
ಯಾದಗಿರಿ: ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಡಿಸೆಂಬರ್ 13ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುವುದು’ ಎಂದು ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ತಿಳಿಸಿದರು.
‘ಪ್ರಸಕ್ತ ವರ್ಷದ ಕೊನೆಯ ಲೋಕ ಅದಾಲತ್ ನಡೆಸಲಾಗುತ್ತಿದ್ದು, 6,400ಕ್ಕೂ ಅಧಿಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡುವ ಗುರಿ ಹಾಕಿಕೊಂಡಿದ್ದೇವೆ. ಕಳೆದ ಮೂರು ಲೋಕ ಅದಾಲತ್‌ಗಳಿಂದ ಸುಮಾರು 17 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಅದಾಲತ್‌ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ವೈವಾಹಿಕ, ಕೌಟುಂಬಿಕ, ಚೆಕ್ ಅಮಾನ್ಯ, ಜಿಲ್ಲಾ ಗ್ರಾಹಕ ವೇದಿಕೆಯಲ್ಲಿನ ವ್ಯಾಜ್ಯಗಳು, ವೇತನ ಭತ್ಯೆ, ಕೈಗಾರಿಕಾ ಕಾರ್ಮಿಕ ವೇತನ, ಬ್ಯಾಂಕ್‍ಗಳಿಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು’ ಎಂದು ವಿವರಿಸಿದರು.
‘ಸಣ್ಣ ಪುಟ್ಟ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾದರೆ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಯಾವುದೇ ವಕೀಲರು ಇಲ್ಲದೆಯೂ ಎರಡೂ ಪಕ್ಷಗಳು ಪಾಲ್ಗೊಳ್ಳಬಹುದು. ಇದರಿಂದ ಸಮಯ, ಹಣದ ಉಳಿತಾಯ ಆಗಲಿದೆ’ ಎಂದರು.
‘ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಮರು ಪಾವತಿಸಲಾಗುವುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕೆ ಇದೊಂದು ಉತ್ತಮ ಅವಕಾಶ. ದೂರುದಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಪ್ರಸ್ತುತ ಲೋಕ ಅದಾಲತ್‌ನಲ್ಲಿ 3,700 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇತ್ಯರ್ಥ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗಾಗಲೇ 450ಕ್ಕೂ ಹೆಚ್ಚು ಪ್ರಕರಣಗಳ ರಾಜಿ ಸಂಧಾನವಾಗಿದೆ. ಅತ್ಯಂತ ಕ್ಲಿಷ್ಟವಾದ 277 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಒಮ್ಮೆ ರಾಜಿಯಾದರೆ ಮತ್ತೆ ವಾಪಸ್ ಬರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಉಪಸ್ಥಿತರಿದ್ದರು.
‘15ರಿಂದ ಕಾಯಂ ಜನತಾ ನ್ಯಾಯಾಲಯದ ಪೀಠಾಸನ’
‘ಕಲಬುರಗಿಯಲ್ಲಿ ಜರುಗುವ ಕಾಯಂ ಜನತಾ ನ್ಯಾಯಾಲಯವು ನವೆಂಬರ್ 15ರಿಂದ ಯಾದಗಿರಿಯಲ್ಲಿಯೂ ಪೀಠಾಸನ ಮಾಡಲಿದ್ದು ತಿಂಗಳಲ್ಲಿ ಎರಡ್ಮೂರು ಬಾರಿ ವಿಚಾರಣೆ ನಡೆಸಿ ಸ್ಥಳೀಯವಾಗಿ ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗುವುದು’ ಎಂದು ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹೇಳಿದರು.
‘ಕಲಬುರಗಿ ಪೀಠದಲ್ಲಿ ಯಾದಗಿರಿಯ ಸುಮಾರು 2000 ಪ್ರಕರಣಗಳಿವೆ. ಅವುಗಳನ್ನು ನಮ್ಮ ಪೀಠಕ್ಕೆ ಹಂತ– ಹಂತವಾಗಿ ಹಸ್ತಾಂತರಿಸಿಕೊಳ್ಳಲಾಗುವುದು. ಈಗಾಗಲೇ ಯಾದಗಿರಿ ಕಾಯಂ ಜನತಾ ನ್ಯಾಯಾಲಯದಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಲಬುರಗಿ ಪೀಠದ ನ್ಯಾಯಾಧೀಶ ಎಸ್. ಎಲ್. ಚವ್ಹಾಣ್ ಅವರು ಯಾದಗಿರಿಗೆ ಬಂದು ವಿಚಾರಣೆ ಮಾಡುವರು. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ನಮ್ಮಲ್ಲಿಯೇ ಪೀಠ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಆರೋಗ್ಯ ತಪಾಸಣೆ ಶಿಬಿರ ಮುಗಿದಿದ್ದು ಸುಮಾರು 70 ಅಂಗವಿಕಲರಿಗೆ ಸಲಕರಣೆ ವಿತರಣೆ ಎನ್‌ಜಿಒ ಸಹಯೋಗದಲ್ಲಿ ಅಂಗಾಂಗ ದಾನ ಕಾರ್ಯಕ್ರಮ ಆಯೋಜಿಸುವ ಗುರಿ ಇದೆ–ಮರುಳಸಿದ್ದಾರಾಧ್ಯ ಎಚ್.ಜೆ., ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.