ADVERTISEMENT

‘ರೈತರ ಅನುಕೂಲಕ್ಕೆ ಉತ್ಪಾದಕರ ಸಂಸ್ಥೆ’

ರೈತ ಮೋರ್ಚಾದಿಂದ ರೈತ ಉತ್ಪಾದಕರ ಸಂಸ್ಥೆಗಳ ಪ್ರಚಾರಾಂದೋಲನ ಸಭೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 3:21 IST
Last Updated 3 ಏಪ್ರಿಲ್ 2021, 3:21 IST
ಯಾದಗಿರಿಯಲ್ಲಿ ನಡೆದ ರೈತ ಉತ್ಪಾದಕರ ಸಂಸ್ಥೆಗಳ ಪ್ರಚಾರಾಂದೋಲನ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿದರು
ಯಾದಗಿರಿಯಲ್ಲಿ ನಡೆದ ರೈತ ಉತ್ಪಾದಕರ ಸಂಸ್ಥೆಗಳ ಪ್ರಚಾರಾಂದೋಲನ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿದರು   

ಯಾದಗಿರಿ: ಸಣ್ಣ ಮತ್ತು ಅತಿಸಣ್ಣ ರೈತರನ್ನು ಒಟ್ಟುಗೂಡಿಸಿ ಅವರ ಉತ್ಪಾದನೆ ಹಾಗೂ ಮಾರುಕಟ್ಟೆ ಸಾಮರ್ಥ್ಯ ವೃದ್ಧಿಸಲು ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸುವುದು ಹೆಚ್ಚು ಸೂಕ್ತವೆಂದು ಪರಿಗಣಿಸಿ ಸರ್ಕಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸುಮಾರು 500 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಡಾ.ರವಿಕುಮಾರ್ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ರೈತ ಮೋರ್ಚಾ ವತಿಯಿಂದ ರೈತ ಉತ್ಪಾದಕರ ಸಂಸ್ಥೆಗಳ ಪ್ರಚಾರಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ 2013ರಲ್ಲಿ 1956ರ ಕಂಪನಿ ಕಾಯ್ದೆಗೆ ತಿದ್ದುಪಡಿ ತಂದು ಕಂಪನಿ ಕಾಯ್ದೆಯಡಿಯಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ನೋಂದಾಯಿಸಲು ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯವೂ ರೈತರ ಏಳಿಗೆಗಾಗಿ ರೈತ ಉತ್ಪಾದಕರ ಸಂಸ್ಥೆಗಳನ್ನು ಉತ್ತೇಜಿಸಲು 2018 ರಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ನೀತಿಯನ್ನು ರೂಪಿಸಿ ವಿವಿಧ ಅಭಿವೃದ್ಧಿ ಇಲಾಖೆಗಳ ಮುಖಾಂತರ ರೈತ ಉತ್ಪಾದಕರ ಸಂಸ್ಥೆಗಳನ್ನು ಉತ್ತೇಜಿಸುತ್ತಿದೆಎಂದರು.

ADVERTISEMENT

ರೈತ ಉತ್ಪಾದಕರ ಸಂಸ್ಥೆಗಳಿಂದ ರೈತರಿಗಾಗುವ ಲಾಭಗಳನ್ನು ಮನಗಂಡು ನಬಾರ್ಡ್ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಿ ಬಲಪಡಿಸುವ ಯೋಜನೆ ರೂಪಿಸಿದೆ. ರೈತ ಉತ್ಪಾದಕರ ಸಂಸ್ಥೆಗಳ ರಚನೆ ಮತ್ತು ಅಭಿವೃದ್ಧಿಗೆ ಅಗತ್ಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಉದ್ದೇಶಿಸಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪಗೌಡ ಪಾಟೀಲ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಅಧಿಕವಾಗಿ ಭತ್ತ ಬೆಳೆಯುತ್ತಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಅನ್ನ ನೀಡುವ ರೈತರು ದೇವರಿಗೆ ಸಮಾನ ಎಂದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶೇಖರ್ ದೊರಿ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೆಂದ್ರನಾಥ ನಾದ ಮತ್ತು ವೆಂಕಟರೆಡ್ಡಿ ಅಬ್ಬೆತುಮಕೂರು, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪುರ, ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಧರ್ಮಣ್ಣ ದೊಡ್ಡಮನಿ, ಮರೆಪ್ಪ ಪ್ಯಾಟಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಶಶಿಕುಮಾರ್, ಶರಣುಗೌಡ ಮದರಕಲ್, ಶಕುಂತಲಾ ಗುಜಲೂರ, ಶ್ರೀದೇವಿ ಶೆಟ್ಟಳ್ಳಿ ಇದ್ದರು. ನಾಗನಗೌಡ ಕನ್ಯಾಕೊಳ್ಳೂರು ನಿರೂಪಿಸಿದರು. ಚಂದ್ರು ಮುಂಡರಗಿ ಸ್ವಾಗತಿಸಿದರು. ಶಂಕರ್ ಕರಣಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.