ADVERTISEMENT

ಶಹಾಪುರ ಮುಖ್ಯ ಶಾಖಾ ಕಾಲುವೆಯಲ್ಲಿ ಅಂದು ಕಾಡು ಕೋಣ, ಇಂದು ಚಿರತೆ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:50 IST
Last Updated 20 ಫೆಬ್ರುವರಿ 2026, 4:50 IST
ಪಶು ವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು
ಪಶು ವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು   

ಶಹಾಪುರ: ಎರಡು ವರ್ಷಗಳ ಹಿಂದೆ ತಾಲ್ಲೂಕಿನ ವನದುರ್ಗ ಗ್ರಾಮದ ಕಾಲುವೆಯಲ್ಲಿ ಕಾಡು ಕೋಣ ಹರಿದು ಬಂದಿತ್ತು. ಈಗ, ಗೋಗಿ(ಕೆ) ಶಹಾಪುರ ಮುಖ್ಯ ಶಾಖಾ ಕಾಲುವೆಯಲ್ಲಿ (ಎಸ್‌ಬಿಸಿ) ಚಿರತೆ ಹರಿದು ಬಂದು ಅದು ಶವವಾಗಿ ಪತ್ತೆಯಾಗಿದೆ.

‌ಎರಡು ವರ್ಷಗಳ ಕಾಲುವೆಯಲ್ಲಿ ಹರಿದು ಬಂದಿದ್ದ ಕಾಡು ಕೋಣ ಗ್ರಾಮಸ್ಥರ ನೆರವಿನಿಂದ ಹೊರ ತೆಗೆಯಲಾಗಿತ್ತು. ಹೆಚ್ಚು ಗಾಯಗೊಂಡಿದ್ದರಿಂದ ಅದು ಮೃತಪಟ್ಟಿತು. ಆದರೆ, ಗೋಗಿ(ಕೆ) ಗ್ರಾಮದ ಎಸ್‌ಬಿಸಿಯ ಭೋರುಕಾ ಪವರ್ ಪ್ಲಾಂಟ್ ಗೇಟ್ ನಂ.3 ಬಳಿ ಗುರುವಾರ ಪತ್ತೆಯಾದ ನಾಲ್ಕು ವರ್ಷದ ಗಂಡು ಚಿರತೆ ಶವ ಹಲವು ಅನುಮಾನಗಳು ಮೂಡಿಸಿದೆ.

ಕುರುಚಲ ಅರಣ್ಯ, ಕಲ್ಲು ಬಂಡೆಗಳ ಗುಡ್ಡ ಪ್ರದೇಶ ಹೊಂದಿರುವ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ಕಾಣುವುದು ಅಪರೂಪ.

ADVERTISEMENT

ಬುಧವಾರ ರಾತ್ರಿ ಗೋಗಿ (ಕೆ) ಗ್ರಾಮದ ಕಾಲುವೆ ವ್ಯಾಪ್ತಿಯಲ್ಲಿ ದಷ್ಟುಪುಷ್ಟವಾಗಿದ್ದ ಗಂಡು ಚಿರತೆ ನೀರಿನಲ್ಲಿ ಬಿದ್ದಿದೆ. ರಭಸವಾಗಿ ಹರಿಯುವ ಕಾಲುವೆ ನೀರಿನಲ್ಲಿ ಸುಮಾರು ಒಂದು ಕಿ.ಮೀ. ಕೊಚ್ಚಿಕೊಂಡು ಹೋಗಿ ಹೊರ ಬರಲು ಹೋರಾಟ ನಡೆಸಿದ್ದರೂ ಸಾಧ್ಯವಾಗಿಲ್ಲ. ನೀರಲ್ಲೇ ನಿತ್ರಾಣಗೊಂಡು ಅಸುನೀಗಿದೆ.

‘ರಭಸವಾಗಿ ಹರಿಯುವ ನೀರಿನ ಸೆಳೆತಕ್ಕೆ ಸಿಲುಕಿದ ಚಿರತೆಗೆ ಒಳಪೆಟ್ಟು ಹೆಚ್ಚಾಗಿದೆ. ಯಾವುದೇ ರೋಗದಿಂದ ಬಳಲುತ್ತಿರಲಿಲ್ಲ. ನೀರಿನ ರಭಸಕ್ಕೆ ಉಸಿರುಗಟ್ಟಿ ಸಾವನ್ನಪ್ಪಿದೆ. ಅದು, ನಾಲ್ಕು ವರ್ಷದ ಗಂಡು ಚಿರತೆ’ ಎಂದು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಪಶು ಸಹಾಯಕ ವೈದ್ಯಾಧಿಕಾರಿ ಡಾ.ಅಣ್ಣಾರಾವ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಮ್ಮ ಭಾಗದಲ್ಲಿ ದಟ್ಟ ಅರಣ್ಯವು ಇಲ್ಲ, ಚಿರತೆಯ ಸಂತತಿಯೂ ಕಾಣ ಸಿಗುವುದಿಲ್ಲ. ಅಪರೂಪಕ್ಕೆ ಕೆಲವು ವನ್ಯ ಜೀವಿಗಳನ್ನು ಕಾಣುತ್ತೇವೆ. ಆಗಾಗ, ತಾಲ್ಲೂಕು, ಬೇರೆ ಜಿಲ್ಲೆಗಳಲ್ಲಿ ಚಿರತೆ ಪ್ರತ್ಯೇಕ್ಷವಾದ ಬಗ್ಗೆ ಗಾಳಿ ಸುದ್ದಿ ಕೇಳುತ್ತೇವೆ. ನಿಖರವಾಗಿ ಕಂಡಿಲ್ಲ. ಆದರೆ, ಇವತ್ತು ಚಿರತೆ ಒಂದು ಅನಿರೀಕ್ಷಿತವಾಗಿ ಮೃತಪಟ್ಟಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ಸ್ಥಳೀಯರು.

‘ಭೋರುಕಾ ಪ್ಲಾಂಟ್ ಸಮೀಪದ ಹೆಚ್ಚು ಮರ ಹಾಗೂ ಜಾಲಿ ಗಿಡಗಳು ಬೆಳೆದು ದಟ್ಟವಾಗಿ ಹಬ್ಬಿವೆ. ಜನರ ಓಡಾಟವೂ ವಿರಳವಾಗಿರುತ್ತದೆ. ಗೋಗಿ ಗ್ರಾಮದ ಸುತ್ತಲೂ ಚಿರತೆ ದಾಳಿ ಮಾಡಿ ಜಾನುವಾರು, ನಾಯಿಯನ್ನು ಕೊಂದು ಹಾಕಿದೆ ಬಗ್ಗೆ ದೂರೂ ಬಂದಿಲ್ಲ. ಜನರು ಸಹ ಚಿರತೆ ಪ್ರತ್ಯಕ್ಷವಾಗಿ ನೋಡಿದ ಬಗ್ಗೆಯೂ ಯಾರು ತಿಳಿಸಿಲ್ಲ. ವಿದ್ಯುತ್ ಉತ್ಪಾದನೆಗಾಗಿ ಭೋರುಕಾ ಗೇಟ್ ಬಳಿ ತಂತಿ ಬೇಲಿ ಹಾಕಲಾಗಿದೆ. ಹರಿದು ಬಂದ ವಸ್ತು ನಿಲ್ಲುವುದು ಸಾಮಾನ್ಯ. ಚಿರತೆ ಎಲ್ಲಿಂದ ಬಂದಿದೆ ಎಂಬುವುದು ನಮಗೂ ವಿಚಿತ್ರವಾಗಿದೆ’ ಎನ್ನುತ್ತಾರೆ ಸ್ಥಳಕ್ಕೆ ಭೇಟಿ ನೀಡಿದ ಗೋಗಿ ಠಾಣೆಯ ಪಿಎಸ್‌ಐ ಶಿವರಾಜ ಪಾಟೀಲ.

ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಶವ ಸಂಸ್ಕಾರ ಮಾಡಿದರು. ಶಹಾಪುರ ಉಪವಲಯ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ.

ನ್ಯಾಯಾಲಯದ ಮುಂದೆ ಚಿರತೆ ಶವ ಹಾಜರು

ಕಾಲುವೆ ನೀರಿನಲ್ಲಿ ಮುಳಗಿ ಮೃತಪಟ್ಟ ಚಿರತೆಯ ಶವವನ್ನು ಗುರುವಾರ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾ ಪಸ್ತಾಪುರ ಅವರ ಮುಂದೆ ಅರಣ್ಯ ಇಲಾಖೆ ಸಿಬ್ಬಂದಿ ಹಾಜರುಪಡಿಸಿದರು. ನಂತರ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೊಲೊರ್ ಪಿಕಪ್ ವಾಹನದಲ್ಲಿ ತಂದಿದ್ದ ಚಿರತೆಯ ಕಳೆಬರವು ದುರ್ವಾಸನೆ ಬೀರುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.