ADVERTISEMENT

ಜಮೀನು ಭೋಗ್ಯಕ್ಕೆ ಪಡೆದವರಿಗೆ ಸಂಕಷ್ಟ | ಬೆಳೆ ಹಾನಿ ಪರಿಹಾರದ ಹಣ ಮಾಲೀಕರ ಖಾತೆಗೆ

ಅಶೋಕ ಸಾಲವಾಡಗಿ
Published 8 ನವೆಂಬರ್ 2022, 5:14 IST
Last Updated 8 ನವೆಂಬರ್ 2022, 5:14 IST
ಸುರಪುರ ತಾಲ್ಲೂಕಿನ ಗೋನಾಲ ಎಸ್.ಡಿ. ಗ್ರಾಮದ ಹೊಲವೊಂದರಲ್ಲಿ ಭತ್ತ ನೆಲ ಕಚ್ಚಿರುವುದು
ಸುರಪುರ ತಾಲ್ಲೂಕಿನ ಗೋನಾಲ ಎಸ್.ಡಿ. ಗ್ರಾಮದ ಹೊಲವೊಂದರಲ್ಲಿ ಭತ್ತ ನೆಲ ಕಚ್ಚಿರುವುದು   

ಸುರಪುರ: ಕಳೆದ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಭತ್ತ ನಿಷೇಧವಿದ್ದರೂ ತಾಲ್ಲೂಕಿನಲ್ಲಿ ಶೇ 70 ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಅಧಿಕ ಗೊಬ್ಬರ, ಕ್ರಿಮಿನಾಶಕ ಮತ್ತು ನೀರು ಬಳಕೆಯಿಂದ ಭೂಮಿ ಸವಳು ಜವಳಾಗುತ್ತಿದೆ.

ದಶಕಗಳಿಂದ ಭತ್ತ ಬೆಳೆದ ರೈತರು ಪರ್ಯಾಯ ಬೆಳೆಯತ್ತ ಗಮನ ಹರಿಸಲಿಲ್ಲ. ಸಾಮಾನ್ಯವಾಗಿ ಎಕರೆಗೆ 40 ರಿಂದ 45 ಚೀಲ ಭತ್ತದ ಇಳುವರಿ ಬರುತ್ತದೆ (ಚೀಲಕ್ಕೆ 75 ಕೆಜಿ). ಚೀಲಕ್ಕೆ ₹1,200 ರಿಂದ ₹ 1,300 ದರ ದೊರೆತರೆ ಹೆಚ್ಚು. 3 ಬಾರಿ ಎಕರೆಗೆ 8 ರಿಂದ 10 ಚೀಲ ಗೊಬ್ಬರ ನೀಡಬೇಕು. 5 ರಿಂದ 6 ಸಲ ಕ್ರಿಮಿನಾಶಕ ಸಿಂಪಡಿಸಿ, ಕಳೆ ತೆಗೆಯಬೇಕು.

ಡಿಎಪಿ ಗೊಬ್ಬರ ₹1,600 ಬೆಲೆ ಇದೆ. ಸಸಿ ನಾಟಿ ಮಾಡಲು ಎಕರೆಗೆ ₹5 ಸಾವಿರ, ಕಟಾವು ಮಾಡಲು ₹2200 ಇದೆ. ಕೂಲಿ ಇತರೆ ಖರ್ಚು ಸೇರಿಸಿದರೆ ಒಟ್ಟಾರೆ ಎಕರೆಗೆ ₹35 ಸಾವಿರ ಖರ್ಚು ಬರುತ್ತದೆ. ಭೋಗ್ಯಕ್ಕೆ ಪಡೆದ ರೈತ ಹೊಲದ ಮಾಲೀಕರಿಗೆ ಎಕರೆಗೆ 10 ರಿಂದ 12 ಚೀಲ ಕೊಡಬೇಕು. ಹೀಗಾಗಿ ಎಲ್ಲ ಖರ್ಚು ತೆಗೆದು ರೈತನಿಗೆ ಸಿಗುವುದು ಎಕರೆಗೆ ₹5 ರಿಂದ ₹7 ಸಾವಿರ ಮಾತ್ರ.

ADVERTISEMENT

‘ಭತ್ತ ಈಗ ಕಾಯಿ ಕಟ್ಟಿದೆ. ವಾರದಿಂದ ತಿಂಗಳೊಳಗೆ ಎಲ್ಲ ಭತ್ತ ಕಟಾವಿಗೆ ಬರುತಿತ್ತು. ಮಳೆಯಿಂದ ರೈತನ ಸ್ಥಿತಿ ಗಂಭೀರ ಆಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ನೀಡುವ ಬೆಳೆ ಹಾನಿ ಪರಿಹಾರ ಭೋಗ್ಯಕ್ಕೆ ಪಡೆದ ರೈತನಿಗೆ ಬರುವುದಿಲ್ಲ. ಜಮೀನಿನ ಮಾಲೀಕನಿಗೆ ಹಣ ಜಮೆ ಆಗುತ್ತದೆ’ ಎಂದು ರೈತರು ತಿಳಿಸಿದರು.

ಪರ್ಯಾಯ ಬೆಳೆಯತ್ತ ಆಂಧ್ರಪ್ರದೇಶ ರೈತರು: ಪ್ರದೇಶವು ನೀರಾವರಿಗೆ ಒಳಪಟ್ಟರೂ ಅದನ್ನು ಬಳಸಿಕೊಳ್ಳುವ ಬಗ್ಗೆ ರೈತನಿಗೆ ತಿಳಿದಿರಲಿಲ್ಲ. 4 ದಶಕಗಳ ಹಿಂದೆ ಈ ಭಾಗಕ್ಕೆ ವಲಸೆ ಬಂದ ಆಂಧ್ರಪ್ರದೇಶದ ರೈತರು ಅತ್ಯಂತ ಕಡಿಮೆ ದರದಲ್ಲಿ ಹೊಲ ಖರೀದಿಸಿ ಭತ್ತ ಬೆಳೆಯತೊಡಗಿದರು. ರೈತರು ತಾವು ಮಾರಾಟ ಮಾಡಿದ ಹೊಲದಲ್ಲೆ ಕೂಲಿ ಮಾಡತೊಡಗಿದರು.

ಕ್ರಮೇಣ ಇಲ್ಲಿನ ರೈತರೂ ಭತ್ತ ಬೆಳೆಯತೊಡಗಿದರು. ಭತ್ತದ ಇಂದಿನ ಕೆಟ್ಟ ಪರಿಸ್ಥಿತಿಯನ್ನು ಅರಿತಿದ್ದ ಆಂಧ್ರ ವಲಸೆ ರೈತರು ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ್ದಾರೆ. ಪಪಾಯ, ದಾಳಿಂಬೆ, ಡ್ರ್ಯಾಗನ್ ಫ್ರುಟ್ ಬೆಳೆಯತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.