
ಯಾದಗಿರಿ: ದೇಸಿ ಜಿಮ್ನಾಸ್ಟಿಕ್ ಖ್ಯಾತಿಯ ಮಲ್ಲಕಂಬದ ಮೇಲೆ ಸರ್ಕಾರಿ ಬಾಲಕಿಯರ ಹಾಗೂ ಬಾಲಕರ ಬಾಲ ಮಂದಿರದ ಮಕ್ಕಳು ಕಠಿಣ ಪಟ್ಟುಗಳನ್ನು ಲೀಲಾಜಾಲವಾಗಿ ಪ್ರದರ್ಶಿಸಿ ವೀಕ್ಷಕರಿಂದ ಶಹಬ್ಬಾಸ್‌ಗಿರಿಗೆ ಪಾತ್ರರಾಗಿದ್ದಾರೆ.
ಯಾದಗಿರಿ ಗ್ರಾಮೀಣ ಸೊಗಡಿನ ಕಬಡ್ಡಿ, ಕೊಕ್ಕೊಗೆ ಪ್ರಸಿದ್ಧಿಯಾಗಿದೆ. ಮುಂಬೈ ಕರ್ನಾಟಕ ಭಾಗದ ಮಲ್ಲಕಂಬಂದ ಮೇಲೆ ‘ಯಾದವ’ ನಾಡಿನ ಬಾಲ ಮಂದಿರದ ಮಕ್ಕಳು ತಮ್ಮ ವರಸೆಗಳನ್ನು ತೋರಿ, ಕಂಬದ ಮೇಲೆ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಪಾಲಕರನ್ನ ಕಳೆದುಕೊಂಡು ನಿರ್ಗತಿಕರಾದ ಮಕ್ಕಳು ಸರ್ಕಾರಿ ಬಾಲಕಿಯರ ಹಾಗೂ ಬಾಲಕರ ಬಾಲ ಮಂದಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಓದು, ಬರಹದೊಂದಿಗೆ ಕಲೆ, ಕ್ರೀಡೆಯ ಮೂಲಕ ತಮ್ಮ ಹೆಗ್ಗುರುತು ಮೂಡಿಸಲು ಆಸಕ್ತ ಕೆಲ ಮಕ್ಕಳು ಹವಣಿಸುತ್ತಿದ್ದರು. ಅಂತಹ ಗಳಿಗೆಯಲ್ಲಿ ಅವರಿಗೆ ಸಿಕ್ಕವರೇ ಮಲ್ಲಕಂಬದ ಕ್ರೀಡಾಪಟು ರವಿ ಯಳವಾರ.
ಯೂಟ್ಯೂಬ್‌ನಲ್ಲಿ ಮಲ್ಲಕಂಬದ ವಿಡಿಯೊಗಳನ್ನು ನೋಡಿ, ಮರದಲ್ಲಿ ರವಿ ಅವರು ಪ್ರಾಕ್ಟೀಸ್ ಮಾಡುತ್ತಿರುವುದನ್ನು ಜಿಲ್ಲಾ ಪಂಚಾಯಿತಿ ಸಿಇಒ ಗಮನಿಸಿದ್ದರು. ಕುತೂಹಲದಿಂದ ಆತನನ್ನು ವಿಚಾರಿಸಿ, ಆತನ ಕೋರಿಕೆಯಂತೆ ಮಲ್ಲಕಂಬದ ವ್ಯವಸ್ಥೆಯೂ ಮಾಡಿಕೊಟ್ಟರು. ಅದೇ ಮಲ್ಲಕಂಬ ಬಾಲ ಮಂದಿರದ ಮಕ್ಕಳಲ್ಲಿನ ಪ್ರತಿಭೆಗೆ ವೇದಿಕೆಯಾಗಿದೆ.
ರವಿ ಅವರು ಮಲ್ಲಕಂಬ ಹೊತ್ತುಕೊಂಡು ಬಾಲಕಿಯರ ಬಾಲ ಮಂದಿರ ಸಮೀಪದಲ್ಲಿ ನಿತ್ಯ ಸಂಜೆ ಆಸಕ್ತ ಬಾಲಕಿಯರಿಗೆ ತರಬೇತಿ ನೀಡಿದರು. ಅವರೊಂದಿಗೆ ಬಾಲಕರೂ ಸೇರಿದರು. ತರಬೇತುದಾರನ ಆಣತಿಯಂತೆ ಸುರೇಖಾ, ಭವಾನಿ, ಸಹನಾ, ಲಕ್ಷ್ಮಿ, ವಿಜಯಲಕ್ಷ್ಮಿ ಹಾಗೂ ಯಲ್ಲಮ್ಮ ಮಲ್ಲಕಬಂದ ಕಸರತ್ತುಗಳನ್ನು ಕರಗತ ಮಾಡಿಕೊಂಡಿದ್ದಾರೆ.
ಬಾಲಕರ ಬಾಲ ಮಂದಿರದ ಕಾಳಪ್ಪ, ಮಧು, ರಿಯಾಜ್, ಆಕಾಶ, ತಿಮ್ಮಯ್ಯ, ಶಿವಸಾಯಿರೆಡ್ಡಿ, ಶ್ರೀನಿವಾಸ ಮತ್ತು ಮೌನೇಶ ಮೈನವಿರೇಳಿಸುವಂತೆ ಸಮತೋಲನದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇವರೊಂದಿಗೆ ಪೋಷಕರ ಹೊಂದಿರುವ ಇತರೆ ಮಕ್ಕಳು ಸಹ ಪ್ರದರ್ಶನ ಕೊಟ್ಟು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.
‘ಬಾಲ ಮಂದಿರದ ಮಕ್ಕಳು ಬೇರೆ ಮಕ್ಕಳಿಗಿಂತ ತುಸು ಭಿನ್ನವಾಗಿ ಯೋಚಿಸುತ್ತಾರೆ. ತಮ್ಮ ಹಿಂದೆ ಯಾರೂ ಇಲ್ಲ ಎಂಬ ಅಳಕು ಅವರಲ್ಲಿ ಇದ್ದರೂ ಹೇಳಿದ್ದನ್ನು ಬೇಗ ಗ್ರಹಿಸಿಕೊಂಡು, ಕಂಬದ ಮೇಲೆ ಅದನ್ನು ಪ್ರದರ್ಶಿಸುತ್ತಾರೆ. ಪ್ರತಿಭೆಯ ಮೂಲಕ ಗುರುತಿಸಿಕೊಳ್ಳುವ ಹಂಬಲದಿಂದಾಗಿಯೇ ಇವತ್ತು ನನ್ನ ತಂಡದ 40 ಜನರಲ್ಲಿ ಅವರೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ’ ಎನ್ನುತ್ತಾರೆ ತರಬೇತುದಾರ ರವಿ.
‘ಕಲ್ಯಾಣ ಕರ್ನಾಟಕ ಉತ್ಸವ, ಕನ್ನಡ ರಾಜ್ಯೋತ್ಸವ, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದಾಗ ಜನರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಔಡಲ ಎಣ್ಣೆ ಸವರಿದ ಕಂಬದ ಮೇಲೆ ಸರಸರನೇ ಏರಿ ಹ್ಯಾಂಡ್‌ಸ್ಟ್ಯಾಂಡ್, ಪಿರಮಿಡ್, ವಿ–ಷಡಲ್, ಸೂರ್ಯನಮಸ್ಕಾರ, ಟಿ–ಬ್ಯಾಲನ್ಸ್ ಮಾಡಿ ಜನರ ಮನಸ್ಸು ಗೆಲ್ಲುತ್ತಿದ್ದಾರೆ’ ಎಂದರು.
ನಮ್ಮ ಬಾಲ ಮಂದಿರ ಬಾಲಕಿಯರು ಮಲ್ಲಕಂಬದಂತಹ ಕ್ರೀಡೆಯಲ್ಲಿ ಪ್ರದರ್ಶನ ನೀಡಿ ಮೆಚ್ಚಿಗೆ ಪಡೆದಿರುವುದು ನೋಡಿದರೆ ನಮಗೂ ಖುಷಿಯಾಗುತ್ತದೆಶಿಲ್ಪಾ ರಾಣಿ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ
ಮಲ್ಲಕಂಬದಲ್ಲಿ ಪ್ರದರ್ಶನ ನೀಡುವ ಮಕ್ಕಳನ್ನು ನೋಡಿ ಬೇರೆ ಮಕ್ಕಳು ಸಹ ಯಾವುದಾದರು ಕ್ರೀಡೆ ಕಲೆಯಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ನೀಡಲು ಮುಂದೆ ಬರುತ್ತಿದ್ದಾರೆಮಲ್ಲಿಕಾರ್ಜುನ ಹೂಗಾರ ಸರ್ಕಾರಿ ಬಾಲಕರ ಬಾಲ ಮಂದಿರದ ಸೂಪರಿಂಟೆಂಡೆಂಟ್
ಮಲ್ಲಕಂಬ ಮತ್ತು ಯೋಗಾಸನಲ್ಲಿ ತೊಡಗಿಸಿಕೊಂಡ ಬಳಿಕ ಓದಿನಲ್ಲಿ ಏಕಾಗ್ರತಿ ಮೂಡಿ ಪಾಠಗಳು ಬೇಗ ಅರ್ಥ ಆಗುತ್ತಿವೆ. ವಿಶ್ವಾಸವೂ ಮೂಡಿದೆಲಕ್ಷ್ಮಿ ಮಲ್ಲಕಂಬ ಕ್ರೀಡಾಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.