ಯಾದಗಿರಿ: ಜಿಲ್ಲೆಯ ಆರು ಪಂಚಾಯಿತಿಗಳಿಗೆ 2023–24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ರಸ್ತೆ, ಚರಂಡಿ, ಶುದ್ಧ ನೀರು, ಸ್ವಚ್ಛತೆ, ದಾಖಲು ನಿರ್ವಹಣೆ, ತೆರಿಗೆ ಸಂಗ್ರಹ, ಬೀದಿ ದೀಪ ನಿರ್ವಹಣೆ ಹೀಗೆ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗುತ್ತಿದೆ.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013–14ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡು ₹ 5 ಲಕ್ಷ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ.
ಆಯ್ಕೆಯಾದ ಗ್ರಾಮಗಳು ಕೇವಲ ಪ್ರಶಸ್ತಿಗಾಗಿ ಆಯ್ಕೆಯಾಗುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈಚೆಗೆ ಸುರಿದ ಧಾರಾಕಾರ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ಗಲೀಜು ಹರಿದಾಡುವುದು ನೋಡಿದರೆ ಎಲ್ಲಿ ಗಾಂಧಿ ಗ್ರಾಮ ಎನ್ನುವಂತಾಗಿದೆ.
ಕಳಪೆ ಜೆಜೆಎಂ ಕಾಮಗಾರಿ: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗ್ರಾಮಗಳಲ್ಲೂ ಜಲ ಜೀವನ ಮಿಷನ್ (ಜೆಜೆಎಂ) ಕಾಮಗಾರಿ ಅಪೂರ್ಣವಾಗಿದ್ದು, ರಸ್ತೆಗಳು ಹಾಳಾಗಿವೆ. ಅಲ್ಲದೇ ಯಾವ ಗ್ರಾಮದಲ್ಲೂ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ‘ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳು ಕಳೆದರೂ ನೀರು ಸಿಕ್ಕಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.
ಅತಿ ಹೆಚ್ಚು ಅಂಕ ಪಡೆದ ಗ್ರಾಮಗಳು ಆಯ್ಕೆ: 2023–24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅತಿ ಹೆಚ್ಚು ಅಂಕ ಗಳಿಸಿದ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಿ ಸಭೆಯ ನಡಾವಳಿಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಿಸಲಾಗುತ್ತದೆ. ನೋಡಲ್ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪೂರಕ ದಾಖಲೆಗಳನ್ನು ಮತ್ತು ಸಾಧಿಸಿರುವ ಪ್ರಗತಿ ವರದಿ ಕುರಿತು ಪರಿಶೀಲನೆ ಮಾಡಿ ಪ್ರಸ್ತಾವನೆಗಳನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಗಳನ್ನು ಜಿಲ್ಲಾಮಟ್ಟದ ಆಯ್ಕೆಯಲ್ಲಿ ಪರಿಶೀಲನೆ ಮಾಡಿ ಅತಿ ಹೆಚ್ಚು ಅಂಕ ಪಡೆದ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯಿತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮ ಪಂಚಾಯಿತಿ ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. 23 ಸದಸ್ಯರನ್ನು ಹೊಂದಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಿಕುಣಿ, ಹತ್ತಿಕುಣಿ ಕ್ಯಾಂಪ್, ರಾನುನಾಯಕ್ ತಾಂಡಾ, ಸೌದಾಗರ್, ದುಗನೂರು ಹಳ್ಳಿ, ಭವಾನೀರ್ ಹಳ್ಳಿ, ಸಮಣಾಪುರ, ಸಮಣಾಪುರ ಡಿ ತಾಂಡಾ, ಸಮಣಾಪುರ ಎಸ್ ತಾಂಡಾ, ಗೋಪಿನಾಯಕ್ ತಾಂಡಾ, ಬಚಾವಾರ, ಬಚಾವಾರ ಹೊಸ ತಾಂಡಾ, ಬಚಾವಾರ ಹಳ್ಳಿ ತಾಂಡಾ ಬರುತ್ತವೆ.
ಹತ್ತಿಕುಣಿಯಲ್ಲಿ ಮಾತ್ರ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸುತ್ತಿದೆ. ಉಳಿದೆಡೆ ದುರಸ್ತಿಗೆ ಬಂದಿವೆ. ಅಲ್ಲದೇ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲೇ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ಸಿಸಿ ರಸ್ತೆ, ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ಬೀದಿ ದೀಪಗಳ ನಿರ್ವಹಣೆ ಇಲ್ಲ.
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್
ಜಿಲ್ಲೆಯ ಆರು ಗ್ರಾಮ ಪಂಚಾಯಿತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸೌಲಭ್ಯ ಕೊರತೆಯಾಗಿದ್ದರೆ ಈ ಬಗ್ಗೆ ಪರಿಶೀಲಿಸಿ ನಿರ್ವಹಣೆಗೆ ಸೂಚಿಸಲಾಗುವುದುಲವೀಶ್ ಒರ್ಡಿಯಾ ಜಿಲ್ಲಾ ಪಂಚಾಯಿತಿ ಸಿಇಒ
ಹತ್ತಿಕುಣಿ ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿ ಕಳುಹಿಸಲಾಗಿದೆ. ಮಾರ್ಗಸೂಚಿ ಅನ್ವಯ ಪ್ರಶಸ್ತಿ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದುನಿಂಗಣ್ಣ ಕಣಮೇಶ್ವರ ಪಿಡಿಒ ಹತ್ತಿಕುಣಿ
ನರೇಗಾ ಕೆಲಸ ಸ್ವಚ್ಛತೆ ನೀರು ಬಳಕೆ ಗ್ರಂಥಾಲಯಗಳು ಹೀಗೆ ಹಲವಾರು ವಿಷಯಗಳ ಪರಿಶೀಲನೆಯ ನಂತರ ನಮ್ಮ ತಾಲ್ಲೂಕಿನ ಕೊಂಕಲ್ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾಗಿದೆಅಂಬ್ರೀಶ ಪಾಟೀಲ ಇಒ ಗುರುಮಠಕಲ್
ತಡಿಬಿಡಿ ಗ್ರಾಮದ ಕೆಲವೊಂದು ಕಡೆ ಸಿ.ಸಿ ರಸ್ತೆಗಳು ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ಹಿರಿಯರಿಗೆ ಹಾಗೂ ಮಕ್ಕಳಿಗೆ ನಡೆದಾಡಲು ತೊಂದರೆಯಾಗುತ್ತಿದೆರವಿಕುಮಾರ ದೇವರಮನಿ ವಿಷ್ಣು ಸೇನಾ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.