ADVERTISEMENT

ಶಹಾಪುರ | ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆ: ಗಂಡು ಮಗುವಿಗೆ ಜನ್ಮ

ಟಿ.ನಾಗೇಂದ್ರ
Published 29 ಆಗಸ್ಟ್ 2025, 7:31 IST
Last Updated 29 ಆಗಸ್ಟ್ 2025, 7:31 IST
ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಭೇಟಿ ನೀಡಿದರು. ಎಸ್‌ಪಿ ಪೃಥ್ವಿಕ್ ಶಂಕರ ಉಪಸ್ಥಿತರಿದ್ದರು
ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಭೇಟಿ ನೀಡಿದರು. ಎಸ್‌ಪಿ ಪೃಥ್ವಿಕ್ ಶಂಕರ ಉಪಸ್ಥಿತರಿದ್ದರು   

ಶಹಾಪುರ (ಯಾದಗಿರಿ ಜಿಲ್ಲೆ): ನಗರದ ವಸತಿನಿಲಯ ಒಂದರಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಶಾಲೆಯ ಶೌಚಾಲಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಗುರುವಾರ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದಾಗ ನಗರದ ಜನತೆ ಹಾಗೂ ಪಾಲಕರು ಬೆಚ್ಚಿಬಿದ್ದಿದ್ದಾರೆ. ಮುಂದೇನು ಎಂಬ ಆತಂಕ, ದುಗುಡ, ಭೀತಿ ಪಾಲಕರಲ್ಲಿ ಉಂಟು ಮಾಡಿದೆ.

ನಗರದ ಜನತೆ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಲು ಆರಂಭಿಸಿದಾಗ ನಗರದ ವಸತಿನಿಯಕ್ಕೆ ಹಾಗೂ ಸರ್ಕಾರಿ ಆಸ್ಪತ್ರೆಯ ಒಳಗಡೆ ಯಾರಿಗೂ ಪ್ರವೇಶ ಮಾಡದಂತೆ ಪೊಲೀಸರು ನಿರ್ಬಂಧ ಹಾಕಿದರು. ಇವೆಲ್ಲದರ ನಡುವೆ ತಾಯಿಯಾದ ವಿದ್ಯಾರ್ಥಿನಿ ಮತ್ತು ಮಗು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವ ಕೆಲಸ ನಡೆದಿದೆ.

ವಿಷಯ ತಿಳಿದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ, ಆಸ್ಪತ್ರೆಯಲ್ಲಿ ತಾಲ್ಲೂಕು ಆಡಳಿತ ಸಭೆ ನಡೆಸಿ, ಘಟನೆಗೆ ಸಂಬಂಧಿಸಿದ ಶಾಲಾ ಪ್ರಾಚಾರ್ಯರು, ವಾರ್ಡ್‌ನ ಮತ್ತು ಆರೋಗ್ಯ ತಪಾಸಣೆಯ ನರ್ಸ್‌ ಸೇರಿದಂತೆ ಇತರರನ್ನು ವಿಚಾರಿಸಿ ಸಮರ್ಪಕ ಮಾಹಿತಿ ಸಂಗ್ರಹಿಸಿದರು.

ADVERTISEMENT

ನಂತರ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ‘ಇದು ಸೂಕ್ಷ್ಮ ವಿಚಾರವಾಗಿದೆ. ಇದರಲ್ಲಿ ಕಾನೂನಾತ್ಮಕ ಅಂಶಗಳು ಅಡಗಿವೆ. ಯಾರ ಬಗ್ಗೆಯೂ ಸಮರ್ಥನೆ ಮಾಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲಿ ಲೋಪವಾಗಿದೆ ಎಂಬುವುದರ ವಿಚಾರಣೆ ನಡೆದಿದೆ. ಘಟನೆ ಇನ್ನೂ ವಿಚಾರಣೆ ಹಂತದಲ್ಲಿರುವದರಿಂದ ಮಾಧ್ಯಮಕ್ಕೆ ಬಹಿರಂಗ ಪಡಿಸಲಾಗುವದಿಲ್ಲ. ಒಟ್ಟಾರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ’ ಎಂದರು.

ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ನಿರ್ಮಲಾ ಅವರು ಗುರುವಾರ ಶಹಾಪುರ ಠಾಣೆಗೆ ಹಾಜರಾಗಿ ವಸತಿನಿಯಲದ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಪಾಲಕರು ಒಬ್ಬರು ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಲಾಗಿದೆ. ಅಲ್ಲದೆ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ವಸತಿನಿಯಲದ ನಾಲ್ವರು ಸಿಬ್ಬಂದಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸ್ಟಾಫ್‌ನರ್ಸ್ ವಿರುದ್ಧ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು ಡಿಎಚ್‌ಒ ಹೇಳಿದರು.

ಕಾಡ್ಗಿಚ್ಚಿನಂತೆ ಹಬ್ಬಿದ ವಿದ್ಯಾರ್ಥಿನಿಯ ಹೆರಿಗೆ ಸುದ್ದಿಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಹಾಗೂ ಮಗುಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಜನತೆ

ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಭೇಟಿ ನೀಡಿದರು. ಎಸ್‌ಪಿ ಪೃಥ್ವಿಕ್ ಶಂಕರ ಉಪಸ್ಥಿತರಿದ್ದರು 
ಇನ್ನೂ ನಾವು ಯಾರನ್ನೂ ಬಂಧಿಸಿಲ್ಲ. ವಿಚಾರಣೆ ಚುರುಕಾಗಿದೆ. ಹೆಚ್ಚಿನ ಮಾಹಿತಿ ನೀಡುವುದಿಲ್ಲ. ತಪ್ಪಿತಸ್ಥರನ್ನು ಬೇಗ ಬಂಧಿಸಲಾಗುವುದು
ಎಸ್.ಎನ್.ಪಾಟೀಲ ಪಿ.ಐ ಶಹಾಪುರ ಠಾಣೆ

ದಯವಿಟ್ಟು ಆತಂಕ ಪಡಬೇಡಿ

ವಿದ್ಯಾರ್ಥಿನಿಯ ಹೆರಿಗೆಯಿಂದ ದಯವಿಟ್ಟು ಪಾಲಕರು ಭಯ ಹಾಗೂ ಆತಂಕಪಡುವ ಅಗತ್ಯವಿಲ್ಲ.ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಇಂತ ಘಟನೆ ಮರುಕಳುಹಿಸದಂತೆ ಅಗತ್ಯ ಎಚ್ಚರಿಕೆವಹಿಸಲಾಗುವುದು. ಊಹಾಪೋಹ ಮಾತುಗಳನ್ನು ಕೇಳಬೇಡಿ. ಜಿಲ್ಲಾಡಳಿತವು ಪಾಲಕರ ಜತೆ ಇದೆ. ದಯವಿಟ್ಟು ಆತಂಕ ಪಡಬೇಡಿ ಎಂದು ಮಾಧ್ಯಮದ ಮೂಲಕ ಗುರುವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮನವಿ ಮಾಡಿದರು.

9 ತಿಂಗಳಾದರು ಪಾಲಕರಿಗೆ ಗೊತ್ತಾಗಿಲ್ಲವೇ...?

9 ತಿಂಗಳಾದರು ಪಾಲಕರಿಗೆ ಈ ವಿಷಯ ಗೊತ್ತಾಗಲಿಲ್ಲವೇ.? ವಿದ್ಯಾರ್ಥಿನಿ ಮನೆಗೆ ಹೋಗಿಲ್ಲವೇ.? ಎಂದು ಪ್ರಶ್ನಿಸುವ ಮೂಲಕ ಹಲವು ಸಂದೇಶಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಅಲ್ಲದೆ ವಸತಿ ಶಾಲಾಯ ಮೇಲ್ವಿಚಾರಕರು ಇತರೆ ಸಂಬಂಧಿಸಿದ ಅಧಿಕಾರಿಗಳು ಅವರು ಪರಿಶೀಲಿಸಬೇಕಿತ್ತು. ಇದೆಲ್ಲವನ್ನು ತನಿಖೆ ಹಂತದಲ್ಲಿದೆ. ನಂತರವೇ ಎಲ್ಲವೂ ಸತ್ಯಾಸತ್ಯತೆ ಹೊರ ಬರಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.

ಎಚ್ಚೆತ್ತ ಜಿಲ್ಲಾಡಳಿತ ಮಿಂಚಿನ ಸಂಚಾರ

ವಿದ್ಯಾರ್ಥಿನಿಯ ಹೆರಿಗೆ ಘಟನೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡ ಡಿ.ಸಿ ಎಸ್ಪಿ ಸಿ.ಎಸ್ ಹಾಗೂ ಇತರ ಜಿಲ್ಲಾಮಟ್ಟದ ಅಧಿಕಾರಿಗಳ ತಂಡವು ಗುರುವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿ ಸಮಗ್ರವಾದ ಮಾಹಿತಿ ಕಲೆಹಾಕಿತು. ಸಂಜೆಯವರಿಗೆ ಕಾಯ್ದುನೋಡಿ ಎಂಬ ಮಾಧ್ಯಮದ ಮುಂದೆ ತಿಳಿಸಿದ ಡಿ.ಸಿ ನಾಲ್ವರನ್ನು ಅಮಾನತುಗೊಳಿಸುವ ಮೂಲಕ ಸಮಸ್ಯೆಯನ್ನು ತಹಬಂದಿಗೆ ತಂದರೆ ಎಸ್ಪಿ ಅವರು ಬಾಲಕಿಯಿಂದ ಸತ್ಯವನ್ನು ಹೊರ ಹಾಕಿಸುವ ಮೂಲಕ ವ್ಯಕ್ತಿಯ ಬಂಧನಕ್ಕೆ ತಂಡ ರಚಿಸಿಯೇ ಬಿಟ್ಟರು.

ಸುದ್ದಿ ತಿಳಿದು ತಾಯಿ ಆಸ್ಪತ್ರೆಗೆ ದಾಖಲು

ವಿದ್ಯಾರ್ಥಿನಿಯ ತಂದೆ 8 ವರ್ಷದ ಹಿಂದೆ ಮೃತಪಟ್ಟಿದ್ದಾರೆ. ತಾಯಿ ಅನಾರೋಗ್ಯಪೀಡಿತರಾಗಿದ್ದಾರೆ. ಹೆರಿಗೆ ಸುದ್ದಿ ಕೇಳಿ ಆತಂಕಗೊಂಡ ತಾಯಿ ಮಗಳ ರಾಯಚೂರು ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಒಬ್ಬಳೆ ಮಗಳು ಇದ್ದಾರೆ. ಅಲ್ಲದೆ ವಿದ್ಯಾರ್ಥಿನಿಯ ಪಾಲಕರಿಗೆ ಇದರ ಬಗ್ಗೆ ಗೊತ್ತಿದ್ದರು ಸಹ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂಬ ಗುಮಾನಿ ನಮಗೆ ಕಾಡುತ್ತಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.