ADVERTISEMENT

ಕನಕದಾಸರ ದಾರಿಯಲ್ಲಿ ನಡೆಯೋಣ: ಶಾಸಕ ಕರೆ

ಜಿಲ್ಲಾಡಳಿತದಿಂದ ಸಂತ ಕನಕದಾಸ, ಒನಕೆ ಓಬವ್ವ ಜಯಂತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 16:49 IST
Last Updated 11 ನವೆಂಬರ್ 2022, 16:49 IST
ಯಾದಗಿರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಸಂತ ಕವಿ ಕನಕದಾಸ, ವೀರ ರಾಣಿ ಒನಕೆ ಓಬವ್ವ ಜಯಂತ್ಯೋತ್ಸವನ್ನು ಶಾಸಕ ವೆಂಕಟರೆಡ್ಡಿ ಮುದ್ನಾಳ ಉದ್ಘಾಟಿಸಿದರು
ಯಾದಗಿರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಸಂತ ಕವಿ ಕನಕದಾಸ, ವೀರ ರಾಣಿ ಒನಕೆ ಓಬವ್ವ ಜಯಂತ್ಯೋತ್ಸವನ್ನು ಶಾಸಕ ವೆಂಕಟರೆಡ್ಡಿ ಮುದ್ನಾಳ ಉದ್ಘಾಟಿಸಿದರು   

ಯಾದಗಿರಿ: ಕನಕದಾಸರು ಸಾಹಿತ್ಯದ ಮೂಲಕ ಸಮಾಜದ ಸುಧಾರಣೆ ಮಾಡಿದರು. ಜಾತಿ ಪದ್ಧತಿ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರನ್ನು ನೆನೆಯುವುದರ ಜತೆಗೆ ಅವರು ತೋರಿದ ದಾರಿಯಲ್ಲಿ ಸಾಗೋಣ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಸಂತ ಕವಿ ಕನಕದಾಸ, ಒನಕೆ ಓಬವ್ವ ಜಯಂತ್ಯೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯ ಎತ್ತಿ ಹಿಡಿದು ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು. ಜಾತಿ-ವರ್ಗಗಳನ್ನು ಮೀರಿದ ವ್ಯಕ್ತಿಯಾಗಿದ್ದು, ಅವರ ಜಾತ್ಯತೀತ ಮನೋಭಾವನೆಯನ್ನು ಎಲ್ಲಾ ಸಮುದಾಯದವರು ಅರ್ಥ ಮಾಡಿಕೊಂಡು ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.

ADVERTISEMENT

ವೀರ ರಾಣಿ ಒನಕೆ ಓಬವ್ವ ಇತಿಹಾಸದ ಪುಟ್ಟದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಧೀರ ಧೈರ್ಯದಿಂದ ಹೈದರಾಲಿ ಸೈನ್ಯವನ್ನು ಹಿಮ್ಮೆಟ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಇದೇ ವೇಳೆ ಶ್ರೀಶೈಲ ಪೂಜಾರಿ ಉಪನ್ಯಾಸ ನೀಡಿದರು.

ಇದಕ್ಕೂ ಮೊದಲು ನಗರದ ಕನಕ ವೃತ್ತದಲ್ಲಿ ಕನಕ ಮೂರ್ತಿಗೆ ಮಾರ್ಲಾಪಣೆ ಮಾಡಿ ಭಾವಚಿತ್ರದ ಅದ್ಧೂರಿಗೆ ಮೆರವಣಿಗೆ ಹನುಮೇಗೌಡ ಬೀರನಕಲ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಕನಕ ವೃತದಿಂದ ಆರಂಭವಾದ ಭಾವಚಿತ್ರದ ಮೆರವಣಿಗೆ ಪದವಿ ಕಾಲೇಜಿನ ಮಾರ್ಗವಾಗಿ, ಸುಭಾಶ್ಚಂದ್ರ ಬೋಸ್ ವೃತ್ತ, ಶಾಸ್ತ್ರಿ ವೃತ್ತದ ಮಾರ್ಗವಾಗಿ ನಗರದ ವಿದ್ಯಾಮಂಗಲ ಕಾರ್ಯಾಲಯಕ್ಕೆ ಆಗಮಿಸಿತು. ಭಾವಚಿತ್ರದ ಅದ್ದೂರಿಗೆ ಮೆರವಣಿಗೆ ಲಮಾಣಿ ನೃತ್ಯ ಗಮನ ಸೆಳೆಯಿತು. ಯುವಕರು ಡಿಜೆ ಹಚ್ಚಿ ನೃತ್ಯ ಮಾಡಿದರು.

ವೇದಿಕೆ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ, ಸಿದ್ದಣ್ಣಗೌಡ ಕಾಡಂನೋರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಮಲ್ಲಣ್ಣಗೌಡ ಐಕೂರ್, ಯೂಡಾ ಅಧ್ಯಕ್ಷ ರುದ್ರಗೌಡ ಮಾಲಿ ಪಾಟೀಲ, ವೀರಭಭದ್ರಪ್ಪ ಯಡ್ಡಳ್ಳಿ, ಗಾಳೆಪ್ಪ ಪೂಜಾರಿ, ನಗರಸಭೆ ಸದಸ್ಯರಾದ ಶಾಂತಮ್ಮ ಊರಾನೋರ ಇದ್ದರು.

‘ದಿಟ್ಟ ಹೆಜ್ಜೆ ಇಟ್ಟ ಕನಕದಾಸರು’

ಕೆಂಭಾವಿ: ‘ಕನಕದಾಸರು ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟಹೆಜ್ಜೆ ಇಟ್ಟವರು’ ಎಂದು ಪುರಸಭೆ ಸದಸ್ಯ ಶರಣಪ್ಪ ಯಾಳಗಿ ಹೇಳಿದರು.

ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನಕದಾಸರ ಸಂಘದ ಅಧ್ಯಕ್ಷ ರೇವಣಸಿದ್ಧ ಯಾಳಗಿ ಧ್ವಜಾರೋಹಣ ನೆರವೇರಿಸಿದರು.

ಶ್ರೀನಿವಾಸರೆಡ್ಡಿ ಪಾಟೀಲ, ದೇವು ಯಾಳಗಿ, ಮಂಜು ತುಂಬಗಿ, ರಮೇಶ ಕೊಡಗಾನೂರ, ಭೀಮು ಮಲ್ಕಾಫುರ, ಭೀರಪ್ಪ ಪೂಜಾರಿ, ಬಸವರಾಜಪ್ಪ ಪೂಜಾರಿ, ತೋಟಪ್ಪ ಪೂಜಾರಿ, ಮಲ್ಲಣ್ಣ ಯಾಳಗಿ, ಹೈಯಾಳ್ಳಪ್ಪ, ಬಸವರಾಜ ಪ್ರಧಾನಿ, ಸಂಗಣ್ಣ ತುಂಬಗಿ, ಉಮೇಶರೆಡ್ಡಿ, ಪರಶುರಾಮ, ನಿಂಗಣ್ಣ, ಕೆಂಚಪ್ಪ ಹೀರೆಕುರಬರ, ಹಣಮಂತ, ಲಕ್ಷ್ಮಣ, ರಮೇಶ, ಸಿದ್ದು ಶಹಾಪುರ ಇದ್ದರು.

ಬಿಜೆಪಿ ಕಾರ್ಯಾಲಯದಲ್ಲಿ ಕನಕದಾಸರ ಹಾಗೂ ಒನಕೆ ಓಬವ್ವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಗಣ್ಣ ತುಂಬಗಿ, ಶ್ರೀನಿವಾಸರೆಡ್ಡಿ ಯಾಳಗಿ, ಶರಣಪ್ಪ ಯಾಳಗಿ, ರಮೇಶ ಕೊಡಗಾನೂರ, ದೇವು ಯಾಳಗಿ, ಮಂಜು ತುಂಬಗಿ ಇದ್ದರು.

***

ಭಕ್ತಿಗೆ ಸಂತ ಕನಕದಾಸ, ಶೌರ್ಯಕ್ಕೆ ಓಬವ್ವ

ಯಾದಗಿರಿ: ಭಕ್ತಿಗೆ ಸಂತ ಕನಕದಾಸ, ಶೌರ್ಯಕ್ಕೆ ವೀರ ವನಿತೆ ಒನಕೆ ಓಬವ್ವ ಅವರ ಇತಿಹಾಸ ಕನ್ನಕ ನಾಡಿಗೆ ಹೆಮ್ಮೆ ತರುವ ವಿಷಯ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್., ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಂತ ಕನಕದಾಸ ಮತ್ತು ವೀರ ವನಿತೆ ಓಬವ್ವ ಅವರ ಜಯಂತಿ ನಿಮಿತ್ತ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಸಮಾನತೆ, ಶಾಂತಿ, ಸಮಾಜ ಪರಿವರ್ತನೆಗಾಗಿ ಶ್ರಮಿಸಿದ ಹಲವು ದಾರ್ಶನಿಕರಲ್ಲಿ ಭಕ್ತ ಶ್ರೇಷ್ಠರಾದ ಕನಕದಾಸರು ದಾಸ ಸಾಹಿತ್ಯದ ಕೀರ್ತನೆಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ್ದಾರೆ. ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆ ಏನಾದರೂ ಬಲ್ಲಿರಾ.? ಎಂಬ ತತ್ವ ಸಂದೇಶ ನೀಡಿ ಸಮಾಜ ಏಕತೆಗೆ ಶ್ರಮಿಸಿದ ಮಹನ್ ಸಂತರು. ಅಲ್ಲದೆ ನಾನೆಂಬ ಅಹಂಕಾರ ಬಿಟ್ಟಾಗ ಮನುಷ್ಯನಿಗೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬುದು ಭಕ್ತ ಕನಕದಾಸರ ನಂಬಿಕೆ, ಆದ್ದರಿಂದ ಅಹಂಕಾರ ತೊರೆದಾಗ ಮನುಷ್ಯನು ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಓಬವ್ವನ ಸಾಹಸದ ಕತೆ ಎಂದಿಗೂ ಅಜರಾಮರ:
ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿರುವ ಐತಿಹಾಸಿಕ ಸ್ಥಳಗಳಲ್ಲಿ ಗಂಡು ಮೆಟ್ಟಿದ ನಾಡು, ಚಿತ್ರದುರ್ಗವೂ ಒಂದು. ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವ. ಆಕೆಯ ಸಾಹಸದ ಕತೆ ಎಂದಿಗೂ ಅಜರಾಮರ!. ಅಂತಹ ಧೀರ ಮಹಿಳೆ ಜನಿಸಿದ ನಾಡಿನಲ್ಲಿ ನಾವಿರುವುದು ಬಹಳ ಹೆಮ್ಮೆಯ ವಿಚಾರ ಎಂದು ಜಿಲ್ಲಾಧಿಕಾರಿ ನುಡಿದರು.

ಈ ವೇಳೆ ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್.ಎಸ್‌., ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಲಕ್ಷ್ಮೀಕಾಂತ ಒಂಟಿಪೀರ, ಯಾದಗಿರಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಹಣಮಂತರೆಡ್ಡಿ ಇದ್ದರು.

***

ನಗರದಲ್ಲಿ ಕನಕ ಭವನ ನಿಮಾರ್ಣಕ್ಕೆ ₹2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು

-ವೆಂಕಟರೆಡ್ಡಿ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.