ADVERTISEMENT

ಸ್ವಚ್ಛತೆ ಕಾಪಾಡುವ ಭಾವನೆ ಬರಲಿ: ಆರ್. ನಾಯ್ಕ್

ಸ್ವಚ್ಛತಾ ಹಿ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಿಇಒ ಅಮರೇಶ ನಾಯ್ಕ್ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:07 IST
Last Updated 26 ಸೆಪ್ಟೆಂಬರ್ 2022, 16:07 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ಆರ್ ನಾಯ್ಕ್ ಅವರು ಶಾಲಾ ಆವರಣದಲ್ಲಿ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಸ್ವಚ್ಛತಾ ಹಿ ಸೇವಾ ಆಂದೋಲನದ ಕುರಿತು ಮಕ್ಕಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಿದರು
ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ಆರ್ ನಾಯ್ಕ್ ಅವರು ಶಾಲಾ ಆವರಣದಲ್ಲಿ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಸ್ವಚ್ಛತಾ ಹಿ ಸೇವಾ ಆಂದೋಲನದ ಕುರಿತು ಮಕ್ಕಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಿದರು   

ಯಾದಗಿರಿ: ಶೌಚಾಲಯ ಬಳಸುವ ಜತೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು. ಆಗ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ. ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಜಿ.ಪಂ. ಸಿಇಒ ಅಮರೇಶ ಆರ್. ನಾಯ್ಕ್ ಹೇಳಿದರು.

ತಾಲ್ಲೂಕಿನ ಅರಕೇರಾ ಕೆ. ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಅರಕೇರಾ ಕೆ. ವತಿಯಿಂದ ಹಮ್ಮಿಕೊಂಡ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಪ್ರಚಾರ ಹಾಗೂ ಸ್ವಚ್ಛತೆ ಕಾಪಾಡಲು ಅ. 2ರ ವರೆಗೆ ಆಯೋಜಿಸಿದ ಸ್ವಚ್ಛತಾ ಹಿ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಚ್ಛತಾ ಹಿ ಸೇವಾ ಆಂದೋಲನದ ಕಾರಣ ಎಲ್ಲಾ ಗ್ರಾಮಗಳಲ್ಲಿ ಕಸ ಸಂಗ್ರಹಣೆ, ಮೂಲದಲ್ಲೇ ಕಸ ವಿಂಗಡಣೆ, ವಿಲೇವಾರಿ ಮತ್ತು ಸ್ವಚ್ಛತಾ ಶ್ರಮದಾನ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಅಧಿಕಾರಿಗಳು, ಜನ ಪ್ರತಿನಿಧಿಗಳು ಗ್ರಾಮವನ್ನು ಕಸ ಮುಕ್ತವನ್ನಾಗಿಸಲು ವಿವಿಧ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ ಸ್ವಚ್ಛತಾ ಹಿ ಸೇವಾ ಆಂದೋಲನ ಯಶಸ್ವಿಗೊಳಿಸಬೇಕು ಎಂದರು.

ADVERTISEMENT

ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆ ಮಾಡಿದೆ. ಗ್ರಾಮಗಳಲ್ಲಿ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಯೋಜನೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಪ್ರಮುಖವಾಗಿದೆ ಎಂದರು.

ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ಒಣ ತ್ಯಾಜ್ಯ ಕೊಳೆಯದೆ ಇರುವ ಪ್ಲಾಸ್ಟಿಕ್, ಬಾಟಲಿ, ಗಾಜು, ರಬ್ಬರ್ ಮನೆ-ಮನೆಯಿಂದ ಸಂಗ್ರಹಿಸಿದ ಕಸ ಸಂಸ್ಕರಿಸಿ ವಿಲೇವಾರಿ ಮಾಡುವ ಜೊತೆಗೆ ಜಲಮೂಲಗಳ ಹತ್ತಿರದ ಪ್ರದೇಶ ಸ್ವಚ್ಛಗೊಳಿಸಿ, ಗಿಡಗಳನ್ನು ನೆಡಬೇಕು. ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ ಮತ್ತು ಬಳಕೆಯಿಂದಾಗುವ ದುಷ್ಪರಿಣಾಮ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಗ್ರಾಮಸಭೆ ಆಯೋಜಿಸಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಎಲ್ಲೆಂದರಲ್ಲಿ ಕಸ ಬೀಸಾಡಬೇಡಿ ಎಂಬ ವಿಷಯ ಕುರಿತು ಸ್ಲೋಗನ್ ಬರೆಯುವ ಸ್ಪರ್ಧೆ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ಈ ವೇಳೆ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಸ್ವಚ್ಛತಾ ಹಿ ಸೇವಾ ಆಂದೋಲನದ ಕುರಿತು ಪ್ರತಿಜ್ಞಾನ ವಿಧಿ ಬೋಧಿಸಲಾಯಿತು.

ಈ ವೇಳೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವೆಂಕಟೇಶ ಬಿ.ಚಟ್ನಳ್ಳಿ, ಯಾದಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಬಿಇಒ ಅಮೃತ ಬಾಯಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಈಶ್ವರಪ್ಪ ನೀರಟಗಿ, ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಕನಕಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೌಲಾಲಿ ಐಕೂರು, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರಾದ ವೆಂಕಟೇಶ ರಾಠೋಡ, ನಾರಾಯಣ ಸಿರ್ರಾ ಚಂಡರಕಿ, ಪಲ್ಲವಿ, ಮಹಾದೇವರಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಸಂಜೀವಮ್ಮ, ಶಾಲಾ ಮುಖ್ಯಗುರು ಜ್ಯೋತಿ, ವಿಷಯ ಪರಿವೀಕ್ಷಕ ಹಣಮಂತ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಪ್ರತಿನಿಧಿ ಕಿರಣಕುಮಾರ, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

***

ಎಷ್ಟು ಜನ ವಿದ್ಯಾರ್ಥಿಗಳ ಮನೆಯಲ್ಲಿ ಶೌಚಾಲಯ ಇಲ್ಲ. ಅಂಥ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡಿ, ಶೌಚಾಲಯ ನಿರ್ಮಿಸಿಕೊಂಡು ಬಳಕೆ ಮಾಡಬೇಕು

ಅಮರೇಶ ಆರ್.ನಾಯ್ಕ್,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.