ADVERTISEMENT

ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ಪುರುಷರ ಹಿಂದೇಟು

5 ತಿಂಗಳಲ್ಲಿ ಕೇವಲ 9 ಎನ್‌ಎಸ್‌ವಿ ಆಪರೇಷನ್!

ಬಿ.ಜಿ.ಪ್ರವೀಣಕುಮಾರ
Published 29 ಆಗಸ್ಟ್ 2019, 15:27 IST
Last Updated 29 ಆಗಸ್ಟ್ 2019, 15:27 IST
ಯಾದಗಿರಿಯ ಜಿಲ್ಲಾ ಆಸ್ಪತ್ರೆ
ಯಾದಗಿರಿಯ ಜಿಲ್ಲಾ ಆಸ್ಪತ್ರೆ   

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಐದು ತಿಂಗಳಲ್ಲಿ ಕೇವಲ 9 ಮಂದಿ ಪುರುಷರು ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ (ಎನ್‌ಎಸ್‌ವಿ) ಮಾಡಿಸಿಕೊಂಡಿದ್ದಾರೆ. ತಪ್ಪು ತಿಳಿವಳಿಕೆಯಿಂದ ಈ ಶಸ್ತ್ರಚಿಕಿತ್ಸೆಗೆ ಹಲವಾರು ಮಂದಿ ಹಿಂದೇಟು ಹಾಕುತ್ತಿದ್ದಾರೆ.

ಎನ್‌ಎಸ್‌ವಿ ಶಸ್ತ್ರಚಿಕಿತ್ಸೆಗೆ ಒಳಪಡುವ ಪುರುಷರಿಗೆ ಸರ್ಕಾರ ₹1,100 ಪ್ರೋತ್ಸಾಹ ಧನ ನೀಡುತ್ತದೆ. ಆದರೂ ಪುರುಷರು ಮುಂದೆ ಬರುತ್ತಿಲ್ಲ.

ಏಪ್ರಿಲ್ ತಿಂಗಳಿನಿಂದ ಆಗಸ್ಟ್‌ ವರೆಗೆ 3,294 ಮಹಿಳೆಯರು ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ, ಪುರುಷರು ಮಾತ್ರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗೆ ಒಪ್ಪುತ್ತಿಲ್ಲ. ಇದರಿಂದ ಕೇವಲ 9 ಮಂದಿ ಮಾತ್ರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ADVERTISEMENT

ಶಿಕ್ಷಕರು, ವೈದ್ಯರು, ಉನ್ನತ ಶಿಕ್ಷಣ ಪಡೆದವರು ಮಾತ್ರ ಇದಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನುಳಿದಂತೆ ಗ್ರಾಮೀಣ ಪ್ರದೇಶದ ಜನರು ಇದಕ್ಕೆ ಸುತಾರಂ ಒಪ್ಪಿಗೆ ನೀಡುತ್ತಿಲ್ಲ. ಇದರಿಂದ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ.

ಜಿಲ್ಲೆಯಲ್ಲಿ 6 ಸಮುದಾಯ ಆರೋಗ್ಯ ಕೇಂದ್ರಗಳು, 2 ತಾಲ್ಲೂಕು ಆಸ್ಪತ್ರೆ, 1 ಜಿಲ್ಲಾ ಆಸ್ಪತ್ರೆ ಇದೆ. ಟೂಬೆಕ್ಟಮಿಯನ್ನು ಜಿಲ್ಲಾ, ತಾಲ್ಲೂಕು ಆಸ್ಪತ್ರೆಯಲ್ಲಿ, ಲ್ಯಾಪೆರೊಸ್ಕೋಪಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ತಿಂಗಳಿಗೆ 35ರಿಂದ 40 ವರೆಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.

ಪ್ರೋತ್ಸಾಹ ಧನ: ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಿಪಿಎಲ್ ಕುಟುಂಬದ ಮಹಿಳೆಗೆ ₹600, ಎಪಿಎಲ್ ಕುಟುಂಬದ ಮಹಿಳೆಗೆ ₹250 ಪರಿಹಾರ ಧನ ವಿತರಣೆ ಮಾಡಲಾಗುತ್ತದೆ.

ಸರಳ ಹಾಗೂ ಸುರಕ್ಷಿತ: ಪುರುಷ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಗಾಯ ಮತ್ತು ಹೊಲಿಗೆ ಇಲ್ಲದ ವಿಧಾನವಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು 5ರಿಂದ 10 ನಿಮಿಷದಲ್ಲಿ ಮಾಡಬಹುದು. ಅಲ್ಲದೆ ಶಸ್ತ್ರ ಚಿಕಿತ್ಸೆ ನಂತರ ಒಂದು ಗಂಟೆಯ ನಂತರ ಮನೆಗೆ ತೆರಳಬಹುದಾಗಿದೆ ಎಂದು ಡಾ.ಎಸ್‌.ಬಿ.ಪಾಟೀಲ ಹೇಳುತ್ತಾರೆ.

ಈ ಶಸ್ತ್ರ ಚಿಕಿತ್ಸೆಯಿಂದ ಯಾವುದೇ ರೀತಿಯ ಲೈಂಗಿಕ ನಿಶ್ಯಕ್ತಿ ಮತ್ತು ಪುರುಷತ್ವಕ್ಕೆ ಕುಂದು ಉಂಟಾಗುವುದಿಲ್ಲ. ಮೊದಲಿನಂತೆ ಎಲ್ಲ ಕೆಲಸಗಳನ್ನು ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಎನ್ನುತ್ತಾರೆ ಅವರು.

ಪತ್ನಿಯರಿಂದಲೇ ವಿರೋಧ:
ನೋ ಸ್ಕಾಲ್‌ವೆಲ್‌ ವ್ಯಾಸೆಕ್ಟಮಿ (ಎನ್‌ ಎಸ್‌ವಿ) ಆಪರೇಷನ್‌ಗೆ ಪತ್ನಿಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಆಪರೇಷನ್‌ ಕೋಣೆಗೆ ತೆರಳಿದ ನಂತರ ಆಪರೇಷನ್‌ ಬೇಡವೆಂದು ಮನೆಗೆ ಕರೆದೊಯ್ದಿರುವ ಘಟನೆಯೂ ನಡೆದಿದೆ. ಕುಟುಂಬ ಕಲ್ಯಾಣ ಇಲಾಖೆಗೆ ವರ್ಷಕ್ಕೆ 200 ಆಪರೇಷನ್‌ ಗುರಿ ನಿಗದಿ ಪಡಿಸಲಾಗಿದೆ. ಆದರೆ, ಗುರಿ ತಲುಪಲು ಸಾಧ್ಯವಾಗಿಲ್ಲ.

ದುಡಿಯುವವರು ಪುರುಷರೆ ಆಗಿರುವುದರಿಂದ ಮುಂದೆ ತೊಂದರೆಯಾಗಬಹುದು ಎಂದು ಮಹಿಳೆಯರೆ ಆಪರೇಷನ್‌ಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ. ಅವರಿಗೆ ಬದಲಾಗಿ ನಮಗೆ ಶಸ್ತ್ರ ಚಿಕಿತ್ಸೆ ಮಾಡಿ ಎಂದು ಮಹಿಳೆಯರೇ ಹೇಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ ನಿಶ್ಯಕ್ತರಾಗುತ್ತಾರೆ ಎನ್ನುವ ತಪ್ಪು ತಿಳಿವಳಿಕೆಯಿಂದ ಪುರುಷರು ಮುಂದೆ ಬರುತ್ತಿಲ್ಲ.

ನೂತನ ಚುಚ್ಚುಮದ್ದು ’ಅಂತರ’:ಶಸ್ತ್ರಚಿಕಿತ್ಸೆ ಭಯ ಎನ್ನುವವರಿಗಾಗಿ ರಾಜ್ಯ ಸರ್ಕಾರ ‘ಅಂತರ’ ಎನ್ನುವ ಚುಚ್ಚುಮದ್ದನ್ನು ಪರಿಚಯಿಸಿದೆ. ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಪ್ರಕಾರ ಒಂದು ಕುಟುಂಬಕ್ಕೆ ಎರಡು ಮಕ್ಕಳು ಸಾಕು ಎನ್ನುವ ನಿಯಮವಿದೆ. ಇದರಂತೆ ಒಂದು ಮಗುವಿನ ನಂತರ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದಕೊಳ್ಳಬೇಕು. ಹೀಗಾಗಿ ಇಂಥವರಿಗಾಗಿ ‘ಅಂತರ’ ಚುಚ್ಚು ಮದ್ದು ಪ್ರತಿ ಮೂರು ತಿಂಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಿಸಿಕೊಂಡರೆ ಸಾಕು ಸಂತಾನ ನಿಯಂತ್ರಣ ಮಾಡಬಹುದಾಗಿದೆ. ವರ್ಷಕ್ಕೆ ನಾಲ್ಕು ಬಾರಿ ಈ ಚುಚ್ಚು ಮದ್ದು ಹಾಕಿಸಿಕೊಳ್ಳಬೇಕು ಎಂದು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.