ADVERTISEMENT

ಮಕ್ಕಳ ಕೊಲೆ ಪ್ರಕರಣ: ಮಗನ ಚಿಕಿತ್ಸೆ ವೆಚ್ಚ ಭರಿಸಲು ತಾಯಿ ಮನವಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 6:08 IST
Last Updated 31 ಜುಲೈ 2025, 6:08 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಯಾದಗಿರಿ: ಸಂಬಂಧಿಕರೊಬ್ಬರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಈಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ಮಗನ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಹಲ್ಲೆಗೊಳಗಾದ ಬಾಲಕನ ತಾಯಿ ವಡಗೇರಾ ತಾಲ್ಲೂಕಿನ ಕುರಕುಂದಾದ ರಿಹಾನಾ ಚಾಂದ್‌ ಪಾಷಾ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರಿಗೆ ಬುಧವಾರ ಇಲ್ಲಿನ ಡಿಸಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ದುಡಿಯಲು ಬೆಂಗಳೂರಿನಲ್ಲಿ ವಾಸವಿರುವ ನಮ್ಮ ಮನೆಗೆ ಕಳೆದ 15 ದಿನಗಳ ಹಿಂದೆ ಮೈದುನ ಕಾಸೀಂ ಎಂಬಾತ ಬಂದು ವಾಸವಿದ್ದ. ನಾನು ಮತ್ತು ನನ್ನ ಪತಿ ದುಡಿಯಲು ಹೊರಗೆ ಹೋದಾಗ ನನ್ನ ಮೂವರು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ, ಕಬ್ಬಿಣದ ಪೈಪ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೊಬ್ಬ ಮಗ ರೋಹನ್‌ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಬೆಂಗಳೂರಿನ ಸೆಕ್ರೆಡ್ ಓಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಿಕಿತ್ಸೆ ವೆಚ್ಚ ಭರಿಸುವಷ್ಟು ಆರ್ಥಿಕವಾಗಿ ನಾವು ಸಬಲರಿಲ್ಲ. ಕಾರಣ ಚಿಕಿತ್ಸೆ ಕೊಡಿಸಿ, ಅದರ ವೆಚ್ಚವನ್ನು ಸರ್ಕಾರವೇ ಭರಿಸುವ ಮೂಲಕ ಒಬ್ಬ ಮಗನ ಜೀವ ಉಳಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಮನವಿಗೆ ಸ್ಪಂದಿಸಿದ ಅವರು, ‘ಈ ಕುರಿತು ದೂರು ದಾಖಲಾದ ಬಗ್ಗೆ ಮಾಹಿತಿ ಪಡೆದು ಮುಂದಿನ‌ ಕ್ರಮಕ್ಕೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಕುರಕುಂದಿ ಪಂಚಾಯಿತಿ ಉಪಾಧ್ಯಕ್ಷ ಮಲ್ಲಪ್ಪ ಗೋಡಿಹಾಳ, ಖಾಸೀಂ ಮುತ್ಯಾ, ಮಕ್ತಂ  ಶೇಕ್ ಶಿಂಧೆ, ಬಸು ನಾಟೇಕರ, ಇಕ್ಬಾಲ್ ಸಾಬ್, ಶರಣಬಸವಗೌಡ, ನಬೀಸಾಬ್ ಕೋಟಾರಿ, ರಸೂಲ್ ಸಾಬ್, ಖಾಸೀಂ ಗುಲಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.