ADVERTISEMENT

ಹುಣಸಗಿ: ಕೃಷ್ಣೆಯ ಜಲಧಾರೆ ವೀಕ್ಷಣೆಗೆ ಪ್ರವಾಸಿಗರ ನಿರಾಸಕ್ತಿ

ಭೀಮಶೇನರಾವ ಕುಲಕರ್ಣಿ
Published 23 ಆಗಸ್ಟ್ 2025, 5:11 IST
Last Updated 23 ಆಗಸ್ಟ್ 2025, 5:11 IST
ಹುಣಸಗಿ ತಾಲ್ಲೂಕಿನ ನಾರಾಯಣಪುರ ಛಾಯಾ ಭಗವತಿ ದೇವಸ್ಥಾನದಕ್ಕೆ ನೀರು ನುಗ್ಗಿರುವುದು
ಹುಣಸಗಿ ತಾಲ್ಲೂಕಿನ ನಾರಾಯಣಪುರ ಛಾಯಾ ಭಗವತಿ ದೇವಸ್ಥಾನದಕ್ಕೆ ನೀರು ನುಗ್ಗಿರುವುದು   

ಹುಣಸಗಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗಿದ್ದು, ನದಿಯು ಅಪಾಯದ ಮಟ್ಟ ಮಿರಿ ಹರಿಯುತ್ತಿದೆ. ಒಂದು ವಾರದಿಂದ ಎರಡು ಲಕ್ಷ ಕ್ಯೂಸೆಕ್‌ಗೂ ಹೆಚ್ಚು ಪ್ರಮಾಣದ ನೀರು ಹರಿಯುತ್ತಿದೆ.

ನಾರಾಯಣಪುರದ ಬಸವಸಾಗರ ಜಲಾಶಯದ ಮಟ್ಟ ಕಾಯ್ದುಕೊಂಡು ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಕ್ರಸ್ಟ್‌ಗೇಟ್‌ಗಳ ಮೂಲಕ ಧುಮ್ಮಿಕ್ಕುವ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದರು. ನದಿಯ ಭೋರ್ಗರೆತವನ್ನು ಕಣ್ತುಂಬಿಕೊಳ್ಳಲು ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಗಳ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಪ್ರವಾಸಿಗರು ಪ್ರಮಾಣ ಕಡಿಮೆಯಿದೆ.

ಛಾಯಾ ಜಲಪಾತ ಮತ್ತು ದೇವಸ್ಥಾನದ ಮೇಲ್ಭಾಗದ ಬಳಿಯೂ ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ. ಪ್ರವಾಹದಿಂದಾಗಿ ಐದು ದಿನಗಳಿಂದ ಛಾಯಾ ದೇವಿ ಉತ್ಸವ ಮೂರ್ತಿಯನ್ನು ಮೇಲ್ಭಾಗದಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ ಎಂದು ಪುರೋಹಿತ ಚಿದಂಬರಭಟ್ಟ ಜೋಶಿ ಹೇಳಿದರು.

ADVERTISEMENT

ಕಳೆದ ವರ್ಷ ಸುಮಾರು ಒಂದು ತಿಂಗಳಿಗೂ ಹೆಚ್ಚು ಜಲಾಶಯದ ಎದುರು ಭಜಿ, ಚಹಾ ಅಂಗಡಿ, ಜ್ಯೂಸ್ ಹಾಗೂ ಕುರುಕಲು ತಿನಿಸು ಮತ್ತು ಮೆಕ್ಕೆ ತೆನೆ ಅಂಗಡಿಗಳು ಇದ್ದವು. ವ್ಯಾಪಾರವೂ ಉತ್ತಮವಾಗಿತ್ತು. ಆದರೆ ಈ ಬಾರಿ ಪ್ರವಾಸಿಗರು ಕಡಿಮೆ ಇದ್ದುದರಿಂದಾಗಿ ವ್ಯಾಪಾರ ಹೆಚ್ಚಿಲ್ಲ ಎಂದು ಚಿಕ್ಕಉಪ್ಪೇರಿ ಗ್ರಾಮದ ಬಸವರಾಜ ತಿಳಿಸಿದರು.

ಜಲಾಶಯದ ಭದ್ರತೆಗೆ ಆದ್ಯತೆ: ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿದ್ದರು. ಆದರೆ ಜಲಾಶಯದ ಭದ್ರತೆ ಹಿನ್ನೆಲೆಯಲ್ಲಿ ಗುಂಪಾಗಿ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರವೇಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಪ್ರವಾಸಿಗರು ಬಂದು ಮುಖ್ಯ ಸೇತುವೆ ಮೇಲೆ ನಿಂತು ಹೋಗುತ್ತಾರೆ. ಆದರೆ ನೀರಿನ ಹರಿವು, ಅದರ ವೈಭವದ ಕುರಿತು ನೋಡುವ ಮತ್ತು ನಯನ ಮನೋಹರ ದೃಶ್ಯ ಅನುಭವಿಸುವಂತಹ ಸೌಲಭ್ಯ ನಿರ್ಮಿಸಬೇಕು ಎಂದು ಹುಣಸಗಿ ಬಸವರಾಜ ಸಜ್ಜನ, ಮಲ್ಲಣ್ಣ ಡಂಗಿ ಹೇಳಿದರು.

ಶುಕ್ರವಾರ ಸಂಜೆ ಜಲಾಶಯಕ್ಕೆ 2.55 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದು, 490.38 ಮಟ್ಟ ಕಾಯ್ದುಕೊಂಡು 2.61 ಲಕ್ಷ ಕ್ಯೂಸೆಕ್ ನೀರನ್ನು 30 ಕ್ರಸ್ಟ್‌ ಗೇಟ್‌ಗಳ ಮುಖಾಂತರ ಕೃಷ್ಣಾ ನದಿಗೆ ಹಾಗೂ 3 ಸಾವಿರ ಕ್ಯೂಸೆಕ್ ಎಡದಂಡೆ ಕಾಲುವೆಗೆ ಹಾಗೂ 1 ಸಾವಿರ ಕ್ಯೂಸೆಕ್ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿದೆ ಎಂದು ಜಲಾಶಯ ವಿಭಾಗೀಯ ಸಹಾಯಕ ಎಂಜಿನಿಯರ್ ವಿಜಯಕುಮಾರ ಅರಳಿ ಮಾಹಿತಿ ನೀಡಿದರು.

ಜಲಾಶಯದ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡುತ್ತಿಲ್ಲ. ಆದರೆ ಶಾಲೆ–ಕಾಲೇಜುಗಳ ಮುಖ್ಯಸ್ಥರು ವೀಕ್ಷಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದರೆ ಅವಕಾಶ ನೀಡಲಾಗುತ್ತದೆ ಎ
ಚ್.ಬಿ.ಕೊಣ್ಣೂರ ಜಲಾಶಯ ವಿಭಾಗದ ಇಇ
ಬಸವಸಾಗರ ಜಲಾಶಯವು ಸ್ಕಾಡಾ ತಂತ್ರಜ್ಞಾನದ ಗೇಟ್ ಹೊಂದಿರುವ ಕಾಲುವೆ ಜಾಲ ಹೊಂದಿದೆ. ಜತೆಗೆ ವೀಕ್ಷಣೆಗೆ ವೀವ್‌ ಪಾಯಿಂಟ್ ನಿರ್ಮಿಸುವ ಅಗತ್ಯವಿದೆ
ಶ್ರೀಕಾಂತ ಕುಲಕರ್ಣಿ ಲಿಂಗಸೂಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.