ADVERTISEMENT

ಗುರುಮಠಕಲ್ ಬಸ್ ನಿಲ್ದಾಣ; ಸ್ವಚ್ಛತೆ ಮರೀಚಿಕೆ

‘ಹೈಟೆಕ್’ ನಿಲ್ದಾಣ ಈಗ ಅವ್ಯವಸ್ಥೆಗಳ ತಾಣ; ಮೂಗು ಮುಚ್ಚಿಕೊಂಡೇ ಕೂಡುವ ಪ್ರಯಾಣಿಕರು

ಎಂ.ಪಿ.ಚಪೆಟ್ಲಾ
Published 22 ಏಪ್ರಿಲ್ 2022, 4:45 IST
Last Updated 22 ಏಪ್ರಿಲ್ 2022, 4:45 IST
ಗುರುಮಠಕಲ್ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ
ಗುರುಮಠಕಲ್ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ   

ಗುರುಮಠಕಲ್: ಎಲ್ಲೆಂದರಲ್ಲಿ ಗುಡ್ಡೆ ಹಾಕಿದ ಕಸದ ರಾಶಿ, ತಡೆಗೋಡೆಗೆ ಮೂತ್ರ ವಿಸರ್ಜನೆ, ಗೋಡೆಗಳ ಮೇಲೆಲ್ಲಾ ಗುಟ್ಕಾ ಉಗುಳಿದ ಚಿತ್ತಾರಗಳು, ಕುಡಿಯುವ ನೀರಿನ ನಳದ ಹತ್ತಿರವೂ ದುರ್ನಾತ, ಕಸದ ತೊಟ್ಟಿಗಳು ತುಕ್ಕು ಹಿಡಿದರೂ ಬದಲಿಸದ ಇಲಾಖೆ..

ಇದು ಹೈಟೆಕ್ ನಿಲ್ದಾಣ ಎಂದು ಕರೆಸಿಕೊಳ್ಳುವ ಪಟ್ಟಣದ ಬಸ್ ನಿಲ್ದಾಣದ ಪರಿಸ್ಥಿತಿ.

ನಿಲ್ದಾಣದ ತಡೆಗೋಡೆಯ ಜೊತೆಗೇ ಕಸದ ರಾಶಿ ತುಂಬಿದ್ದು, ಕೆಲ ಸಿಬ್ಬಂದಿಯೂ ಸೇರಿದಂತೆ ಪ್ರಯಾಣಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ಪ್ರಯಾಣಿಕರು ದುರ್ನಾತದಿಂದ ಮೂಗು ಮುಚ್ಚಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣಿಕರು ಸೇರಿದಂತೆ ಸ್ಥಳೀಯರು ಹಾಗೂ ಸಂಘಟನೆಗಳು ಎಷ್ಟು ಬಾರಿ ಮನವಿ ಮಾಡಿದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರಿಗಳಿಂದ ಸ್ವಚ್ಛ ಭಾರತ ಸೆಸ್ ವಸೂಲಿ ಮಾಡುವ ಇಲಾಖೆ ಸ್ವಚ್ಛತೆಯತ್ತ ಮಾತ್ರ ಗಮನಹರಿಸದು. ಒಂದೆಡೆ ಮೂತ್ರ ವಿಸರ್ಜನೆ, ಮತ್ತೊಂದೆಡೆ ಗುಟ್ಕಾ ಅಗಿದು ಎಲ್ಲೆಂದರಲ್ಲಿ ಉಗಿದದ್ದರಿಂದ ಬಸ್ ನಿಲ್ದಾಣದ ವಾತಾವರಣ ಅಸಹನೀಯವಾಗಿದೆ. ಪ್ರಯಾಣಿಕರು ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ಮಾಡುವಂತೆ ಹೇಳುವ ಇಲಾಖೆ ಪ್ರಯಾಣಿಕರು ಕಾಯುವ ಸ್ಥಳದಲ್ಲಿ ಮಾತ್ರ ಸ್ವಚ್ಛತೆ ಕಾಯ್ದುಕೊಳ್ಳುತ್ತಿಲ್ಲ ಎಂದು ಸ್ಥಳೀಯರಾದ ವೆಂಕಟೇಶ, ಮಹೇಶ ಹಾಗೂ ಲಕ್ಷ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣ ಕಟ್ಟಡವನ್ನು ನಿರ್ಮಿಸುವಾಗ ಉದ್ಯಾನ ನಿರ್ಮಾ ಣಕ್ಕೆಂದು ಸ್ಥಳವನ್ನು ಕಾಯ್ದಿರಿಸಲಾಗಿತ್ತು. ಆದರೆ, ಈವರೆಗೂ ಉದ್ಯಾನ ಮಾತ್ರ ನಿರ್ಮಿಸಿಲ್ಲ. ಕಸದ ತೊಟ್ಟಿಗಳು ತುಕ್ಕು ಹಿಡಿದಿವೆ ಅವನ್ನು ಬದಲಿಸಲ್ಲ. ಅದರಿಂದ ಪ್ರಯಾಣಿಕರು ಕಸದ ತೊಟ್ಟಿಗೆ ಎಸೆದ ಕಸವೂ ಕೆಳಗೆ ಚೆಲ್ಲುತ್ತದೆ. ಕೊಳಚೆ ನೀರು ತಡೆಗೋಡೆಗುಂಟಾ ಜಮೆಯಾದ ಕಸದಲ್ಲಿ ಸೇರಿ ಸೊಳ್ಳೆಗಳು ಹೆಚ್ಚುತ್ತಿವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳದ್ದು ಜಾಣ ಕುರುಡು ಎಂದು ಸ್ಥಳೀಯರಾದ ನರಸಿಂಹ ದೂರಿದರು.

ಪುಂಡರ ಹಾವಳಿ: ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ಹಿಂದಿರುಗಲು ನಿಲ್ದಾಣದಲ್ಲಿ ಕಾಯುತ್ತಿರುವ ವೇಳೆ ಕೆಲ ಪುಂಡರು ಕಿರಿಕಿರಿ ಮಾಡುತ್ತಿರುವ ಕುರಿತು ವಿದ್ಯಾರ್ಥಿನಿಯರು ಅಳಲು ತೋಡಿಕೊಳ್ಳುತ್ತಾರೆ. ಕನಿಷ್ಠ ಸಂಜೆ ವೇಳೆ ಪೊಲೀಸರು ಪುಂಡರ ಹಾವಳಿ ತಪ್ಪಿಸಬೇಕು, ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಸೇರಿದಂತೆ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಿತರು ಈಗಲಾದರೂ ಮುಂದೆ ಬರಲಿ ಎಂದು ಪ್ರಯಾಣಿಕ ಮಹಾಂತೇಶ ಸೌಕಾರ ಆಗ್ರಹಿಸಿದರು.

ಸಮಸ್ಯೆ ಕುರಿತು ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿದರೂ ಸಂ‍ಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.