ಯಾದಗಿರಿ: ಜಗತ್ತಿಗೆ ಬುದ್ಧನ ಬೋಧನೆಯ ಅವಶ್ಯಕತೆ ಇದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಜಯಂತಿ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ದ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದ್ವೇಷದ ಮಾರ್ಗದಲ್ಲಿ ನಡೆಯುವ ಮೂಲಕ ಇಂದು ಮಾನವ ಅಶಾಂತಿಯ ಸಾಗರದಲ್ಲಿ ಮುಳುಗಿದ್ದಾನೆ. ಈ ವೇಳೆ ಬೌದ್ಧ ಧರ್ಮದ ಪ್ರತಿಪಾದಕ ಗೌತಮ ಬುದ್ಧನ ಶಾಂತಿ ಸಂದೇಶಗಳು ಇಡೀ ಜಗತ್ತಿಗೆ ಬೇಕಾದ ಸಾರ್ವಕಾಲಿಕ ಸತ್ಯವೆಂದರು.
ದೇಶದಲ್ಲಿ ಹೊಸ ಚಿಂತನೆ, ಮನ್ವಂತರದ ಬೆಳಕು ಹೊಮ್ಮಿಸಿದ ಮೇರು ಪುರುಷ ಭಗವಾನ್ ಬುದ್ಧರು ಎಂದು ಶಾಸಕರು ಬಣ್ಣಿಸಿದರು.
ಹೆತ್ತವರು ಮಗ ಚಕ್ರವರ್ತಿಯಾಗಲಿ ಎಂಬುವುದಿತ್ತು. ಆದರೆ, ಲೌಕಿಕ ಜಗತ್ತಿನ ಗೊಡವೆಗೆ ಹೋಗದ ಗೌತಮರ ಹಾದಿ ಅಲೌಕಿಕದ ಕೊನೆ ಅವಸ್ಥೆಗೆ ಮುಟ್ಟಿತ್ತು. ಹೀಗಾಗಿಯೇ ಲೋಕದ ಮಹಾಪುರುಷನಾಗಿ ಜಗತ್ತು ಬೆಳಗುವ ಬುದ್ಧನಾಗಿ ಮಾರ್ಪಾಡಾದರು. ಸಾಮ್ರಾಟ್ ಅಶೋಕ ಹಾಗೂ ಡಾ.ಅಂಬೇಡ್ಕರ್ ಅವರು ಬುದ್ಧನ ಅನುಯಾಯಿಗಳಾಗಿದ್ದು, ವಿಶೇಷ ಎಂದು ಹೇಳಿದರು.
ಜಗತ್ತಿನಲ್ಲಿ ಎಲ್ಲೆಡೆ ಶಾಂತಿ ಮಾಯವಾಗಿ ಕ್ರಾಂತಿಯ ಲಕ್ಷ್ಮಣಗಳೇ ಕಾಣಿಸುತ್ತಿವೆ. ಮಾನವ ಜೀವಗಳೆಲ್ಲ ನೆಮ್ಮದಿಯ ಬದುಕು ತೊರೆಯುತ್ತಿವೆ. ಕಾರಣ ಬುದ್ಧರ ಸಂದೇಶ, ವಿಚಾರಗಳು ಅಳವಡಿಸಿಕೊಂಡಲ್ಲಿ ಶಾಂತಿಯ ಜೀವನ ಪ್ರತಿಯೊಬ್ಬರದ್ದು ಆಗುತ್ತದೆ ಎಂದು ವಿವರಿಸಿದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ದಲಿತ ನಾಯಕ ನೀಲಕಂಠ ಬಡಿಗೇರ ಶಹಾಪುರ, ಬುದ್ಧರಿಗೆ ಜ್ಞಾನೋದಯವಾದ ಸ್ಥಳ ಬಿಹಾರದ ಬುದ್ಧಗಯಾ. ಬೋಧಿವೃಕ್ಷದ ಕೆಳಗೆ ಕಠಿಣ ತಪಸ್ಸು ಮಾಡಿ ಜ್ಞಾನ ಸಂಪಾದಿಸಿಕೊಂಡು ಅಲ್ಲಿಂದ ವಾರಣಾಸಿಗೆ ತೆರಳಿ ಸಾರಾನಾಥ ಎಂಬ ಸ್ಥಳದಲ್ಲಿ ತನ್ನ ಶಿಷ್ಯರಿಗೆ ಬೌದ್ಧ ತತ್ವೋಪದೇಶ ಮಾಡಿದರು.
ಸಿದ್ದಾರ್ಥರು ಹುಟ್ಟಿದಾಗಲೇ ಮಹಾಪುರುಷರ ಲಕ್ಷ್ಮಣಗಳಿರುವುದನ್ನು ಹಿರಿಯರು ಗುರುತಿಸಿದ್ದರು. ಬುದ್ಧ ಎಂಬ ಪದದ ಅರ್ಥ ತಿಳಿದವನು, ಅರಿತವನು, ಜ್ಞಾನಿ, ಪ್ರಬುದ್ಧ ಪಂಡಿತ ಎಂದು ಆಗುತ್ತದೆ. ಹೀಗೆ ಪರಮ ಜ್ಞಾನ ಪಡೆದ ಜಾಗತಿಕ ದಾರ್ಶನಿಕ ಗೌತಮ ಬುದ್ಧ ಎಂದು ವಿವರಿಸಿದರು.
ನೆಮ್ಮದಿ ಜೀವನಕ್ಕೆ ಬೆಳಕಿನ ದಾರಿ ತೋರಿದ ಗೌತಮನನ್ನು ನೆನೆಯುವ ಈ ಪವಿತ್ರ ದಿನವೇ ಬುದ್ಧ ಪೌರ್ಣಮಿ ಎಂದು ಬಡಿಗೇರ ಹೇಳಿದರು.
ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಮಾತನಾಡಿ, ಗೌತಮ ಬುದ್ಧರು ತಮ್ಮಲ್ಲಿನ ಜ್ಞಾನವನ್ನು ಶ್ರೀಸಾಮಾನ್ಯರ ಭಾಷೆಯಲ್ಲಿಯೇ ಬೋಧಿಸಿದರು. ದೇಶದ ಉದ್ಧಗಲಕ್ಕೂ ಸುಮಾರು 45 ವರ್ಷಗಳ ಕಾಲ ಸಂಚರಿಸಿ ನಾಲ್ಕು ಸತ್ಯಗಳನ್ನು, ಅಷ್ಟಾಂಗ ಮಾರ್ಗಗಳನ್ನು ಬೋಧಿಸಿದರೆಂದು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಯೂಡಾ ಅಧ್ಯಕ್ಷ ವಿನಾಯಕ ಮಾಲಿಪಾಟೀಲ, ಭಗವಾನ ಬುದ್ದ ಜಯಂತಿ ಸಮಿತಿ ಅಧ್ಯಕ್ಷ ಡಾ.ಭಗವಂತ ಅನ್ವಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಭಾಗವಹಿಸಿದ್ದರು.
ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.