ಶಹಾಪುರ: ನಗರದ ಜನರ ಪಾಲಿಗೆ ಬೇಸಿಗೆ ಸಮಯದಲ್ಲಿ ಅಂತರ್ಜಲಮಟ್ಟ ಕಾಪಾಡುವ ಮಾವಿನ ಕೆರೆಯು ಎಷ್ಟು ಎಕರೆ ಪ್ರದೇಶ ಇದೆ ಎಂಬುವುದು ಭೂ ದಾಖಲೆಗಳಲ್ಲಿ ಸಮರ್ಪಕವಾಗಿ ನಮೂದಿಸಿಲ್ಲ. ಇದರಿಂದ ಕೆರೆಯ ಪ್ರದೇಶದ ಎಷ್ಟು ಎಂಬುದು ಭೂ ಮಾಪನ ಇಲಾಖೆಗೆ ಸವಾಲಿನ ಪ್ರಶ್ನೆ ಎದುರಾಗಿದೆ.
2024-25ಸಾಲಿನ ಭೂ ದಾಖಲೆಯಾದ ಪಹಣಿ ಪತ್ರಿಕೆಯ ಪ್ರಕಾರ ಸರ್ವೇ ನಂಬರ 474 ಇದ್ದು, ಅದರ ವಿಸ್ತೀರ್ಣ 20.3 ಗುಂಟೆ ಎಂದು ನಮೂದು ಆಗಿದೆ. ಕಬ್ಜೆ ಅಥವಾ ಸ್ವಾಧೀನದಾರನ ಹೆಸರಿನಲ್ಲಿ ಗಾಯರಾಣ (ಮಾವಿನ ಕೆರೆ) ಬಿನ್ ಸಾಯಿಬಣ್ಣ ಭೀಮಪ್ಪ ಕಬ್ಬೇರ ಎಕರೆ 15.23 ಗುಂಟೆ ಎಂದು ದಾಖಲಾಗಿದೆ. ಅಲ್ಲದೇ ಕಮಲಾಬಾಯಿ ಸಾಯಿಬಣ್ಣ 3 ಎಕರೆ, ಮಲ್ಲಿಕಾರ್ಜುನ ರಾಮಪ್ಪ 1 ಎಕರೆ, ಬಾಬು ಮಲ್ಲಪ್ಪ ಭೂತಾಳೆ 20 ಗುಂಟೆ ಎಂದು ದಾಖಲಾಗಿದೆ. ವಿಚಿತ್ರವೆಂದರೆ ಇಂದಿಗೂ ಮಾವಿನ ಕೆರೆಯ ವಿಸ್ತೀರ್ಣ ಪ್ರತ್ಯೇಕವಾಗಿ ದಾಖಲಾಗಿರದೆ ಇರುವುದು ಕಂದಾಯ ಇಲಾಖೆಯ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ರೈತ ಮುಖಂಡ ಸಿದ್ದಯ್ಯ ಹಿರೇಮಠ.
ಕೃಷ್ಣಾ ಭಾಗ್ಯ ಜಲ ನಿಗಮದ ಅನುದಾನದ ಅಡಿ ₹4.84 ಕೋಟಿ ವೆಚ್ಚದಲ್ಲಿ ಮಾವಿನ ಕೆರೆ ಹಾಗೂ ನಾಗರ ಕೆರೆಗೆ ಶಹಾಪುರ ಶಾಖಾ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆಯ ಕಾಮಗಾರಿ ಚಾಲನೆಯಲ್ಲಿಇದೆ. ಆದರೆ ಕೆರೆಗೆ ನೀರು ತುಂಬಿಸುವ ಮುನ್ನ ನಿಗಮದ ಎಂಜಿನಿಯರ್ ಗಳು ಯಾವ ಆಧಾರದ ಮೇಲೆ ಎಷ್ಟು ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತದೆ ಎಂಬುವುದು ಅಂದಾಜು ಮಾಡದೆ ತರಾತುರಿಯಲ್ಲಿ ಕೆಲಸ ಕೈಗೊಂಡಿರುವುದು ಸರಿಯಲ್ಲ ಎನ್ನುತ್ತಾರೆ ನಗರದ ನಿವಾಸಿ ಬಸವರಾಜ.
ಭೂ ಮಾಪನ ಇಲಾಖೆಯ ಅಧಿಕಾರಿಗಳು ಕೆರೆಯ ಪ್ರದೇಶ ಸರ್ವೆ ಮಾಡಲು ಮುಂದಾಗುತ್ತಿದ್ದಂತೆ ದಾಖಲೆಯ ಪ್ರಕಾರ ಪಹಣಿ ಪತ್ರಿಕೆಯಲ್ಲಿ ಮಾಲೀಕ ಮತ್ತು ಕಬ್ಜಾದಾರರು ತಕರಾರು ತೆಗೆಯುವ ಸಾಧ್ಯತೆಯಿದೆ.
ಕೆರೆಯ ವಿಸ್ತೀರ್ಣ ಸರ್ವೇ ಮಾಡಲು ತಹಶೀಲ್ದಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಎಷ್ಟು ಎಕರೆ ಪ್ರದೇಶದಲ್ಲಿದೆ ಎಂದು ನಿಖರವಾಗಿ ಪತ್ತೆಯಾದ ಮೇಲೆ ಗಡಿ ಗುರುತು ಹಾಕಿ. ಕೆರೆ ಅಭಿವೃದ್ಧಿಪಡಿಸಲಾಗುವುದು.ರಮೇಶ ಬಡಿಗೇರ ಪೌರಾಯುಕ್ತ
ಆಕಾರ ಬಂದ್ ದಾಖಲೆ ಪಡೆದು ಪರಿಶೀಲಿಸಲಾಗುವುದು. ಗಾಯರಾಣ ಜಮೀನಿನಲ್ಲಿ ಎಷ್ಟು ಫಲಾನುಭವಿಗಳಿಗೆ ಮಂಜೂರಾಗಿದೆ ಎಂಬುದನ್ನು ಪರಿಶೀಲಿಸಿದ ಬಳಿಕ ಉಳಿದ ಜಮೀನು ಕೆರೆಯ ಅಧೀನದ ವ್ಯಾಪ್ತಿಗೆ ಒಳಪಡಲಿದೆ.ಉಮಕಾಂತ ಹಳ್ಳೆ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.