
ಯಾದಗಿರಿಯ ಹೊಸ ಬಸ್ ನಿಲ್ದಾಣಕ್ಕೆ ಭಾನುವಾರ ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ್ ಅವರು ಭೇಟಿ ನೀಡಿದ ಕೆಕೆಆರ್‌ಟಿಸಿ ಅಧಿಕಾರಿಗೆ ಎಚ್ಚರಿಕೆ ನೀಡಿದರು
ಯಾದಗಿರಿ: ಬಸ್ ನಿಲ್ದಾಣದ ಮಳಿಗೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ, ಕುಡಿಯವ ನೀರಿನ ಕೊರತೆ, ಗಲೀಜು ಶೌಚಾಲಯ, ಮಹಿಳಾ ಶೌಚಾಲಯಕ್ಕೂ ಪುರುಷರಿಂದ ಹಣ ಸ್ವೀಕಾರ, ಎಲ್ಲೆಂದರಲ್ಲಿ ಖಾಸಗಿ ವಾಹನಗಳ ನಿಲುಗಡೆ, ನಿಗದಿಗಿಂತ ಹೆಚ್ಚುವರಿ ಪಾರ್ಕಿಂಗ್ ಶುಲ್ಕದಂತಹ ಅವ್ಯವಸ್ಥೆ ಕಂಡು ಬೆಂಗಳೂರಿನ ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ್ ಅವರು ಕೆಕೆಆರ್‌ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಚವ್ಹಾಣ್ ನೇತೃತ್ವದ ತಂಡ ಭಾನುವಾರ ಬೆಳಿಗ್ಗೆ ಏಕಾಏಕಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಿಲ್ದಾಣದಲ್ಲಿನ ಅವ್ಯವಸ್ಥೆ ಕಂಡು ಇದು ಜಿಲ್ಲಾ ಕೇಂದ್ರದಲ್ಲಿನ ಬಸ್ ನಿಲ್ದಾಣವೇ ಎಂದು ಅಚ್ಚರಿ ವ್ಯಕ್ತಪಡಿಸಿದರು. ‘ಆದಷ್ಟು ಬೇಗ ಅವ್ಯವಸ್ಥೆಯನ್ನು ಸುಧಾರಣೆ ಮಾಡಿಕೊಳ್ಳದೆ ಇದ್ದರೆ ಕ್ರಮಕ್ಕೆ ವರದಿ ಕಳುಹಿಸಿ ಮನೆಗೆ ಕಳುಹಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ನಿಲ್ದಾಣದಲ್ಲಿ ಕಾರುಗಳ ಪಾರ್ಕಿಂಗ್‌ಗೆ ಅನುಮತಿ ಕೊಡದಿದ್ದರೆ ಶುಲ್ಕ ವಿಧಿಸಲು ಗುತ್ತಿಗೆದಾರರಿಗೆ ಅನುಮತಿಸಿದ್ದು ಏಕೆ? ಶುಲ್ಕ ರಸೀದಿಯಲ್ಲಿ ದಿನಾಂಕ ನಮೂದು ಆಗಿಲ್ಲ, ರಸೀದಿ ಮತ್ತು ಬೋರ್ಡ್‌ನಲ್ಲಿ ಶುಲ್ಕದಲ್ಲಿ ವ್ಯತ್ಯಾಸವಿದೆ ಏನು ಕ್ರಮ ತೆಗೆದುಕೊಂಡಿದ್ದೀರಾ? ಇಷ್ಟು ದಿನವಾದರೂ ಇವ್ಯಾವುದು ಗಮನಕ್ಕೆ ಬಂದಿಲ್ಲವಾ’ ಎಂದು ಪ್ರಶ್ನಿಸಿದರು.
ಪರಿಶೀಲನೆಯ ವೇಳೆ ಮಳಿಗೆಗಳಲ್ಲಿ ಅವಧಿ ಮೀರಿದ ಸ್ವೀಟ್, ಬ್ರೆಡ್, ಬಿಸ್ಕತ್‌ಗಳಂತಹ ಆಹಾರ ಪದಾರ್ಥಗಳು ಕಂಡುಬಂದವು. ಅಂಗಡಿಗಳ ಮಾಲೀಕರು, ನೌಕರರು ತಮಗೆ ಗೊತ್ತೇ ಇಲ್ಲ, ಪರಿಶೀಲಿಸುವುದಾಗಿ ನೆಪ ಹೇಳುತ್ತಿದ್ದಂತೆ ಅವರನ್ನು ಗದರಿಸಿದರು. ಅಲ್ಲಿಯೇ ಇದ್ದ ಕೆಕೆಆರ್‌ಟಿಸಿ ಅಧಿಕಾರಿಗಳನ್ನು ಈ ಬಗ್ಗೆ ಜಾಡಿಸಿದರು.
ನಿಲ್ದಾಣದಲ್ಲಿ ಅಧಿಕಾರಿಗಳ ಮಧ್ಯದಿಂದಲೇ ವ್ಯಾಪಾರಿಯೊಬ್ಬ ನಿಷೇಧಿತ ಕೃತಕ ಬಣ್ಣದ ಬಾಂಬೆ ಮಿಠಾಯಿ (ಕಾಟನ್ ಕ್ಯಾಂಡಿ) ಮಾರುತ್ತಾ ಸಾಗಿದರು. ಇದರಿಂದ ಸುಮ್ಮನೆ ಇದ್ದ ಕೆಕೆಆರ್‌ಟಿಸಿ ಅಧಿಕಾರಿಗಳನ್ನು ಕರೆದ ನ್ಯಾಯಾಧೀಶರು, ‘ನಿಷೇಧಿತ ಪದಾರ್ಥಗಳು ಮಾರುವವರನ್ನು ತಿಳಿಹೇಳಿ ಹೊರ ಕಳುಹಿವುದು ಗೊತ್ತಿಲ್ಲವೆ?’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ‘ನಾನು ಇವತ್ತೇ ಅವನನ್ನು ನೋಡಿದ್ದು’ ಎಂದರು.
ತರಾತುರಿಯಲ್ಲಿ ಬ್ಯಾನರ್ ಅಳವಡಿಕೆ: ಲೋಕಾಯುಕ್ತರ ಭೇಟಿ ಹಿನ್ನೆಲೆಯಲ್ಲಿ ನಿಲ್ದಾಣದ ಮುಂಭಾಗದಲ್ಲಿ ಭ್ರಷ್ಟಾಚಾರ ಸಂಬಂಧಿತ ದೂರು ಸಲ್ಲಿಕೆಗೆ ಲೋಕಾಯುಕ್ತರ ಮೊಬೈಲ್ ಸಂಖ್ಯೆ ಬ್ಯಾನರ್ ಅಳವಡಿಸಿದ್ದಕ್ಕೂ ಸಿಬ್ಬಂದಿ ಪೇಚಿಗೆ ಸಿಲುಕಿದರು.
‘ನಾವು ಬರುತ್ತೇವೆ ಎಂದು ಕೆಲಸ ಮಾಡುವ ಬದಲು ನಿಮ್ಮ ಮನಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ. ಪ್ರತಿ ತಿಂಗಳು ಸ್ಯಾಲರಿ ತೆಗೆದುಕೊಳ್ಳುತ್ತಿರಾ, ಸರಿಯಾಗಿ ಕೆಲಸ ಮಾಡಲು ಏನು ದಾಡಿ? ಒಂದು ವಾರ ಇಲ್ಲಿಯೇ ಇರುತ್ತೇನೆ, ಸುಧಾರಣೆ ಕಾಣದೆ ಇದ್ದರೆ ಬೆಲೆ ತೆರಬೇಕಾಗುತ್ತೆ’ ಎಂದು ಎಚ್ಚರಿಕೆ ಕೊಟ್ಟರು.
ಲೋಕಾಯುಕ್ತ ಡಿಎಸ್‌ಪಿಗಳಾದ ಜೆ.ಎಚ್.ಇನಾಮದಾರ, ಮಲ್ಲಿಕಾರ್ಜುನ ಚುಕ್ಕಿ, ಪೂವಯ್ಯ ಕೆ.ಪಿ., ಪಿಐಗಳಾದ ಸಂಗಮೇಶ, ಗೋವಿಂದರಾಜ,ಉಮಾ ಮಹೇಶ,ಕಲ್ಲಪ್ಪ ಬಡಿಗೇರ,ಭೀಮನಗೌಡ ಬಿರಾದಾರ,ಸುನಿಲ್ ಮೇಗಲಮನಿ,ಬಸವರಾಜ ಬುದನಿ,ಪ್ರಭುಲಿಂಗಯ್ಯ ಹಿರೇಮಠ, ಸಿಬ್ಬಂದಿ ಅಮರನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
‘ಶೌಚಾಲಯ ಗಲೀಜು’
‘ಹಳೇ ಬಸ್ ನಿಲ್ದಾಣದಲ್ಲಿ ₹ 3 ಶುಲ್ಕವೆಂದು ಬರೆದು ₹ 10 ಪಡೆಯುತ್ತಿದ್ದಾರೆ. ಒಂದು ರೂಪಾಯಿ ಕಡಿಮೆ ಕೊಟ್ಟರೆ, ಗಲಾಟೆ ಮಾಡಿ ಮೊಬೈಲ್ ಅಡಾ ಇರಿಸುವಂತೆ ತಾಕೀತು ಮಾಡುತ್ತಾರೆ. ಸರಿಯಾದ ಸ್ವಚ್ಛತೆಯೂ ಇಲ್ಲ’ ಎಂದು ಪ್ರಯಾಣಿಕ ಕಾಶಪ್ಪ ಅವರು ನ್ಯಾಯಾಧೀಶರಿಗೆ ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಗುತ್ತಿಗೆದಾರನಿಗೆ ₹ 2 ಲಕ್ಷ ದಂಡ ಹಾಕಿ, ಫೋನ್ ಮಾಡಿದರೂ ಬಂದಿಲ್ಲ. ಕಾಂಟ್ರ್ಯಾಕ್ಟರ್ ರದ್ದು ಮಾಡಿದರೆ ಬೇರೆ ಯಾರೂ ಬರುವುದಿಲ್ಲ’ ಎಂದು ಕಾರಣ ಹೇಳಿದಕ್ಕೆ ಸಿಟ್ಟಾದ ನ್ಯಾ. ಚವ್ಹಾಣ್, ‘ಟೆಂಡರ್ ನಿಯಮ ಉಲ್ಲಂಘಿಸಿದ್ದನ್ನು ಮುಂದಿಟ್ಟುಕೊಂಡು ರದ್ದು ಮಾಡುವ ಅಧಿಕಾರವಿದೆ. ಮೊದಲು ಅವರನ್ನು ತೆಗೆದು ಬೇರೆಯವರಿಗೆ ಕೊಡಬೇಕು’ ಎಂದು ತಾಕೀತು ಮಾಡಿದರು.
‘ಯಿಮ್ಸ್’ ಜಿಲ್ಲಾ ಮಟ್ಟದ ಆಸ್ಪತ್ರೆಯಾ..!
‘ಬೆಡ್‌ಗಳ ಕವರ್ ಕಿತ್ತು ಹೊರ ಬಂದ ಸ್ಪಾಂಜ್, ಮೂರು ದಿನವಾದರೂ ಬದಲಾಯಿಸದ ರೋಗಿಗಳ ಬೆಡ್, ಕಿಟಕಿ ಪಕ್ಕದಲ್ಲಿಯೇ ಬಿದ್ದಿರುವ ಕಸದ ರಾಶಿ, ದೂಳು ಹಿಡಿದ ಕಿಟಕಿ, ಫ್ಯಾನ್‌ಗಳು, ಔಷಧಿ ಉಗ್ರಾಣದಲ್ಲಿ ಇಲ್ಲದ ಫ್ರಿಜ್, ಗಣಕೀಕೃತವಾಗದ ಮೆಡಿಕಲ್‌ನ ಔಷಧಿಗಳು, ಪ್ರತಿಯೊಂದಕ್ಕೂ ಸಿಬ್ಬಂದಿ ಕೊರತೆಯ ಸಬೂಬು ಕೇಳಿಸಿಕೊಂಡು ಬೇಸರವಾದ ಲೋಕಾಯುಕ್ತರ ತಂಡ, ‘ಇದು ಜಿಲ್ಲಾ ಮಟ್ಟದ ಆಸ್ಪತ್ರೆಯಾ, ಲೋಕಲ್ ತಾಲ್ಲೂಕು ಆಸ್ಪತ್ರೆಯಾ’ ಎಂದು ಉದ್ಘಾರ ತೆಗೆದರು.
ಬಸ್ ನಿಲ್ದಾಣದ ಬಳಿಕ ನ್ಯಾ.ರಮಾಕಾಂತ ಚವ್ಹಾಣ್ ಅವರ ತಂಡ ‘ಯಿಮ್ಸ್’ ಆಸ್ಪತ್ರೆಗೆ ಭೇಟಿ ನೀಡಿತು. ರೋಗಿಗಳು, ಅಟೆಂಡರ್‌ಗಳಿಂದ ಚಿಕಿತ್ಸೆ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ತಾವು ಕಂಡ ಪ್ರತಿಯೊಂದು ನ್ಯೂನತೆಯನ್ನು ನೋಟ್ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.