ADVERTISEMENT

ಕೃಷಿಗೂ ಸೈ ಎಂದ ಛಾಯಾಗ್ರಾಹಕ ಮಾಚರೆಡ್ಡಿ ಬೋಯಿನ್

ಬಳಿಚಕ್ರ:ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ಮಾಚರೆಡ್ಡಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 19:30 IST
Last Updated 4 ಸೆಪ್ಟೆಂಬರ್ 2020, 19:30 IST
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ರೈತನ ಹೊಲದಲ್ಲಿ ಬೆಳೆದ ಮೆಣಸಿನ ಕಾಯಿಯನ್ನು ಕಟಾವು ಮಾಡುತ್ತಿರುವುದು
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ರೈತನ ಹೊಲದಲ್ಲಿ ಬೆಳೆದ ಮೆಣಸಿನ ಕಾಯಿಯನ್ನು ಕಟಾವು ಮಾಡುತ್ತಿರುವುದು   

ಸೈದಾಪುರ: ಕೊರೊನಾದಂಥ ಸಂದಿಗ್ಧ ಸಂದರ್ಭದಲ್ಲಿ ಮೂಲ ಛಾಯಾಗ್ರಾಹಣ ವೃತ್ತಿಗೆ ಕತ್ತರಿ ಬಿದ್ದರೂ ಎದೆಗುಂದದೆಮಾಚರೆಡ್ಡಿ ಬೋಯಿನ್ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಇದರಲ್ಲಿ ಯಶಸ್ಸು ಕಂಡಿದ್ದಾರೆ.

ಕೊರೊನಾ ಲಾಕ್‌ಡೌನ್‌ ಘೋಷಣೆಯಾದ ಕಾರಣ ಬಳಿಚಕ್ರ ಗ್ರಾಮದ ಮಾಚರೆಡ್ಡಿ ಬೋಯಿನ್ ಅವರ ಛಾಯಾಗ್ರಾಹಕ ವೃತ್ತಿಗೆ ದೊಡ್ಡ ಪೆಟ್ಟು ನೀಡಿತು. ಸಾಕಷ್ಟು ಕಾರ್ಯಕ್ರಮಗಳು ರದ್ದುಗೊಂಡವು. ಇದರಿಂದ ಕೊಂಚ ಆತಂಕವಾಯಿತು. ಆದರೆ, ಅವರು ನಿರಾಸೆಗೊಳ್ಳಲಿಲ್ಲ. 8 ಜನರಿರುವ ಕುಟುಂಬ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳ ತೊಡಗಿದರು. ಆಗ ಅವರಿಗೆ ಹೊಳೆದಿದ್ದೇ ಕೃಷಿ ಚಟುವಟಿಕೆ. ತೋಟಗಾರಿಕೆಬೆಳೆಗಳನ್ನು ಬೆಳೆಯಲು ಮುಂದಾದರು.

ಅವರು ತಮ್ಮ ಸ್ವಂತ 2 ಎಕರೆ ಜಮೀನಿನಲ್ಲಿ ಒಂದು ಕೊಳವೆ ಬಾವಿಯನ್ನು ಕೊರೆಸಿದರು. ನಂತರ ಅಲ್ಲಿ ಹೀರೆಕಾಯಿ, ಬೆಂಡೆಕಾಯಿ, ಡೊಣ್ಣೆ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಚವಳೆಕಾಯಿ, ಅವರೆಕಾಯಿ, ಪಾಲಕ, ಉಣಚಿಕ್‍ಪಲ್ಲೆ, ಟಿಮೆಟೊ, ಬದನೆಕಾಯಿ, ಕೊತ್ತಂಬರಿ, ಪುದಿನಾ, ಈರುಳ್ಳಿ, ಸೇರಿದಂತೆ ಚೆಂಡು ಹೂ, ಸೇವಂತಿ ಹೂಗಳನ್ನು ನಾಟಿ ಮಾಡಿದರು. ಅದರಲ್ಲಿ ಯಶಸ್ಸು ಕಂಡು ಕುಟುಂಬ ನಿರ್ವಹಿಸುತ್ತಿದ್ದಾರೆ.

ADVERTISEMENT

ಕೊರೊನಾ ಅನ್‌ಲಾಕ್‌ ಆದ ಬಳಿಕ ಛಾಯಾಗ್ರಹಣಕ್ಕೆ ಕೆಲ ಕಾರ್ಯಕ್ರಮ ಆಯೋಜಕರಿಂದ ಅವರಿಗೆ ಆಹ್ವಾನ ಬರುತ್ತಿವೆ. ಆ ಕಾರ್ಯಕ್ರಮಗಳ್ನು ನಿರ್ವಹಿಸಿದ ಬಳಿಕ ಪುನಃ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ದೊಣ್ಣೆ ಮೆಣಸಿನಕಾಯಿ ಮತ್ತು ಚೆಂಡು ಹೂ ಸಸಿಗಳನ್ನು ಬಾಗಲಕೋಟೆಯಿಂದ ತಂದು ಇಲ್ಲಿ‌ ನಾಟಿ ಮಾಡಿದ್ದಾರೆ.

‘₹1,000 ದಿಂದ ₹ 1,200 ದರದಲ್ಲಿ ಮೆಣಸಿನಕಾಯಿ, ಬೆಂಡೆಕಾಯಿ, ಅವರೆಕಾಯಿ, ಪಾಲಕ್‌, ಕೊತ್ತಂಬರಿ, ಬೀಜಗಳನ್ನು ತಂದು ಬಿತ್ತನೆ ಮಾಡಿರುವೆ. ಇದರಲ್ಲಿ 500 ಮೆಣಸಿನ ಕಾಯಿ ಸಸಿಗಳನ್ನು 5 ಗುಂಟೆಯಲ್ಲಿ ನಾಟಿ ಮಾಡಿರುವೆ. 3 ಗುಂಟೆಯಲ್ಲಿ ಬೆಂಡೆಕಾಯಿ, 7 ಗುಂಟೆಯಲ್ಲಿ ದೊಣ್ಣೆಮೆಣಸಿನಕಾಯಿ ನಾಟಿ ಮಾಡಿದ್ದು, ಈ ಎಲ್ಲಾ ತರಕಾರಿಗಳು ದಿನಾಲು 20 ರಿಂದ 25 ಕೆಜಿ ಬರುತ್ತವೆ’ ಎಂದು ಮಾಚರೆಡ್ಡಿ ಬೋಯಿನ್ ಹೇಳುತ್ತಾರೆ.

‘ನಮ್ಮ ಗ್ರಾಮದಲ್ಲಿ ತರಕಾರಿಗೆ ಬೇಡಿಕೆ ಹೆಚ್ಚಿರುವುದರಿಂದ ಕೆ.ಜಿಗೆ ₹ 60ರ ದರದಲ್ಲಿ ತಾಯಿಯವರು ಮಾರುತ್ತಾರೆ. ಇದರಿಂದ ನಮಗೆ ದಿನವೂ ₹ 500 ರಿಂದ ₹ 1,000 ಉಳಿತಾಯವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.