ಸುರಪುರ: ‘ಪಠ್ಯದಷ್ಟೆ ಕ್ರೀಡೆಯೂ ಮುಖ್ಯ. ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದಾಗಿದೆ. ಉತ್ತಮ ಕ್ರೀಡಾಪಟುಗಳಾಗಿ ದೇಶಕ್ಕೆ ಕೀರ್ತಿ ತನ್ನಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.
ನಗರದ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕ-ಬಾಲಕಿಯರ ಕೊಕ್ಕೊ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೊಕ್ಕೊ ರಾಷ್ಟ್ರೀಯ ಕ್ರೀಡೆ. ನಮ್ಮ ಸರ್ಕಾರ ದೇಸಿ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ. ಯುವಕ-ಯುವತಿಯರು ದೇಶಿ ಕ್ರೀಡೆಗಳಾದ ಕಬ್ಬಡಿ, ಕೊಕ್ಕೊಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಹಿಂದಿನ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಈ ಹಿಂದೆ ಇಲ್ಲಿ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡಿ ಹಲವು ಕ್ರೀಡಾ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಾ ವೇಣುಗೋಪಾಲನಾಯಕ ಮಾತನಾಡಿ, ‘ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಪ್ರತಿಯೊಬ್ಬ ಆಟಗಾರ ಸ್ಪರ್ಧಾ ಸ್ಪೂರ್ತಿಯಿಂದ ಪಂದ್ಯಾಟಗಳಲ್ಲಿ ಪಾಲ್ಗೊಳ್ಳಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು’ ಎಂದು ತಿಳಿಸಿದರು.
ಡಿಡಿಪಿಐ ಚನ್ನಬಸಪ್ಪ ಮುಧೋಳ, ತಹಶೀಲ್ದಾರ್ ಎಚ್.ಎ.ಸರಕಾವಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್, ಉಪಾಧ್ಯಕ್ಷ ರಾಜಾ ಪಿಡ್ಡನಾಯಕ, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಯೂಥ್ ಕಾಂಗ್ರೆಸ್ ಘಟಕ ಜಿಲ್ಲಾಧ್ಯಕ್ಷ ರಾಜಾಕುಮಾರ ನಾಯಕ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ, ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ್, ಇಸಿಒ ಶರಣಬಸವ ಗಚ್ಚಿನಮನಿ, ಎನ್‍ಜಿಒ ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಬಲಭೀಮನಾಯಕ ದೇಸಾಯಿ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಪ್ರಮುಖರಾದ ರಾಜಾ ವಾಸುದೇವ ನಾಯಕ, ರಾಜಾ ಸಂತೋಷ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಾಯಕ, ರಾಜಶೇಖರಗೌಡ ವಜ್ಜಲ್, ಗುಂಡಪ್ಪ ಸೊಲ್ಲಾಪುರ, ಬಾಪುಗೌಡ ಪಾಟೀಲ್, ಮಲ್ಲಣ್ಣ ಸಾಹು ಮುಧೋಳ, ಅಬ್ದುಲ್ ಗಫಾರ್ ನಗನೂರಿ, ಶೇಖ ಮಹಿಬೂಬ್ ಒಂಟಿ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಸುಗೂರೇಶ ವಾರದ, ದೊಡ್ಡ ದೇಸಾಯಿ, ಮಾನಪ್ಪ ಸೂಗೂರು, ನಗರಸಭೆ ಮತ್ತು ನಗರ ಯೋಜನಾ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.
ಬಿಇಒ ಯಲ್ಲಪ್ಪ ಕಾಡ್ಲೂರ ಸ್ವಾಗತಿಸಿದರು. ಶಿಕ್ಷಕ ಶರಣಗೌಡ ಮಾಲಗತ್ತಿ ನಿರೂಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆರ್ಚರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕ್ರೀಡಾ ಸಚಿವರೊಂದಿಗೆ ಮಾತನಾಡುವೆಶರಣಬಸಪ್ಪಗೌಡ ದರ್ಶನಾಪುರ ಸಚಿವ
ಗಮನಸೆಳೆದ ರೋಚಕ ಸೆಣಸಾಟಗಳು
ಸುರಪುರ ನಗರದ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳ ಸಾಹಸ ಸೆಣಸಾಟ ಎಲ್ಲರನ್ನು ರೋಚಕತೆಗೆ ಕೊಂಡೊಯ್ಯಿತು. ಬಾಲಕರ ಹಾಗೂ ಬಾಲಕಿಯರ ಎರಡು ವಿಭಾದಲ್ಲೂ ಪ್ರತಿ ಪಂದ್ಯಗಳು ಒಂದಕ್ಕಿಂತ ಒಂದು ರೋಚಕ ಸೆಣಸಾಟದಿಂದ ಕೂಡಿದ್ದವು. ಕೊಕ್ಕೊ ವೀಕ್ಷಿಸಲು ಜನರು ಕಿಕ್ಕಿರಿದು ಸೇರಿದ್ದರು. ಕ್ರೀಡಾಪಟುಗಳಿಗೆ ಸಿಳ್ಳೆ ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಆಟಗಾರರು ಉತ್ಸಾಹ ಹೋರಾಟ ನೋಡುಗರ ಗಮನಸೆಳೆಯಿತು. ವಿವಿಧೆಡೆಯಿಂದ ಬಾಲಕ-ಬಾಲಕಿಯರ ಒಟ್ಟು 28 ತಂಡಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.