ಸುರಪುರ: ‘ಹುಣಸಗಿ ತಾಲ್ಲೂಕಿನ ಬೈಲಕುಂಟಿ ಗ್ರಾಮದ ಮಾದಿಗ ಸಮುದಾಯದ ಹುಲಗಪ್ಪ ದೊಡ್ಮನಿ ತನ್ನ ಜಮೀನಿನಲ್ಲಿ ಬೆಳಿದಿದ್ದ ಮೆಣಸಿನಕಾಯಿ ಮತ್ತು ಕಬ್ಬು ಬೆಳೆಯನ್ನು ಗ್ರಾಮದ ಕೆಲವರು ಕಳ್ಳತನ ಮಾಡಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಸಂಘಟನೆ ನೇತೃತ್ವದಲ್ಲಿ ದಲಿತಪರ ಸಂಘಟನೆಗಳ ಮುಖಂಡರು ನಗರದ ಪೊಲೀಸ್ ಠಾಣೆಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಿದರು.
ಪೊಲೀಸರು 10 ಜನ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೂ ಪ್ರತಿಭಟನಾಕಾರರು ಪಟ್ಟುಬಿಡದೆ ಠಾಣೆ ಮುಖ್ಯದ್ವಾರದಲ್ಲಿ ಧರಣಿ ಕುಳಿತರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಬೈಲಕುಂಟಿ ಗ್ರಾಮದಲ್ಲಿ ಮಾದಿಗ ಸಮುದಾಯದ ಹುಲಗಪ್ಪ ತನ್ನ 4 ಎಕರೆ ಜಮೀನನಲ್ಲಿ ಮೆಣಸಿನಕಾಯಿ ಮತ್ತು ಕಬ್ಬು ಬೆಳೆ ಬೆಳೆದಿದ್ದ. ಬೆಳೆ ಕಟಾವು ಹಂತದಲ್ಲಿತ್ತು. ಗ್ರಾಮದ ಗ್ರಾಮದ ಕೆಲ ಪ್ರಭಾವಿಗಳು ರಾತೋರಾತ್ರಿ ಬೆಳೆ ಕಳುವು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಹುಲಗಪ್ಪ ಕಳೆದ ಒಂದು ತಿಂಗಳ ಹಿಂದೆ ಆರೋಪಗಳ ವಿರುದ್ಧ ದೂರು ನೀಡಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ, ಆರೋಪಿಗಳು ಪ್ರಭಾವಿಗಳಾಗಿದ್ದು ಇದರಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡವಿದೆ. ರೈತನಿಗೆ ಬೆಳೆಯ ನಷ್ಟ ಭರಿಸಿಕೊಡಬೇಕು. ಪೊಲೀಸ್ ಬಂದೋಬಸ್ತ್‌ನಲ್ಲಿ ಇನ್ನುಳಿದ ಕಬ್ಬು ಕಟಾವುಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಲಿಖಿತ ಭರವಸೆ ನೀಡುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ತಡ ರಾತ್ರಿವರೆಗೆ ಪ್ರತಿಭಟನೆ ಮುಂದುವರಿದಿತ್ತು. ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು.
ಮುಖಂಡರಾದ ನಿಂಗಣ್ಣ ಗೋನಾಲ, ಹುಲಗಪ್ಪ ದೊಡ್ಮನಿ, ಚಂದ್ರಶೇಖರ ಜಡಿಮರಳ, ರಾಮನಗೌಡ ಬೈಲಕುಂಟಿ, ಪ್ರಭು ಕೋಳಿಹಾಳ, ಮರೆಪ್ಪ ಕಾಂಗ್ರೆಸ್, ಹುಲಗಪ್ಪ, ಚಂದಪ್ಪ ಶೆಳ್ಳಗಿ, ಭೀಮಣ್ಣ ಲಕ್ಷ್ಮೀಪುರ, ಜಟ್ಟೆಪ್ಪ ನಾಗರಾಳ, ಹಣಮಂತ ನರಸಿಂಗಪೇಟ, ಮೂರ್ತಿ ಬೊಮ್ನಳ್ಳಿ, ಮಾನಪ್ಪ ಶೆಳ್ಳಗಿ, ನಾಗರಾಜ ಓಕಳಿ, ಭೀಮಣ್ಣ ವಡವಡಗಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.