರ ಗೃಹ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನ ಕಾರ್ಯಕರ್ತರು ನಕರಾತ್ಮಕ ರಾಜಕೀಯ ವಿದ್ಯಮಾನಗಳಿಂದ ದೂರ ಇರಬೇಕು. ಜಿಲ್ಲೆಯಲ್ಲಿ ಏನಾದರು ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ಅದನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಮಾಡಬೇಡಿ’ ಎಂದರು.

ADVERTISEMENT

‘ಲೋಕಸಭೆಯ ಚುನಾವಣೆಯಲ್ಲಿ ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಜನತೆ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಜಿಲ್ಲೆಯ ಮೂವರು ಶಾಸಕರು ಪಕ್ಷದ ಅಭ್ಯರ್ಥಿಯ ಗೆಲುವಿನಲ್ಲಿ ಸಾಕಷ್ಟು ಶ್ರಮವಿದೆ’ ಎಂದು ಹೇಳಿದರು.

‘ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರು ಶ್ರಮಿಸಬೇಕು. ಪಕ್ಷ ಸೂಚಿಸುವ ಅಭ್ಯರ್ಥಿಗಳ ಗೆಲುವಿಗೆ ಒಗ್ಗೂಡಬೇಕು. ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ, ಸರ್ಕಾರದ ಬಳಿ ದುಡ್ಡು ಇಲ್ಲ ಎಂದು ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಿ. ಜನರಿಗೂ ಅವುಗಳ ಬಗ್ಗೆ ಮನವರಿಕೆ ಮಾಡಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಕುಮಾರ್ ನಾಯಕ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ರಾಜಾ ವೇಣುಗೋಪಾಲ ನಾಯಕ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ‘ಯುಡಾ’ ಅಧ್ಯಕ್ಷ ಬಾಬುರಾವ ಕಾಡ್ಲೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮಗಾರಿ ಪರಿಶೀಲನೆ: ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕಾಂಗ್ರೆಸ್ ಕಚೇರಿ ಆವರಣದಲ್ಲಿನ ಕಚೇರಿಯ ನೂತನ ಕಟ್ಟಡದ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.