ADVERTISEMENT

ಪ್ರವಾಹ ಇಳಿಮುಖ; ಶಾಂತಳಾಗುತ್ತಿರುವ ಕೃಷ್ಣೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 14:32 IST
Last Updated 24 ಆಗಸ್ಟ್ 2020, 14:32 IST
ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ (ಸಂಗ್ರಹ ಚಿತ್ರ)
ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ (ಸಂಗ್ರಹ ಚಿತ್ರ)   

ಹುಣಸಗಿ (ಯಾದಗಿರಿ): ತಾಲ್ಲೂಕಿನ ನಾರಾಯಣಪುರದ ಬಸವಸಾಗರದಿಂದ ಭೋರ್ಗರೆದು ಹರಿದು ರುದ್ರ ನರ್ತನ ತೋರಿಸಿದ್ದ ಕೃಷ್ಣೆ ಶಾಂತಳಾಗುತಿದ್ದು, ಪ್ರವಾಹ ಪರಿಸ್ಥಿತಿ ಹತೋಟಿಗೆ ಬರುತ್ತಿದೆ.

ಕಳೆದ 15 ದಿನಗಳಿಂದಲೂ ಅಬ್ಬರಿಸುತ್ತಲೇ ನದಿ ತೀರದಲ್ಲಿರುವ ಗ್ರಾಮಗಳ ಹೊಲಗಳಿಗೆ ನುಗ್ಗಿದ ಕೃಷ್ಣೆ ಸದ್ಯ ಶಾಂತ ರೀತಿಯಲ್ಲಿಯೇ ಹರಿಯುತ್ತಿದ್ದಾಳೆ. ಇದರಿಂದಾಗಿ ನದಿ ತೀರದಲ್ಲಿರುವ ಗ್ರಾಮಗಳ ಜನರಿಗೆ ಆತಂಕ, ದುಗುಡ ಕೊಂಚ ದೂರವಾಗಿದೆ.

ಶುಕ್ರವಾರ 2.60 ಲಕ್ಷ ಕ್ಯುಸೆಕ್ ಇದ್ದ ಹೊರ ಹರಿವು ಶನಿವಾರ 1.65 ಲಕ್ಷ ಕ್ಯುಸೆಕ್‌ಗೆ ಇಳಿದಿತ್ತು. ಭಾನುವಾರವೂ ಇದೇ ಹರಿವು ದಾಖಲಾಗಿತ್ತು. ಆದರೆ, ಸೋಮವಾರ ಬೆಳಿಗ್ಗೆ ನದಿಗೆ 78 ಸಾವಿರ ಕ್ಯುಸೆಕ್ ಮಾತ್ರ ಹರಿಸಲಾಗುತ್ತಿದೆ ಎಂದು ಜಲಾಶಯದ ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

ಸೋಮವಾರ ಸಂಜೆ 1 ಲಕ್ಷ ಕ್ಯುಸೆಕ್ ಒಳ ಹರಿವು ಇದ್ದು, ಜಲಾಶಯದ ಮಟ್ಟ 491.33 ಮೀಟರ್ ಕಾಯ್ದುಕೊಂಡು 6 ಮುಖ್ಯ ಕ್ರಸ್ಟ್ ಗೇಟ್‌ಗಳ ಮುಖಾಂತರ 69 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಅಲ್ಲದೇ ಎಡದಂಡೆ ಮುಖ್ಯ ಕಾಲುವೆಗೆ 6 ಸಾವಿರ ಕ್ಯುಸೆಕ್ ಹರಿಸಲಾಗುತ್ತಿದೆ ಎಂದು ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ನಾಯ್ಕೋಡಿ ತಿಳಿಸಿದರು.

ಕಳೆದ ಒಂದು ವಾರದಿಂದಲೂ ಹುಣಸಗಿ ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಹಾಗೂ ಜಿಟಿ ಜಿಟಿ ಮಳೆಯಿಂದ ಕೂಡಿದ ವಾತಾವರಣ ಇತ್ತು. ಆದರೆ ಸೋಮವಾರ ಸಂಪೂರ್ಣ ಬಿಸಿಲು ಬಿದ್ದಿದ್ದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

ಭಾನುವಾರ ರಾತ್ರಿ ಕೊಡೇಕಲ್ಲ ಗ್ರಾಮದಲ್ಲಿ ಅಲ್ಪ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.