ADVERTISEMENT

ಯಾದಗಿರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ವೈರಾಗ್ಯ ಸಂಪನ್ನ ಶಿವನಿಗೆ ಭಕ್ತಿಯ ಸ್ತುತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:38 IST
Last Updated 16 ಫೆಬ್ರುವರಿ 2026, 4:38 IST
ಯಾದಗಿರಿಯ ಬಸವೇಶ್ವರ ನಗರದ ಶಿವನ ದೇಸ್ಥಾನದಲ್ಲಿ ಭಾನುವಾರ ಮಂಗಳಾರತಿ ಪಡೆದ ಭಕ್ತರು  
ಯಾದಗಿರಿಯ ಬಸವೇಶ್ವರ ನಗರದ ಶಿವನ ದೇಸ್ಥಾನದಲ್ಲಿ ಭಾನುವಾರ ಮಂಗಳಾರತಿ ಪಡೆದ ಭಕ್ತರು      

ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಅಮೃತೇಶ್ವರ ದೇವಸ್ಥಾನ, ಲಕ್ಷ್ಮೀ ದೇವಸ್ಥಾನ, ಈಶ್ವರ ಬಸವಣ್ಣ ದೇವಸ್ಥಾನ, ಆಂಜನೇಯ ದೇವಸ್ಥಾನ, ಬಾಲಾಜಿ ದೇವಸ್ಥಾನ, ಸಾಯಿ ಶಿರಡಿ ದೇವಸ್ಥಾನ, ಆತ್ಮಲಿಂಗ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳಲ್ಲಿ ದಿನವಿಡೀ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ಬಿಲ್ವಪತ್ರಾರ್ಚನೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತರು ಶಿವನ ಕುರಿತು ಭಜನೆಗಳು, ಕೀರ್ತನೆಗಳು, ಸ್ತೋತ್ರಗಳ ಪಠಣದೊಂದಿಗೆ ಹರನ ಸ್ಮರಣೆ ಮಾಡಿದರು.

ADVERTISEMENT

ಆಡಂಬರಗಳಿಂದ ಮುಕ್ತನಾಗಿರುವ ಮೃತ್ಯುಂಜಯನಿಗೆ ಭಕ್ತರು ಬಿಲ್ವಪತ್ರಿ, ಹೂ, ಅಗರಬತ್ತಿ ಸಮರ್ಪಿಸಿದರು. ಕೆಲವರು ಬಾಳೆಹಣ್ಣು, ದ್ರಾಕ್ಷಿ, ಕರ್ಜೂರ, ಸೇಬು, ಕಲ್ಲಂಗಡಿ, ಸಪೋಟದಂತಹ ಹಣ್ಣಗಳನ್ನು ಅರ್ಪಿಸಿ ಪರಮ ಪಿತನ ಶ್ರವಣ, ಮನನ ಧ್ಯಾನ ಮಾಡಿ ಶಿವರಾತ್ರಿಯ ಭಕ್ತಿಯ ಸಡಗರದಲ್ಲಿ ಮಿಂದೆದ್ದರು.

ರಾತ್ರಿ ಜಾಗರಣೆ ಆರಂಭಗೊಂಡು ಭಜನೆ, ಶಿವನಾಮ ಸ್ಮರಣೆ, ಪ್ರವಚನ ಕಾರ್ಯಕ್ರಮಗಳು ನಡೆದವು. ಹಲವೆಡೆ ಪ್ರಸಾದ ವಿತರಣೆಯು ನಡೆಯಿತು. ಸೋಮವಾರ ನಸುಕಿನವರೆಗೂ ಜಾಗರಣೆ ಮುಂದುವರಿಯಿತು.‌

ದೀಪಗಳ ಸಾಲಿನಲ್ಲಿ ಓಂಕಾರ: ನಗರದ ಗಂಜ್ ಏರಿಯಾದ ಆತ್ಮಲಿಂಗ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಓಂಕಾರದ ಆಕಾರದಲ್ಲಿ ದೀಪಗಳನ್ನು ಇರಿಸಿ ಶಿವನ ಆರಾಧನೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನಕ್ಕೆ ಕುಟುಂಬಸ್ಥರಾಗಿ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿದರು.  ಮಹಾ ಮಂಗಳಾರುತಿ, ರುದ್ರಾಭಿಷೇಕ, ದೀಪೋತ್ಸವದ ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.

ದೇವಸ್ಥಾನದ ಮುಖ್ಯಸ್ಥೆ ನಾಗಮ್ಮ ಮದ್ರಿಕಿ, ಮಲ್ಲಿಕಾರ್ಜುನ ಮುತ್ಯಾ, ರೇವಣಸಿದ್ಧಯ್ಯ, ಜೈ ಭಾರತ ಮಾತಾ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಬಸವಂತರಡ್ಡಿ ಗೌಡ ಮಲ್ಹಾರ, ಕೃಷ್ಣ ಪಾಂಚಾಳ, ನಾಗರಾಜ ಬೀರನೂರ ಸೇರಿ ಇತರರು ಪಾಲ್ಗೊಂಡಿದ್ದರು.

ಯಾದಗಿರಿ ನಗರದ ಆತ್ಮಲಿಂಗ ದೇವಸ್ಥಾನದಲ್ಲಿ ಭಾನುವಾರ ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ ಭಕ್ತರು

ರಾಮಲಿಂಗೇಶ್ವರರ ಗಂಗಾ ಸ್ನಾನ: 

ತಾಲ್ಲೂಕಿನ ಹತ್ತಿಕುಣಿ ಗ್ರಾಮದ ರಾಮಲಿಂಗೇಶ್ವರ ಜಾತ್ರೆಯು ಮಹಾಶಿವರಾತ್ರಿ ದಿನದಂದು ಶ್ರದ್ಧಾ ಭಕ್ತಿಯಿಂದ ಜರುಗಿತು.

ಭಕ್ತರು ರಾಮಲಿಂಗೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಮುತೈದೆಯರ ಕಳಸ, ವಿವಿಧ ಸಂಗೀತ ವಾದ್ಯಗಳೊಂದಿಗೆ ಗಂಗಾ ಸ್ನಾನಕ್ಕೆ ತೆಗೆದುಕೊಂಡು ಹೋದರು. ಮೆರವಣಿಗೆ ಉದ್ದಕ್ಕೂ ರಾಮಲಿಂಗೇಶ್ವರ ಮಹಾರಾಜ್ ಕೀ ಜೈ ಘೋಷಣೆ ಹಾಕಿ, ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು.

ಪ್ರದೀಪ್‌ಸ್ವಾಮಿ ಅವರು ವಿವಿಧ ಪೂಜೆಗಳನ್ನು ನೆರವೇರಿಸಿ ಮತ್ತೆ ಮೆರವಣಿಗೆಯಲ್ಲಿ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಮಹಾ ರುದ್ರಾಭಿಷೇಕ, ಮಂಗಳಾರತಿ ನೆರವೇರಿಸಲಾಯಿತು.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಭಾನುವಾರ ರಾಮಲಿಂಗೇಶ್ವರರ ಪ‍ಲ್ಲಕ್ಕಿ ಮೆರವಣಿಗೆ ಜರುಗಿತು 
ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದಲ್ಲಿನ ಶಿವನ ಮೂರ್ತಿ

‘ಸರ್ವರಿಗೂ ಸನ್ಮಂಗಳ ತರಲಿ’ 

ಯಾದಗಿರಿ: ‘ಮಹಾಶಿವರಾತ್ರಿ ಪುಣ್ಯದಿನದಂದು ಶಿವನನ್ನು ಭಜಿಸುವ ಸರ್ವರಿಗೂ ಸನ್ಮಂಗಳ ಉಂಟಾಗಲಿ’ ಎಂದು ಅಬ್ಬೆತುಮಕೂರು ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಹೇಳಿದರು. ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಭಾನುವಾರ ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ ಶಿವನ ವಿಶೇಷ ರುದ್ರಾಭಿಷೇಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಭಕ್ತಿಯಿಂದ ಆಚರಿಸುವ ಎಲ್ಲ ಆಚರಣೆಗಳು ಶಿವನಿಗೆ ಸಂಪ್ರೀತಿಯನ್ನು ಉಂಟು ಮಾಡಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಅದಕ್ಕಾಗಿ ಎಲ್ಲರೂ ಶಿವನನ್ನು ಶ್ರದ್ಧೆ ನಿಷ್ಠೆಯಿಂದ ಪೂಜಿಸಬೇಕು’ ಎಂದರು. ‘ಇದೇ 22ರಂದು ವಿಶ್ವಾರಾಧ್ಯರ ರಥೋತ್ಸವ ಜರುಗಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಮಠದಲ್ಲಿ ಪೂರ್ವಸಿದ್ಧತೆ ಕಾರ್ಯಗಳು ಭರದಿಂದ ಸಾಗಿದ್ದು ಅನೇಕ ಭಕ್ತರು ಸೇವಾಧಾರಿಗಳಾಗಿ ಪೂರ್ವ ಸಿದ್ಧತೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು. ಜಾತ್ರೆಯ ಅಂಗವಾಗಿ ವಿಶ್ವಾರಾಧ್ಯರ ಪುರಾಣವನ್ನು ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ ಅವರು ಪ್ರವಚನ ಮಾಡಿದರು. ಮಠದ ವಕ್ತಾರ ಸುಭಾಶ್ಚಂದ್ರ ಕೌಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.