ADVERTISEMENT

ವಿಶೇಷ ಪ್ಯಾಕೇಜ್‌: ಕೇಂದ್ರ ಸಚಿವರಿಗೆ ಕಂದಕೂರ ಪತ್ರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:15 IST
Last Updated 30 ಸೆಪ್ಟೆಂಬರ್ 2025, 4:15 IST
ಶರಣಗೌಡ ಕಂದಕೂರ
ಶರಣಗೌಡ ಕಂದಕೂರ   

ಯಾದಗಿರಿ: ಅತಿವೃಷ್ಟಿ ಹಾಗೂ ನೆರೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೋರಿ ಶಾಸಕ ಶರಣಗೌಡ ಕಂದಕೂರ ಅವರು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

‘ಒಮ್ಮೆ ಬರ, ಮಗದೊಮ್ಮೆ ನೆರೆಯಂತಹ ಪ್ರಕೃತಿವಿಕೋಪದಿಂದ ಉತ್ತರ ಕರ್ನಾಟಕ ಜಿಲ್ಲೆಗಳು ನಲುಗುತ್ತಿವೆ. ಕಳೆದ ಕೆಲವು ದಿನಗಳಿಂದ ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ವಿವಿಧೆಡೆ ಸುರಿದ ಮಳೆ ಹಾಗೂ ನದಿಗಳ ಪ್ರವಾಹದಿಂದ ಭಾರಿ ಅನಾಹುತಗಳು ಸಂಭವಿಸಿವೆ. ಒಂದು ವಾರದಲ್ಲಿ ಭೀಮಾ ನದಿಗೆ 24 ಲಕ್ಷ ಕ್ಯುಸೆಕ್ ನೀರು ಹರಿದುಬಂದಿದೆ ಎಂದಿದ್ದಾರೆ.

ಪ್ರವಾಹದಿಂದ ಸೇತುವೆ, ಹಳ್ಳಕೊಳ್ಳಗಳು ಜಲಾವೃತಗೊಂಡಿವೆ. ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಮನೆಗಳು ಕುಸಿದು ಬಿದ್ದಿವೆ, ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಜನ-ಜಾನುವಾರುಗಳ ಜೀವಹಾನಿ ಕಂಡಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ, ನೂರಾರು ಕೋಟಿ ರುಪಾಯಿ ನಷ್ಟವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.‌

ADVERTISEMENT

ಈ ಹಿಂದೆ, ತಾವು ರಾಜ್ಯ ಮುಖ್ಯಮಂತ್ರಿ ಆಗಿದ್ದಾಗ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂದಿನ ಕೇಂದ್ರ ಸರ್ಕಾರದ ಮನವೊಲೈಸಿ, ಕೋಟ್ಯಂತರ ರುಪಾಯಿ ನೆರವು ಸಿಗುವಂತೆ ಮಾಡಿದ್ದೀರಿ. ಬೆಳೆ ಪರಿಹಾರ, ಸಾಲಮನ್ನಾ ಸಹ ಮಾಡಿದ್ದೀರಿ. ಆದರೆ, ರಾಜ್ಯ ಸರ್ಕಾರ ನೆರೆ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಜಾತಿ– ಜಾತಿಗಳ ನಡುವೆ ಜಗಳ ಹಚ್ಚುವ ಹುನ್ನಾರಕ್ಕೆ ಮುಂದಾಗಿದೆ. ನೆರೆ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ, ರೈತರಿಗೆ ನೆರವು ಸಿಗುವುದು ಮರೀಚಿಕೆ ಆಗಿದೆ ಎಂದಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಬೆಳೆ ಕಳೆದುಕೊಂಡ ರೈತರು ಶೋಚನೀಯ ಸ್ಥಿತಿಯಲ್ಲಿದ್ದಾರೆ.  ತೋರಿಕೆಗೆ ಹಾನಿಯ ಸಮೀಕ್ಷೆ ನಡೆಯುತ್ತಿದ್ದ, ಅಧಿಕಾರಿಗಳು ವಾಸ್ತವ ಅಂಶ ನೀಡುತ್ತಿಲ್ಲ ಎಂಬ ಆಪಾದನೆ ಇದೆ. ಅಧಿಕಾರಿಗಳು ತಮ್ಮ ಕರ್ತವ್ಯ ಮರೆತ್ತಿದ್ದಾರೆ. ಜನ-ಜಾನವಾರುಗಳು ನೀರು ಮೇವಿಗಾಗಿ ಪರದಾಡುವಂತಾಗಿದೆ. ಹೀಗಾಗಿ, ಕೇಂದ್ರ ಸಚಿವರಾದ ತಾವು ನೆರೆ ಪೀಡಿತ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಹಾಗೂ ಸೂಕ್ತ ಪರಿಹಾರ-ನೆರವು ಕೊಡುವಿರೆಂದು ಆಶಾಭಾವನೆಯಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.