ಶಹಾಪುರ: ‘ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದರ ಜತೆಗೆ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗುತ್ತದೆ. ಸರ್ಕಾರಿ ವಸತಿ ಶಾಲೆಯಲ್ಲಿ ಖಾಸಗಿ ಶಾಲೆಗಿಂತ ಉತ್ತಮ ಗುಣಮಟ್ಟದ ಶಿಕ್ಷಣದ ದೊರಕಿಸಬೇಕಾಗಿದೆ. ಇದಕ್ಕೆ ಶಿಕ್ಷಕರು ಶ್ರಮಿಸಬೇಕು ಹಾಗೂ ಪಾಲಕರು ಕಾಳಜಿ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ತಾಲ್ಲೂಕಿನ ಉಕ್ಕಿನಾಳ ಗ್ರಾಮದ ಬಳಿಯ ದೊರೆಗುಡ್ಡದ ಬಳಿ ₹15ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಗಳ ಕಟ್ಟಡ ನಿರ್ಮಾಣ, ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದಿದೆ. ಈಗಾಗಲೇ ಕೆಲ ಕಡೆ ಕಟ್ಟಡ ಕಾಮಗಾರಿ ಆರಂಭವಾಗಿದೆ. ಪ್ರಸಕ್ತ ಬಾರಿ ಶೈಕ್ಷಣಿಕ ಉನ್ನತಿಗಾಗಿ ಹೆಚ್ಚಿನ ಕಾಳಜಿ ವಹಿಸಿದೆ. ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ. ಶಿಕ್ಷಕರ ಸಮಸ್ಯೆ ಇರುವ ಕಡೆ ನನ್ನ ಗಮನಕ್ಕೆ ತನ್ನಿ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸುವೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ, ಮಲ್ಲಪ್ಪ ಗೋಗಿ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.