ADVERTISEMENT

ರಾಷ್ಟ್ರೀಯ ಲೋಕ ಅದಾಲತ್: ಪತಿ-ಪತ್ನಿ ಒಂದುಗೂಡಿಸಿದ ನ್ಯಾಯಾಲಯ

ಜೀವನಾಂಶ ಕೋರಿ ಬಂದಿದ್ದ ಪತ್ನಿ ಮನವೊಲಿಸಿದ ನ್ಯಾಯಾಲಯ

ಟಿ.ನಾಗೇಂದ್ರ
Published 13 ಜುಲೈ 2025, 3:12 IST
Last Updated 13 ಜುಲೈ 2025, 3:12 IST
ಶಹಾಪುರ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಮರಳಸಿದ್ದರಾಧ್ಯ ಎಚ್.ಜೆ ಭಾಗವಹಿಸಿದ್ದರು. ನ್ಯಾಯಾಧೀಶರಾದ ಹೇಮಾ ಪಸ್ತಾಪುರ, ಶೋಭಾ, ಬಸವರಾಜ ಇದ್ದಾರೆ
ಶಹಾಪುರ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಮರಳಸಿದ್ದರಾಧ್ಯ ಎಚ್.ಜೆ ಭಾಗವಹಿಸಿದ್ದರು. ನ್ಯಾಯಾಧೀಶರಾದ ಹೇಮಾ ಪಸ್ತಾಪುರ, ಶೋಭಾ, ಬಸವರಾಜ ಇದ್ದಾರೆ   

ಶಹಾಪುರ: ಸಂಸಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ದೂರವಾಗಿ ಜೀವನಾಂಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಪತ್ನಿಗೆ ನ್ಯಾಯಾಧೀಶರು ಬುದ್ದಿವಾದ ಹೇಳಿ ಪತಿ-ಪತ್ನಿಯನ್ನು ಶನಿವಾರ ಒಂದುಗೂಡಿಸಿದರು. ಆ ದಂಪತಿ ಮತ್ತೆ ಸಂಸಾರದ ನೊಗ ಹೊರಲು ಅಣಿಯಾಯಿತು.

ಇಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಈ ಮಾನವೀಯ ಘಟನೆ ನಡೆಯಿತು. ನ್ಯಾಯಾಧೀಶರು ರಾಜೀ ಸಂಧಾನದ ಪ್ರಕರಣ ಇತ್ಯರ್ಥಪಡಿಸಿ ಸುಂಖಾತ್ಯಗೊಳಿಸಿದರು. ಇದಕ್ಕೆ ವಕೀಲರು ಸಾಕ್ಷಿಯಾದರು.

ತಾಲ್ಲೂಕಿನ ಗೋಗಿ(ಪಿ) ಗ್ರಾಮದ ಆಸ್ಮಾಬೇಗಂ ಮೂರು ವರ್ಷದ ಹಿಂದೆ ಜೇವರ್ಗಿಯ ವಸೀಂಅಕ್ರಮ ಜೊತೆ ಮದುವೆಯಾಗಿದ್ದರು. ಮೂರು ವರ್ಷದಿಂದ ಪತಿ-ಪತ್ನಿ ಪ್ರತ್ಯೇಕವಾಗಿ ವಾಸವಾಗಿದ್ದರು.

ADVERTISEMENT

‘ಪತಿಯಿಂದ ನನಗೆ ಜೀವನಾಂಶವನ್ನು ಕೊಡಿಸಿ’ ಎಂದು ಕೋರಿ ಪತ್ನಿ ಆಸ್ಮಾಬೇಗಂ ಅರ್ಜಿ ಸಲ್ಲಿಸಿದ್ದರು. ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು ದಂಪತಿಗೆ ಬುದ್ಧಿಮಾತು ಹೇಳಿದರು. ‘ಸಣ್ಣಪುಟ್ಟ ಸಮಸ್ಯೆ ದೊಡ್ಡದು ಮಾಡಿಕೊಂಡು ಬದುಕಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಹೊಂದಾಣಿಕೆ ಜೀವನವೇ ಬದುಕಿನ ರಾಜಮಾರ್ಗ’ ಎಂದು ಕಿವಿಮಾತು ಹೇಳಿದರು. ಅದಕ್ಕೆ ಇಬ್ಬರು ಒಪ್ಪಿಕೊಂಡು ಪ್ರಕರಣ ಇತ್ಯರ್ಥಪಡಿಸಿಕೊಂಡರು.

ಅದರಂತೆ ಇನ್ನೊಂದು ಪ್ರಕರಣವಾದ ಲಕ್ಷ್ಮಿ ಹಾಗೂ ಪ್ರಕಾಶ ನಡುವೆ ಸಂಸಾರದಲ್ಲಿ ಬಿರುಕು ಉಂಟಾಗಿ 10 ವರ್ಷದಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದರು. ರಾಜೀ ಸಂಧಾನದ ಮೂಲಕ ಈ ಪ್ರಕರಣವೂ ಲೋಕ ಅದಾಲತ್‌ನಲ್ಲಿ ಬಗೆಹರಿಯಿತು.

ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಮರಳಸಿದ್ದರಾಧ್ಯ ಎಚ್.ಜೆ ಹಾಗೂ ನ್ಯಾಯಾಧೀಶರಾದ ಹೇಮಾ ಪಸ್ತಾಪುರ, ಶೋಭಾ, ಬಸವರಾಜ, ವಕೀಲರಾದ ಎಸ್.ಶೇಖರ ಸಾಹು, ಮಹ್ಮದಗೌಸ್ ಗೋಗಿ, ಮಲ್ಲಿಕಾರ್ಜುನ ಬುಕ್ಕಲ, ಮೈನುದ್ದೀನ್‌ ಭಾಗವಹಿಸಿದ್ದರು.

ನ್ಯಾಯಾಧೀಶರು ಹಿರಿಯರ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಿ ಬಿರುಕುಮೂಡಿದ್ದ ಸಂಸಾರದಲ್ಲಿ ಮತ್ತೆ ನಂಬಿಕೆ ವಿಶ್ವಾಸವನ್ನು ಮೂಡಿಸಿ ಹೊಸ ಜೀವನಕ್ಕೆ ಅಣಿಯಾಗುವಂತೆ ಮಾಡಿದರು.
– ಲಕ್ಷ್ಮಿ ಖಾನಾಪುರ, ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆ

2,638 ಪ್ರಕರಣಗಳ ಇತ್ಯರ್ಥ

ಶಹಾಪುರ: ನಗರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮೂರು ನ್ಯಾಯಾಲಯ ಸೇರಿ ಒಟ್ಟು 2,638 ಪ್ರಕರಣ ಇತ್ಯರ್ಥಪಡಿಸಿವೆ. ಅಲ್ಲದೇ ₹1.99 ಕೋಟಿ ಮೊತ್ತವನ್ನು ಹೊಂದಾಣಿಕೆ ಮೂಲಕ ಬಗೆಹರಿಸಿದೆ.

ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಹೇಮಾ ಪಸ್ತಾಪುರ ಅವರು ವಿವಿಧ ಸ್ವರೂಪದ 458 ಪ್ರಕರಣಗಳನ್ನು ₹1.56ಕೋಟಿ ಮೊತ್ತದ ಹೊಂದಾಣಿಕೆ ಮೂಲಕ ಬಗೆಹರಿಸಿದ್ದಾರೆ. ಅದರಂತೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಶೋಭಾ ಅವರು 1,039 ಪ್ರಕರಣ ಇತ್ಯರ್ಥ ಪಡಿಸಿ ₹19.92 ಲಕ್ಷ ಮೊತ್ತದ ಹೊಂದಾಣಿಕೆಗೆ ಸೂಚಿಸಿದ್ದಾರೆ.

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು 1141 ಪ್ರಕರಣದಲ್ಲಿ ₹22.87 ಲಕ್ಷ ಪರಿಹಾರದ ಆದೇಶ ನೀಡಿ ಬಗೆಹರಿಸಿದ್ದಾರೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.