ಶಹಾಪುರ: ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ. ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಸಮಾನತೆ ಸಾರಿದ ಮಡಿವಾಳ ಮಾಚಿದೇವರ ತತ್ವ ಆದರ್ಶಗಳು, ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ಸಭಾಭವನದಲ್ಲಿ ಗುರುವಾರ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಅಂಗವಾಗಿ ತಾಲ್ಲೂಕು ಆಡಳಿತ ಮತ್ತು ನಗರಸಭೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕ ಭೀಮಣ್ಣ ಅಂಚೆಸೂಗುರ ಮಾತನಾಡಿ, ‘ಶುದ್ಧ ಕಾಯಕ ಜೀವಿಗಳಾಗಿದ್ದ ಮಡಿವಾಳ ಮಾಚಿದೇವರು 12ನೇ ಶತಮಾನದ ಶರಣರೆಂದರೆ ಮಡಿವಾಳ ಮಾಚಿದೇವರು. ಶಿವಶರಣರ, ಕಾಯಕ ನಿಷ್ಠರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತಿದ್ದರು. ಸೋಮಾರಿಗಳು, ಪರಾವಲಂಬಿಗಳ ಬಟ್ಟೆಗಳನ್ನು ಎಂದಿಗೂ ಮುಟ್ಟುತ್ತಿರಲಿಲ್ಲ ಎಂದರು.
ಮಡಿವಾಳ ಸಮುದಾಯ ಸಣ್ಣದು, ಆದರೆ ಅವರು ಮಾಡುವ ಕಾಯಕ ಶುದ್ಧವಾದದು. ಮೊದಲ ಬಾರಿಗೆ ಬಟ್ಟೆಯಲ್ಲಿನ ಕೊಳೆ ತೆಗೆಯಲು ಸಾಬೂನು ಬಂದಿದ್ದು, ಇದೇ ಸಮುದಾಯದಿಂದ. ಹಿಂದೆ ಸವಳನ್ನು ತೆಗೆದುಕೊಂಡು ಬಟ್ಟೆಯ ಕೊಳೆ ತೆಗೆಯುತ್ತಿದ್ದರು. ಹಿಂದುಳಿದ ಸಮಾಜವಾದ ಮಡಿವಾಳ ಸಮುದಾಯ ಶೈಕ್ಷಣಿಕ, ರಾಜಕೀಯ ಆರ್ಥಿಕವಾಗಿ ಬಲ ಬರುವಂತ ಯೋಜನೆಗಳು ಸರ್ಕಾರ ಜಾರಿಗೊಳಿಸಬೇಕಿದೆ. ಮಡಿವಾಳ ಸಮಾಜಕ್ಕೆ ತನ್ನದೇ ಇತಿಹಾಸವಿದೆ ಎಂದರು.
ಮಡಿವಾಳೇಶ್ವರ ಮಠದ ಶೇಖಪ್ಪ ಸಾಧು ಸಾನ್ನಿಧ್ಯ ವಹಿಸಿದ್ದರು. ತಾ.ಪಂ ಇಒ ಸೋಮಶೇಖರ ಬಿರಾದಾರ, ಖಾಜಾನೆ ಅಧಿಕಾರಿ ಡಾ. ಎಂ.ಎಸ್. ಶಿರವಾಳ, ಸಾಯಬಣ್ಣ ಮಡಿವಾಳಕರ, ಭೀಮರಾಯ ಮುದನೂರ, ನಗರಸಭೆ ಸದಸ್ಯ ಮಹೇಶ ಮಡಿವಾಳ, ಪ್ರಾಚಾರ್ಯ ದೇವಿಂದ್ರಪ್ಪ ಮಡಿವಾಳ, ಮಲ್ಲಿಕಾರ್ಜುನ ಮುದ್ನೂರ, ಮಹಾದೇವಪ್ಪ ಸಗರ, ನಾಗರಾಜ ಮಡಿವಾಳ, ಮಂಜುನಾಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.