
ಕುಕನೂರು: ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನವು ಸಹಸ್ರಾರು ಭಕ್ತಾದಿಗಳನ್ನು ಸೆಳೆವ, ಪವಾಡ ಪುಣ್ಯ ತಾಣವಾಗಿದೆ. ಇದು ಪುರಾತನ ದೇವಸ್ಥಾನವಾಗಿದ್ದು ಸುಂದರ ಕೆತ್ತನೆ, ಕಲಾಕೃತಿಗಳು ಹಾಗೂ ಮೂರ್ತಿ ಪ್ರತಿಷ್ಠಾಪನೆ ಐತಿಹಾಸಿಕ ಚಾರಿತ್ರೆಯನ್ನು ಹೊಂದಿದೆ.
‘ಇಟಗಿಗೆ ತೆಗೆದುಕೊಂಡು ಹೋಗುತ್ತಿದ್ದ ಹನುಮಂತನ ಮೂರ್ತಿಯನ್ನು ಕತ್ತಲು ಆದ ಕಾರಣ, ಮಸಬಹಂಚಿನಾಳ ಗ್ರಾಮದ ಹೊರವಲಯದಲ್ಲಿ ಇರಿಸಿ ವಸತಿ ಮಾಡಲಾಯಿತು. ಮರು ದಿನ ಇಟಗಿಗೆ ತೆಗೆದುಕೊಂಡು ಹೋಗಲು ಎತ್ತಿದಾಗ ಮೂರ್ತಿಯು ಆ ಸ್ಥಳದಿಂದ ಮೇಲಕ್ಕೆ, ಮುಂದಕ್ಕೆ ಸರಿಯಲಿಲ್ಲ ಅಂದಿನಿದ ಆ ಮೂರ್ತಿಯನ್ನು ಇಲ್ಲಿಯೆ ಪೂಜೆ ಮಾಡಲಾಗುತ್ತಿದೆ’ ಎಂದು ಹಿರಿಯರು ತಿಳಿಸಿದರು.
ವಾಸ್ತವವಾಗಿ ಹನುಮಂತನ ಮೂರ್ತಿಯು ದಕ್ಷಿಣಾಭಿಮುಖವಾಗಿ ಇರುತ್ತವೆ. ಆದರೆ ಇಲ್ಲಿನ ವೈಶಿಷ್ಟ್ಯವೆಂದರೆ ಮೂರ್ತಿಯು ಪಶ್ಚಿಮಾಭಿಮುಖವಾಗಿ ಇದೆ.
ಶನಿವಾರ ಮತ್ತು ಪ್ರತಿ ಅಮಾವಾಸ್ಯೆಯಂದು ರಾಜ್ಯದ ವಿವಿದ ಕಡೆಯಿಂದ ಭಕ್ತರು ಆಗಮಿಸುತ್ತಾರೆ. ಅವರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿರುತ್ತದೆ. ಭಕ್ತರು ಅಂದು ರಾತ್ರಿ ಅಲ್ಲಿಯೇ ಮಲಗಿ ಮರುದಿನ ಬೆಳಿಗ್ಗೆ ಮಜ್ಜಲ ಭಾವಿಯಲ್ಲಿ ಸ್ನಾನ ಮಾಡಿಕೊಂಡು ಬಂದು ದೇವರ ದರ್ಶನ ಪಡೆಯುತ್ತಾರೆ. ಇದರಿಂದ ಅವರ ಅನೇಕ ರೋಗ ರುಜಿನೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ.
ಇಲ್ಲಿನ ಗ್ರಾಮಸ್ಥರು ದೇವಸ್ಥಾನದ ಗೋಪುರಕ್ಕಿಂತ ಎತ್ತರಕ್ಕೆ ಮನೆಕಟ್ಟುವದಿಲ್ಲ ಎನ್ನುವುದು ಒಂದು ವಿಶೇಷ.
ಕಾರ್ತಿಕ ಮಾಸದಲ್ಲಿ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ಜಾತ್ರೆ ನಂತರ ಉಳಿದ ದೇವರ ಕಾರ್ತಿಕಗಳು ಜರುಗುತ್ತವೆ. ನ.10ರಂದು ಸೋಮವಾರ ಜಾತ್ರೆ ಜರುಗಲಿದೆ. ಕುಂಕುಮಾರ್ಚನೆ, ಎಲೆಪೂಜೆ, ದಾಸೋಹ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.
ಪಾದಯತ್ರೆಯ ಮೂಲಕ ಅನೇಕ ಭಕ್ತರು ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿ ಲಕ್ಷ ದೀಪೋತ್ಸವ ಆಚರಿಸುತ್ತಾರೆ. ಇಟಗಿ ಮಹೇಶ್ವರ ಭಜನಾ ಸಂಘ, ಮಂಡಲಗಿರಿ ವೀರೇಶ್ವರ ಭಜನಾ ಸಂಘದವರಿಂದ ಕಾರ್ಯಕ್ರಮ ಜರುಗಲಿದೆ. ನಂತರ ಮಹಾ ದಾಸೋಹ ವ್ಯವಸ್ಥೆ ಹಾಗೂ ಸಂಜೆ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 4ಕ್ಕೆ ವಿವಿಧ ಗ್ರಾಮದ ಸುಮಾರು ಐದು ಭಜನಾ ಮಂಡಳಿಗಳಿಂದ ಪಲ್ಲಕ್ಕಿ ಸೇವೆ, ಮುಂಗೈ ಕುಸ್ತಿ, ಕಬ್ಬಡ್ಡಿ, ರಂಗೋಲಿ, ಹಾಡಿನ ಸ್ಪರ್ಧೆಗಳು ನಡೆಯಲಿದೆ. ಕಾರ್ತಿಕೋತ್ಸವದಲ್ಲಿ ಗ್ರಾಮದ ಸಕಲ ಹಿರಿಯರು ಹಾಗೂ ಯುವಕರು ಭಾಗವಹಿಸುವುದು ವಿಶೇಷ.
ಯುಗಾದಿ ಪಾಡ್ಯೆಯ ದಿನ ಹುಬ್ಬಳ್ಳಿ, ದಾವಣಗೆರೆ, ಗದಗ, ಬಳ್ಳಾರಿ, ರೋಣ ಹೀಗೆ ಮುಂತಾದ ನಗರಗಳಿಂದ ಭಕ್ತರು ಆಗಮಿಸುವರು. ಅಂದಿನ ರಾತ್ರಿ ಲಘು ರಥೋತ್ಸವ, ಖೊಂಡ ಹಾರುವ ಕಾರ್ಯಕ್ರಮ ನಡೆಯುವುದು.
ಈಗ ಭವ್ಯವಾದ ಸುಂದರ ಕಲಾಕೃತಿಗಳನ್ನು ಒಳಗೊಂಡ ಮಾರುತೇಶ್ವರನ ದೇವಸ್ಥಾನ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಈ ದೇವಸ್ಥಾನವು ಐತಿಹಾಸಿಕ ತಾಣವಾಗಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.
ನೂರಾರು ಲಕ್ಷ ವೆಚ್ಚದಲ್ಲಿ ಉತ್ತಮ ಕಲಾಕೃತಿ ಹಾಗೂ ಸುಂದರ ದೇವಸ್ಥಾನ ನಿರ್ಮಾಣವಾಗಿದ್ದು ಇದಕ್ಕೆ ಗ್ರಾಮದ ಭಕ್ತರ ಸಹಕಾರವಿದೆ. ನಮ್ಮೂರ ಜಾತ್ರೆ ವಿಶೇಷವಾಗಿದ್ದು ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ಸುಧಾಕರ್ ದೇಸಾಯಿ ಮಾರುತೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.