
ಸುರಪುರ: ತಾಲ್ಲೂಕಿನ ದೇವಪುರ ಗ್ರಾಮದ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಮತ್ತು ದೇವಸ್ಥಾನಕ್ಕೆ ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದರು.
ಗವಿಶ್ರೀ ಗಳನ್ನು ಮಠದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಶ್ರೀಗಳು ಜಡಿಶಾಂತಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಸುಂದರವಾದ ದೇವಸ್ಥಾನ ನಿರ್ಮಾಣದ ಬಗ್ಗೆ ದೇವಪುರ ಪೂಜ್ಯರಿಂದ ಮಾಹಿತಿ ಪಡೆದು ಕೊಂಡರು.
ನಂತರ ಜಡಿಶಾಂತಲಿಂಗೇಶ್ವರ ಸಂಸ್ಥಾನದ ಮಠಕ್ಕೆ ಭೇಟಿಯಿತ್ತು ವೀಕ್ಷಣೆ ಮಾಡಿದರು. ಅನೇಕ ಭಕ್ತರು ಗವಿಶ್ರೀ ಗಳನ್ನು ಭೇಟಿ ಮಾಡಿ ನಮಸ್ಕರಿಸಿದರು. ಅಭಿನವ ಪೂಜ್ಯರ ಆಗಮನದ ಹಿನ್ನೆಲೆಯಲ್ಲಿ ದೇವಪುರ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅನೇಕರು ಪೂಜ್ಯರನ್ನು ಸಮೀಪದಿಂದ ನೋಡಿ ಕಣ್ತುಂಬಿ ಕೊಳ್ಳಬೇಕು, ಆಶೀರ್ವಾದ ಪಡೆಯಬೇಕು, ಪ್ರವಚನ ಆಲಿಸಬೇಕು ಎಂಬ ಉತ್ಸುಕತೆದಲ್ಲಿರುವುದು ಕಂಡು ಬಂತು.
ಮಠದ ಪೀಠಾಧೀಶ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ರಾಜುಗೌಡ, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ ಸಜ್ಜನ್, ಮುಖಂಡರಾದ ಎಚ್.ಸಿ.ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಬಸವರಾಜ ಸ್ಥಾವರಮಠ, ಅಮರಯ್ಯಸ್ವಾಮಿ ಜಾಲಿಬೆಂಚಿ, ಜಗದೀಶ ಪಾಟೀಲ ಸುಗೂರು, ಲಕ್ಷ್ಮೀಕಾಂತ ದೇವರಗೋನಾಲ, ಗಂಗಾಧರ ನಾಯಕ ಅರಳಹಳ್ಳಿ ಮಠದ ಭಕ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.