ADVERTISEMENT

ಗೋವುಗಳ ರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಚವಾಣ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 4:17 IST
Last Updated 16 ಏಪ್ರಿಲ್ 2022, 4:17 IST
ಸುರಪುರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಮಠದ ಸುಶೀಲ ಗೋಶಾಲೆಯಲ್ಲಿ ಶುಕ್ರವಾರ ಗೋವುಗಳಿಗೆ ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಮೇವು ತಿನ್ನಿಸಿದರು
ಸುರಪುರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಮಠದ ಸುಶೀಲ ಗೋಶಾಲೆಯಲ್ಲಿ ಶುಕ್ರವಾರ ಗೋವುಗಳಿಗೆ ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಮೇವು ತಿನ್ನಿಸಿದರು   

ಸುರಪುರ: ‘ಗೋವು ಭಾರತೀಯರ ಸಂಪತ್ತು. ಗೋವಿನಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ. ಈ ಕುರಿತು ಪುರಾಣ ಮತ್ತು ವೇದಗಳಲ್ಲಿ ಉಲ್ಲೇಖವಿದೆ. ಗೋವುಗಳ ರಕ್ಷಣೆ ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಬೇಕು’ ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ತಿಳಿಸಿದರು.

ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ನಂತರ ಸುಶೀಲ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ತಿನ್ನಿಸಿ ಅವರು ಮಾತನಾಡಿದರು. ‘ಗೋ ಮಾತಾ ಜನ್ಮ ಮಾತಾ ಎರಡು ಒಂದೇ. ಹೀಗಾಗಿ ಸನಾನತನ ಪರಂಪರೆಯಲ್ಲಿ ಗೋವುಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗೋವುಗಳ ರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ’ ಎಂದು ಅವರು ಹೇಳಿದರು.

‘ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿಗೊಂದು ಗೋಶಾಲೆ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳುತ್ತಿಲ್ಲ. ಕೆಲವರು ಅದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಇದನ್ನು ರಾಜ್ಯವ್ಯಾಪಿ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಗೋ ಹತ್ಯೆ ನಿಷೇಧ ಕಾಯ್ದೆಯಡಿ 600 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಪಶು ಸಂಗೋಪನಾ ಇಲಾಖೆಯನ್ನು ಬಲಪಡಿಸಲು 400 ಪಶು ವೈದ್ಯಾಧಿಕಾರಿ ಮತ್ತು ಇತರೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಸಿಬ್ಬಂದಿಗಳ ನೇಮಕದಿಂದ ಇಲಾಖೆಯಲ್ಲಿರುವ ಸಮಸ್ಯೆಗಳು ನಿಗಲಿವೆ’ ಎಂದು ಹೇಳಿದರು.

ADVERTISEMENT

ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಜೂ ದೇಶಮುಖ, ಪಶು ವೈದ್ಯ ಕುಪ್ಪಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲರೆಡ್ಡಿ, ಮುಖಂಡರಾದ ಚಂದ್ರಶೇಖರಗೌಡ ಮಾಗನೂರು, ಸಂದೀಪ್ ಜೋಷಿ, ಪ್ರಕಾಶ ಅಂಗಡಿ, ಸೂಗುರೇಶ ಮಡ್ಡಿ, ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ಮಲ್ಲು ಹೂಗಾರ, ಶಿವರಾಜ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.