ADVERTISEMENT

ಯಾದಗಿರಿ: ಗ್ರಾಮಗಳ ಸ್ವಚ್ಛತೆಗೆ ‘ಮಹಿಳಾ’ ಪಡೆ ಸಿದ್ಧ

31 ದಿನ ‘ಸ್ವಚ್ಛತಾ ವಾಹಿನಿ’ವಾಹನ ಚಾಲನೆಗೆ ಮಹಿಳೆಯರಿಗೆ ತರಬೇತಿ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಗೂ ಮಾಹಿತಿ

ಬಿ.ಜಿ.ಪ್ರವೀಣಕುಮಾರ
Published 22 ಜುಲೈ 2022, 5:52 IST
Last Updated 22 ಜುಲೈ 2022, 5:52 IST
ಯಾದಗಿರಿ ನಗರ ಹೊರವಲಯದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ ‘ಸ್ವಚ್ಛತಾ ವಾಹಿನಿ’ ತರಬೇತಿ ಪಡೆದ ಮಹಿಳೆಯರು
ಯಾದಗಿರಿ ನಗರ ಹೊರವಲಯದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ ‘ಸ್ವಚ್ಛತಾ ವಾಹಿನಿ’ ತರಬೇತಿ ಪಡೆದ ಮಹಿಳೆಯರು   

ಯಾದಗಿರಿ: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಭಿಯಾನದಡಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು, ಒಣ ಕಸ ಹಾಗೂ ಹಸಿ ಕಸ ವಿಂಗಡಿಸಿ, ಘನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ತೆಗೆದುಕೊಂಡು ಹೋಗಲು ಪ್ರತಿ ಗ್ರಾಮ ಪಂಚಾಯಿತಿಗೆ ತ್ಯಾಜ್ಯ ವಿಲೇವಾರಿ ವಾಹನ ನೀಡಲಾಗಿದ್ದು, ಈಗ ಗ್ರಾಮಗಳ ಸ್ವಚ್ಛತೆಗೆ ಮಹಿಳಾ ಪಡೆ ಸಿದ್ಧವಾಗಿದೆ.

ಹಸಿ, ಒಣ ತ್ಯಾಜ್ಯ ವಿಲೇವಾರಿಗಾಗಿ ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳಿಗೆ ‘ಸ್ವಚ್ಛತಾ ವಾಹಿನಿ’ವಾಹನಗಳನ್ನು ಹಸ್ತಾಂತರಿಸಲಾಗಿದೆ. ಆದರೆ, ಚಾಲಕರಿಲ್ಲದ್ದರಿಂದ ವಾಹನಗಳು ನಿಂತಲ್ಲೇ ನಿಂತಿದ್ದವು. ಈಗ 30 ಮಹಿಳೆಯರಿಗೆ 31 ದಿನ ವಾಹನ ಚಾಲನೆ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಗೆ ಕುರಿತು ಮಹಿಳೆಯರಿಗೆ ತರಬೇತಿ ನೀಡಲಾಗಿದೆ.

‘ಸ್ವಚ್ಛತಾ ವಾಹಿನಿ’ಎಂಬ ಹೆಸರಿನಲ್ಲಿ ವಾಹನಗಳು ಇನ್ಮುಂದೆ ಗ್ರಾಮಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಿವೆ.

ADVERTISEMENT

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಗ್ರಾಮದ ಸ್ವಚ್ಛತೆಯ ನಿರ್ವಹಣೆಯ ಸಲುವಾಗಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರನ್ನು ಸಂಜೀವಿನಿ ಯೋಜನೆಯ ಒಕ್ಕೂಟದ ಮೂಲಕ ಆಯ್ಕೆ ಮಾಡಿ, ಆಯ್ಕೆ ಮಾಡಿದ ಸಂಘದ ಸದಸ್ಯರಿಗೆ 5 ದಿನಗಳ ಕಾಲ ವೈಜ್ಞಾನಿಕವಾಗಿ ಕಸ ಸಂಗ್ರಹಿಸುವ ಮತ್ತು ಬೇರ್ಪಡಿಸುವ ತರಬೇತಿಯನ್ನು ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದಲ್ಲಿ ನೀಡಲಾಗಿದೆ.

ಸ್ವಚ್ಛವಾಹಿನಿಯ ವಾಹನ ಓಡಿಸಲು ಸಂಘದ ಮಹಿಳೆಯರನ್ನು ಆಯ್ಕೆ ಮಾಡಿ ಒಂದು ತಿಂಗಳ ಕಾಲ ವಾಹನ ಚಾಲನೆ ತರಬೇತಿಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಆರ್‌ಎಸ್‌ಇಟಿಐ) ತರಬೇತಿ ಸಂಸ್ಥೆಯ ಮೂಲಕ ನೀಡಲಾಗಿದೆ. ಜತೆಗೆ ವಾಹನ ಚಾಲನಾ ಪರವಾನಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತರಬೇತಿಯ ಪಡೆದ ಸಂಘಗಳ ಸದಸ್ಯರಿಗೆ ಸಂಪೂರ್ಣವಾಗಿ ಗ್ರಾಮದ ಸ್ವಚ್ಛತೆಯ ಜವಾಬ್ದಾರಿಯನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ಏನಿದು ಯೋಜನೆ:ಪ್ರತಿಯೊಂದು ಮನೆ, ಹೋಟೆಲ್, ಅಂಗಡಿಗಳಲ್ಲಿ ಉತ್ಪಾದನೆಯಾಗುವ ಅಥವಾ ಬಳಸಿ ಬಿಸಾಡುವ ವಸ್ತು, ಪದಾರ್ಥಗಳನ್ನು ಕಸವೆಂದು ಪರಿಗಣಿಸಲಾಗಿದೆ. ಈಗಾಗಲೇ ನಗರ ವ್ಯಾಪ್ತಿಗಳಲ್ಲಿ ಕಸ ವಿಲೇವಾರಿ ವಾಹನವಿದ್ದು, ಮನೆ ಮನೆಯಿಂದ ಕಸ ಸಂಗ್ರಹ ಮಾಡಲಾಗುತ್ತದೆ. ಈಗ ಗ್ರಾಮೀಣ ಪ್ರದೇಶದಲ್ಲಿಯೂ ತ್ಯಾಜ್ಯ ವಿಲೇವಾರಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಅದರಂತೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ.

ಕಸ ವಿಲೇವಾರಿಗೆ ಹಣ!:ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕಸ ವಿಲೇವಾರಿಗೆ ಹಣ ನೀಡಬೇಕಾಗಿದೆ. ಮನೆ ಮತ್ತು ಹೋಟೆಲ್‌, ಖಾನಾವಳಿ ಸೇರಿದಂತೆ ಇನ್ನಿತರ ಕಡೆ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲೇ ಚೆಲ್ಲುವಂತೆ ಇಲ್ಲ. ತ್ಯಾಜ್ಯ ವಸ್ತುಗಳನ್ನು ಸ್ವಚ್ಛತಾ ವಾಹಿನಿಗೆ ನೀಡಬೇಕಾಗಿದೆ. ಅವರು ಅದನ್ನು ಘನ ವಿಲೇವಾರಿ ತ್ಯಾಜ್ಯ ಘಟಕಕ್ಕೆ ಕೊಂಡೊಯುತ್ತಾರೆ.

ಈಗಾಗಲೇ ಮಹಿಳಾ ಸ್ವಸಸ್ವಹಾಯ ಸಂಘದವರಿಗೆ ತರಬೇತಿ ನೀಡಲಾಗಿದ್ದು, ಆಯಾ ಗ್ರಾಮ ಪಂಚಾಯಿತಿಗಳು ಸಭೆ ನಡೆಸಿ ಕಸ ವಿಲೇವಾರಿಗೆ ಹಣ ನಿಗದಿ ಮಾಡಬೇಕಾಗಿದೆ. ಅಂದಾಜು ಮನೆಗಳಿಂದ ಕಸ ಸಂಗ್ರಹಿಸಲು ₹10 ರಿಂದ ₹15 ನಿಗದಿ ಪಡಿಸಬಹುದು. ಹೋಟೆಲ್‌ ಮತ್ತು ಇನ್ನಿತರ ಕಡೆಗಳಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾಗುವ ಕಡೆ ₹100 ತನಕ ಹಣ ನಿಗದಿ ಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆರಂಭದ 6–7 ತಿಂಗಳ ತನಕ ಗ್ರಾಮ ಪಂಚಾಯಿತಿಯಿಂದ ಖರ್ಚು ವೆಚ್ಚಗಳನ್ನು ನಿರ್ವಹಿಸುವ ಸಾಧ್ಯತೆ ಇದೆ. ಆದಾದ ನಂತರ ಸ್ವಸಹಾಯ ಸಂಘದವರೆ ವಾಹನದ ಖರ್ಚು, ಚಾಲಕರ, ಕಸ ಬೇರ್ಪಡಿಸುವವರ ವೇತನ ನೋಡಿಕೊಳ್ಳಬೇಕಾಗಿದೆ.

‘ಯಾದಗಿರಿ ನಗರ ಹೊರವಲಯದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ 30 ಜನರಿಗೆ ‘ಸ್ವಚ್ಛತಾ ವಾಹಿನಿ’ ಬಗ್ಗೆ ತರಬೇತಿ ನೀಡಲಾಗಿದೆ. ಗ್ರಾಮೀಣ ಮಹಿಳೆಯರು ಮುಂದೆ ಬಂದಿದ್ದಾರೆ. ಅವರಿಗೆ ಜಾಗೃತಿ ಮೂಡಿಸಲಾಗಿದೆ. ಇವರ ಮೂಲಕ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡಬೇಕಿದೆ. ಎರಡನೇ ಹಂತದ ತರಬೇತಿಯನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು’ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ನಾಯ್ಕ.

ಮಹಿಳಾ ಸ್ವಾವಲಂಬಿಗೆ ದಾರಿ
ಸ್ವಚ್ಛತಾ ವಾಹಿನಿ ವಾಹನಗಳಿಗೆ ಮಹಿಳೆಯರನ್ನೇ ಚಾಲಕರನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ. ಸ್ವಸಹಾಯ ಸಂಘದಿಂದ ಮಹಿಳೆಯರು ತರಬೇತಿ ಪಡೆಸಿದ್ದಾರೆ. ಮುಂದೆ ಅವರೇ ಚಾಲಕರು, ನಿರ್ವಾಹಕರು ಮತ್ತು ಕಸ ವಿಂಗಡಿಸಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

‘ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿದೇ ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ. ಈಗ ಸಮಾಜದಲ್ಲಿ ಪುರುಷನಿಗೆ ಸರಿಸಮಾನಗಿ ಮಹಿಳೆ ನಿಂತಿದ್ದಾಳೆ. ಕಸ ವಿಲೇವಾರಿ ವಾಹನ ಮಹಿಳೆ ಚಾಲನೆ ಮಾಡುವ ಮೂಲಕ ಒಂದು ಸ್ಥಾನ ಮಾನ ಸಿಕ್ಕಿದೆ. ಇದರಿಂದ ಸ್ವಯಂ ದುಡಿಮೆಗೆ ಆಸರೆಯಾಗಿದೆ’ಎಂದು ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಮರೆಮ್ಮಾಯಿ ಸ್ವಸಹಾಯ ಸಂಘದ ಸದಸ್ಯೆ ಸುಮಂಗಲಾ ಹೇಳುತ್ತಾರೆ.

‘ಕಸ ವಿಲೇವಾರಿ ಮಾಡುವವರು ಎಂದು ಅನೇಕರು ಹೀಯಾಳಿಸಬಹುದು. ಆದರೆ, ನಾವು ಗ್ರಾಮವನ್ನು ಸ್ವಚ್ಛವನ್ನಾಗಿ ಮಾಡುವವರು ಆಗಿದ್ದೇವೆ ಎನ್ನುವುದು ಹೆಮ್ಮೆ ಇದೆ. ಮಹಿಳೆಯರು ಸಮಾಜದಲ್ಲಿ ಸೇವೆ ಸಲ್ಲಿಸಲು ಇದೊಂದು ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ಅವರು.

***

‘ಸ್ವಚ್ಛತಾ ವಾಹಿನಿ’ಯ ಸ್ವಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಎಲ್‌ಎಲ್‌ಆರ್‌ ಮಾಡಿಸಲಾಗಿದೆ. ಚಾಲನಾ ಪರವಾನಗಿ ಪಡೆದ ನಂತರ ಆಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
-ಅಮರೇಶ ಆರ್. ನಾಯ್ಕ್‌, ಸಿಇಒ, ಜಿ.ಪಂ

***

ಮಹಿಳೆಯರು ನಾಲ್ಕು ಚಕ್ರಗಳ ವಾಹನವನ್ನು ಚಲಾಯಿಸಲು ತರಬೇತಿ ನೀಡಿದೆ. 31 ದಿನಗಳ ತರಬೇತಿ ಪಡೆದಿದ್ದು, ವಾಹನ ಚಾಲನೆ ಮತ್ತು ವಿಲೇವಾರಿ ಘಟಕ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
-ಸುಮಂಗಲಾ ದೊಡ್ಡ ಸಗರ, ‘ಸ್ವಚ್ಛತಾ ವಾಹಿನಿ’ ವಾಹನ ಚಾಲಕಿ

****

ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ‘ಸ್ವಚ್ಛತಾ ವಾಹಿನಿ’ ವಾಹನ ತರಬೇತಿ, ಘನತ್ಯಾಜ್ಯ ವಿಲೇವಾರಿಗೆ ತರಬೇತಿ ನೀಡಲಾಗಿದೆ. ಇನ್ನು ಮುಂದೆ ಸ್ತ್ರೀಶಕ್ತಿ ಸಂಘದವರೆ ಘಟಕ ನಿರ್ವಹಣೆ ಮಾಡಲು ಅವರ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ
-ಬಸವರಾಜ ಶರಬೈ, ಇಒ, ತಾಲ್ಲೂಕು ಪಂಚಾಯಿತಿ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.