ಶಹಾಪುರ: ದರ್ಶನಾಪುರ ಕುಟುಂಬದ ಆಪ್ತ ಒಡನಾಡಿಯಾಗಿರುವ ಶಿವಮಹಾಂತಪ್ಪ ಸಾಹು ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸುದೀರ್ಘ ಅವಧಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ ಆರಬೋಳ ಅವರಿಗೆ ಕೊಕ್ ನೀಡಿ ನೀಡಿ ಹಿಂದುಳಿದ ಕುರುಬ ಸಮಾಜದ ನಾಯಕನ್ನು ನೇಮಿಸುವ ಮೂಲಕ ಸಚಿವ ಶರಣಸಪ್ಪ ದರ್ಶನಾಪುರ ಅವರು ಹೊಸ ರಾಜಕೀಯ ಲೆಕ್ಕ ಶುರು ಮಾಡಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಸೇರಿರುವ ಚಂದ್ರಶೇಖರ ಆರಬೋಳ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ಮುಕ್ತಿ ನೀಡುವ ಮೊದಲು ಅವರ ಪುತ್ರ ಸಿದ್ದಣ್ಣ ಆರಬೋಳ ಅವರನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸುವುದರ ಮೂಲಕ ಕೊಡು ತೆಗೆದುಕೊಳ್ಳುವ ರಾಜಕೀಯ ವ್ಯವಹಾರವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಮಾಡಿದ್ದಾರೆ ಎಂದು ಲಿಂಗಾಯತ ಸಮುದಾಯದ ಮುಖಂಡರೊಬ್ಬರು ತಿಳಿಸಿದರು.
ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದ ಬಸವರಾಜ ಅವರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿತು. ಹಿಂದುಳಿದ ನಾಯಕನಿಗೆ ನಮ್ಮ ಪಕ್ಷದಲ್ಲಿ ಉನ್ನತ ಹುದ್ದೆಯನ್ನು ನೀಡಿದ್ದೇವೆ ಎಂದು ಬಿಂಬಿಸಲು ಶುರು ಮಾಡಿದರು. ಅದಕ್ಕೆ ಪ್ರತಿ ತಂತ್ರವಾಗಿ ಕುರುಬ ಸಮಾಜದ ನಾಯಕ ಶಿವಮಹಾಂತಪ್ಪ ಸಾಹು ನೇಮಿಸಿಲಾಗಿದೆ ಎಂಬ ಮಾತು ರಾಜಕೀಯವಲಯದಲ್ಲಿ ಕೇಳಿ ಬರುತ್ತಲಿದೆ.
ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭ್ಯಾಸ ಮಾಡಿ 1983ರಲ್ಲಿ ಬಿಎಸ್ಸಿ ಪದವೀಧರನಾಗಿರುವ ಶಿವಮಹಾಂತಪ್ಪ ಸಾಹು ಅವರು, ಅಂದಿನ ದಿ.ಬಾಪುಗೌಡ ದರ್ಶನಾಪುರ ಅವರ ಒಡನಾಡಿಯಾಗಿ ರಾಜಕೀಯ ಪ್ರವೇಶ ಪಡೆದರು. 1987ರಲ್ಲಿ ಚಾಮನಾಳದ ಮಂಡಲ ಪ್ರದಾನರಾಗಿ ಜನ ಸೇವೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸವರಾಜಪ್ಪಗೌಡ ದರ್ಶನಾಪುರ ಅವರ ಹಿಂಬಾಲಕನಾಗಿ ಅಲ್ಲದೆ ಇಂದಿನ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಬೆಂಬಲಿಗರಾಗಿ ಕಳೆದ 40 ವರ್ಷದಿಂದ ದರ್ಶನಾಪುರ ಕುಟುಂಬದ ಒಡನಾಡಿಯಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಎಲ್ಲರ ಜತೆ ಆತ್ಮೀಯವಾಗಿ ಬೆರೆಯುವ ಹಾಗೂ ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸುವ ಶಕ್ತಿ ಹಾಗೂ ತಾಳ್ಮೆ ತೋರುವ ವ್ಯವಧಾನ ಶಿವಮಹಾಂತಪ್ಪ ಸಾಹು ಅವರಿಗೆ ಇದೆ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಮುಖಂಡರು.
ಕಳೆದ 40 ವರ್ಷಗಳಿಂದ ದರ್ಶನಾಪುರ ಕುಟುಂಬದ ಒಡನಾಡಿಯಾಗಿ ಸಕ್ರಿಯ ರಾಜಕೀಯದಲ್ಲಿರುವೆ. ಬರುವ ದಿನಗಳಲ್ಲಿ ಎಲ್ಲಾ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲವರ್ಧನೆ ಮಾಡುವೆಶಿವಮಹಾಂತಪ್ಪ ಸಾಹು ಬ್ಲಾಕ್ ಕಾಂಗ್ರೆಸ್‌ನ ನಿಯೋಜಿತ ಅಧ್ಯಕ್ಷ
18 ವರ್ಷದಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವೆ. ವಯಸ್ಸಾಗಿದ್ದರಿಂದ ಸ್ವ ಪ್ರೇರಣೆಯಿಂದ ಬೇಡ ಅಂತ ಹೇಳಿರುವೆ. ನಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಲ್ಲಿಯೇ ಕಳೆದಿರುವೆ. ಪಕ್ಷಕ್ಕಾಗಿ ದುಡಿದ ಖುಷಿ ನನಗಿದೆಚಂದ್ರಶೇಖರ ಆರಬೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.