ADVERTISEMENT

ಜನತೆಯ ಕೆಲಸ ಮಾಡಿ; ಸತಾಯಿಸದಿರಿ: ಶಾಸಕ ಶರಣಗೌಡ

ಗಾಜರಕೋಟ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 14:33 IST
Last Updated 29 ನವೆಂಬರ್ 2023, 14:33 IST
ಗುರುಮಠಕಲ್ ಹತ್ತಿರದ ಗಾಜರಕೋಟ ಗ್ರಾಮದ ಕೆಪಿಎಸ್‌ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಅವರನ್ನು ಸನ್ಮಾನಿಸಲಾಯಿತು
ಗುರುಮಠಕಲ್ ಹತ್ತಿರದ ಗಾಜರಕೋಟ ಗ್ರಾಮದ ಕೆಪಿಎಸ್‌ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಅವರನ್ನು ಸನ್ಮಾನಿಸಲಾಯಿತು   

ಗುರುಮಠಕಲ್: ಅಧಿಕಾರಿಗಳು ಜನತೆಯ ಕೆಲಸಗಳಿಗೆ ಸತಾಯಿಸಬಾರದು. ನೀವು ಮಾಡಬೇಕಾದ ಕೆಲಸವನ್ನು ಬೇಗ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಅವರು ಸೂಚಿಸಿದರು.

ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ನೂತನ ಆರು ಕೋಣೆಗಳ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಚಿಕ್ಕಪುಟ್ಟ ಕೆಲಸಗಳಿಗೂ ಶಾಸಕರ ಮೊರೆ ಹೋಗುವಂತಾಗಬಾರದು ಎಂದರು.

ಈಗಾಗಲೇ ಮತಕ್ಷೇತ್ರದಲ್ಲಿ 13 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯಾರಂಭಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಮತ್ತೆ 13 ಶಾಲೆಗಳ ಆರಂಭಕ್ಕೆ ಅನುಮೋದನೆ ಲಭಿಸಿದೆ. ನಮ್ಮ ಭಾಗದ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಅಥವಾ ಬೌದ್ಧಿಕ ಮಟ್ಟದ ಕೊರತೆಯಿಲ್ಲ. ಆದರೆ, ಸೌಕರ್ಯಗಳು ಮತ್ತು ಶಿಕ್ಷಕರ ಕೊರತೆ ಕಾಡುತ್ತಿದೆ. ಆದ್ದರಿಂದ ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಗ್ರಾಮೀಣ ಜನತೆಗೆ ಉತ್ತಮ ನೀರು ಒದಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ADVERTISEMENT

ಚಪೆಟ್ಲಾ, ಗಾಜರಕೋಟ, ಕಾಕಲವಾರ ವ್ಯಾಪ್ತಿಯ ಜನತೆಯು ಸದಾ ವಿದ್ಯುತ್ ಸಮಸ್ಯೆ ಕುರಿತು ಮನವಿ ಮಾಡುತ್ತಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮದ ಜೆಸ್ಕಾಂ ಉಪ ಕೇಂದ್ರವನ್ನು 110 ಕೆವಿಗೆ ಮೇಲ್ದರ್ಜೆಗೇರಿಸಲು ಅನುಮೋದನೆ ಲಭಿಸಿದ್ದು, ಶೀಘ್ರವೇ ಕೆಲಸ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

ತಹಶೀಲ್ದಾರ್ ನೀಲಪ್ರಭಾ ಬಬಲಾದ ಮಾತನಾಡಿ, ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ. ಮಕ್ಕಳು ತಮ್ಮ ಆಸಕ್ತಿಯ ವಿಷಯ ಅಥವಾ ಕ್ಷೇತ್ರದಲ್ಲಿ ದೃಢ ಸಂಕಲ್ಪದಿಂದ ಮುಂದುವರಿದರೆ ಯಶಸ್ವಿಯಾಗುತ್ತೀರಿ ಎಂದರು. ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ, ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಪಿಎಸ್ ವಾಲಿಬಾಲ್ ತಂಡವನ್ನು ಸನ್ಮಾನಿಸಲಾಯಿತು. ಪಿಡಬ್ಲೂಡಿ ಎಇಇ ಶ್ರೀಧರ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಶ್ರೀನಿವಾಸ, ತಾ.ಪಂನ ಭಾರತಿ ಸಜ್ಜನ, ಜೆಇ ಪರಶುರಾಮ, ಅಬ್ದುಲ್ ಅಲೀಂ, ಪಿಡಿಒ ಶರಣಪ್ಪ ಮೈಲಾರಿ, ಜೆಸ್ಕಾಂ ಅಧಿಕಾರಿ ಮಹಾಂತೇಶ, ಪಿಐ ದೌಲತ್ ಎನ್.ಕುರಿ., ಮುಖಂಡರಾದ ಜಿ.ತಮ್ಮಣ್ಣ, ಮಲ್ಲಿಕಾರ್ಜುನ ಅರುಣಿ, ಬಸಣ್ಣ ದೇವರಳ್ಳಿ ಇದ್ದರು.

ಗುರುಮಠಕಲ್ ಹತ್ತಿರದ ಗಾಜರಕೋಟ ಗ್ರಾಮದ ಕೆಪಿಎಸ್ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು

ಬಡವರಿಗೆ ಸರ್ಕಾರ ನೀಡಿದ್ದ ಅಕ್ಕಿ ಗೋದಾಮಿನಲ್ಲಿ ಕಳ್ಳತನವಾಗಿದೆ. ಈ ಕುರಿತು ಅಧಿವೇಶನದಲ್ಲಿ ಚರ್ಚಿಸುತ್ತೇನೆ. ಜತೆಗೆ ಮತಕ್ಷೇತ್ರಕ್ಕೆ ಸಿಗಬೇಕಾದ ಸೌಲಭ್ಯ ತಲುಪಿಸುವ ಸೇವಕನಾಗಿ ದುಡಿಯುವೆ

-ಶರಣಗೌಡ ಕಂದಕೂರ ಶಾಸಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.