ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಕೊಡಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಕೋಣೆಗಳು ಸೋರುತ್ತಿದ್ದು, ವಿದ್ಯಾರ್ಥಿಗಳಿಗಾಗಿ ಈಗ ಗ್ರಾಮದ ಆಂಜನೇಯ ದೇಗುಲ ಆವರಣದಲ್ಲಿ ತರಗತಿಗಳು ನಡೆಯತ್ತಿವೆ.
ಶಾಲೆಯಲ್ಲಿ 1ರಿಂದ 7ನೇ ತಗರತಿವರೆಗೆ ಇದ್ದು, 107 ವಿದ್ಯಾರ್ಥಿಗಳಿದ್ದಾರೆ. ಮೂರು ಕೋಣೆಗಳಿದ್ದು, ಎರಡು ಕೋಣೆ ಶಿಥಿಲಗೊಂಡಿವೆ. ಮಳೆ ಬಂದರೆ ಸೋರುತ್ತಿವೆ.
‘ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದ ಮಳೆ ಬಂದಾಗ ದೇಗುಲ ಆವರಣದಲ್ಲಿ ಪಾಠ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಾಲಾ ಮುಖ್ಯಶಿಕ್ಷಕ ಬಸವರಾಜ.
‘ಹೊಸ ಕಟ್ಟಡ ಮಂಜೂರಾತಿ ಆಗಿದೆ. ಕಟ್ಟಡ ಆರಂಭಿಸಿಲ್ಲ. ಐದು ಕೋಣೆ ಇದ್ದವು. ಈಗಾಗಲೇ ಎರಡು ಕೋಣೆ ನೆಲಸಮ ಮಾಡಲಾಗಿದೆ. ಇನ್ನುಳಿದ ಮೂರಲ್ಲಿ ಎರಡು ಕೋಣೆ ಸೋರುತ್ತಿವೆ. ಚೆನ್ನಾಗಿರುವ ಒಂದು ಕೋಣೆ ಕಚೇರಿ, ಶಿಕ್ಷಕರು ಕುಳಿತುಕೊಳ್ಳಲು ಬಳಕೆಯಾಗುತ್ತಿದೆ. ಬಿಸಿಯೂಟದ ಪ್ರತ್ಯೇಕ ಕೋಣೆ ಇದೆ’ ಎಂದು ಮಾಹಿತಿ ನೀಡಿದರು.
‘ಹೊಸ ಕಟ್ಟಡ ನಿರ್ಮಿಸಲು ಆರು ತಿಂಗಳ ಹಿಂದೆ ಕೋಣೆಗಳನ್ನು ಕೆಡವಲಾಗಿದೆ. ಹೊಸ ಕಟ್ಟಡವೂ ಇಲ್ಲ. ಸೋರುತ್ತಿರುವ ಕೋಣೆಗಳನ್ನೂ ದುರಸ್ತಿ ಮಾಡುತ್ತಿಲ್ಲ. ಡಿಡಿಪಿಐ ಅವರು ತಕ್ಷಣ ಶಾಲೆಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಸಂಘಟನೆಯ ಮುಖಂಡ ಶಿವಪುತ್ರಪ್ಪ ಜವಳಿ, ಹೊನ್ನಪ್ಪ ಗಂಗನಾಳ ಒತ್ತಾಯಿಸಿದ್ದಾರೆ.
ಹೆಚ್ಚು ಮಳೆ ಬಂದಾಗ ಮಕ್ಕಳು ದೇಗುಲದಲ್ಲಿ ಅಭ್ಯಾಸ ಮಾಡುತ್ತಾರೆ. ತಕ್ಷಣ ಕಟ್ಟಡ ದುರಸ್ತಿಗೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಎರಡು ದಿನದಲ್ಲಿ ಕೆಲಸ ಆರಂಭಿಸುತ್ತಾರೆ.– ಈರಣ್ಣ ಯಳವಾರ, ಸಿಆರ್‌ಪಿ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.