ADVERTISEMENT

ಮಾರ್ಚ್‌ 3ರಂದು ತತ್ವಪದಕಾರ ಮೋಟ್ನಳ್ಳಿಯ ಹಸನ್ ವಸ್ತಾದೆಪ್ಪ ಜಾತ್ರೆ

ಸಿದ್ದಲಿಂಗ ಸ್ವಾಮಿಗಳಿಂದ ಲಿಂಗದೀಕ್ಷೆ: ಮೋಟ್ನಳ್ಳಿಯಲ್ಲಿ ಜಾತ್ರೆ ಇಂದು

ತೋಟೇಂದ್ರ ಎಸ್ ಮಾಕಲ್
Published 3 ಮಾರ್ಚ್ 2021, 2:54 IST
Last Updated 3 ಮಾರ್ಚ್ 2021, 2:54 IST
ಯರಗೋಳ ಸಮೀಪದ ಮೊಟ್ನಳ್ಳಿಯ ವಸ್ತಾದೆಪ್ಪ ದರ್ಗಾ
ಯರಗೋಳ ಸಮೀಪದ ಮೊಟ್ನಳ್ಳಿಯ ವಸ್ತಾದೆಪ್ಪ ದರ್ಗಾ   

ಮೋಟ್ನಳ್ಳಿ (ಯರಗೋಳ): ಇಲ್ಲಿನ ಮೋಟ್ನಳ್ಳಿಯಲ್ಲಿ ಬುಧವಾರ (ಮಾ.3) ತತ್ವಪದಕಾರ ‘ಹಸನ್ ವಸ್ತಾದೆಪ್ಪ’ ಅವರ ಜಾತ್ರೆ ನಡೆಯಲಿದೆ.

ವಸ್ತಾದೆಪ್ಪ ಮುಸ್ಲಿಂರಾಗಿ ಹುಟ್ಟಿ ವೀರಶೈವ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಶಿವಯೋಗಿ ಆದವರು.

ಅವರು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಟ್ಕಲ ಗ್ರಾಮದ ವೀರಭದ್ರೇಶ್ವರರ ಭಕ್ತರಾಗಿದ್ದರು. ಇದೇ ಗ್ರಾಮ ಅವರ ಜನ್ಮಸ್ಥಳವಾಗಿರಬಹುದು ಎಂದು ಡಾ.ಸುಭಾಶ್ಚಂದ್ರ ಕೌಲಗಿ ಅವರು ರಚಿಸಿದ ‘ಮೋಟ್ನಳ್ಳಿ ವಸ್ತಾದೆಪ್ಪ’ ಕೃತಿಯಲ್ಲಿ ತಿಳಿಸಲಾಗಿದೆ.

ADVERTISEMENT

ತರಕಾರಿ ಮಾರಾಟಕ್ಕೆಂದು ಗುರುಮಠಕಲ್ ಗ್ರಾಮಕ್ಕೆ ತೆರಳಿದ ಅವರ ತಂದೆ–ತಾಯಿ ಗ್ರಾಮದ ಹೊರವಲಯದ ವಿರಕ್ತ ಮಠದಲ್ಲಿ 3 ವರ್ಷದ ಮಗನೊಂದಿಗೆ ತಂಗಿದ್ದರಂತೆ.

ತಂದೆ–ತಾಯಿ ಏಕಾಏಕಿ ಕಾಲರಾಕ್ಕೆ ಬಲಿಯಾದರು. ತಬ್ಬಲಿ ಬಾಲಕನನ್ನು ಮಠಾಧಿಪತಿ ಶಾಂತವೀರ ಸ್ವಾಮಿಗಳು ಬಾಲಕನ ಬಾಳು ಹಸನಾಗಲಿ ಎಂದು. ‘ಹಸನ’ ಎಂದು ಕರೆದರಂತೆ ಎಂದು ಒಂದು ಸಂಶೋಧನೆ ಹೇಳುತ್ತದೆ.

ಸಂತಾನ ಭಾಗ್ಯವಿಲ್ಲದ ಮುಸ್ಲಿಂ ದಂಪತಿ ಶಾಂತವೀರೇಶ್ವರ ಮಠದಲ್ಲಿ ಕಸಗುಡಿಸುವ ಕಾಯಕದಲ್ಲಿ ತೊಡಗಿದ್ದರು. ಮಠದ ಅಂಗಳದಲ್ಲಿ ಅನಾಥ ಮಗುವೊಂದು ಕಾಣಿಸಿತು. ಶಾಂತವೀರ ಸ್ವಾಮಿಗಳು ಅದನ್ನು ಆ ದಂಪತಿಗೆ ನೀಡಿ, ಶಿಶುವಿಗೆ ‘ಹಸನ’ ಎಂದು ನಾಮಕರಣ ಮಾಡಿದರಂತೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ಮತ್ತೊಂದು ಸಂಶೋಧನೆಯ ಪ್ರಕಾರ ಹಸನ್ ಅವರ ಹುಟ್ಟೂರು ಆಂಧ್ರಪ್ರದೇಶದ ಮಾಚರ್ಲಾ ಎಂದು ಹೇಳಲಾಗುತ್ತದೆ.

ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಮಕ್ತಲ್‌ ತಾಲ್ಲೂಕಿನ ನೇರಡಗುಂಬದ ಸಿದ್ದಲಿಂಗ ಸ್ವಾಮಿಗಳು ಹಸನ್‌ರಿಗೆ ಗುರು ದೀಕ್ಷೆ ನೀಡಿದ್ದರು ಎಂದು ತಿಳಿದು ಬಂದಿದೆ.

ವಿದ್ಯಾವಂತನಾಗಿದ್ದ ಹಸನ್‌ ಅವರನ್ನು ಕೋಟಗೇರಾ ಗ್ರಾಮದ ಅಪ್ಪಾರವ ಸಾಹೇಬ್ ದೇಶಮುಖ ತಮ್ಮ ಐವರು ಮಕ್ಕಳಿಗೆ ಶಿಕ್ಷಕರನ್ನಾಗಿ (ಉಸ್ತಾದ) ನೇಮಿಸುತ್ತಾರೆ. ಜನರ ಬಾಯಿಯಲ್ಲಿ ಉಸ್ತಾದಪ್ಪ, ಎನ್ನುವುದು ‘ವಸ್ತಾದೆಪ್ಪ’ ಆಗಿದೆ.

ದೇಶಮುಖ ಮನೆತನದ ಹಿರಿಯರು ಹಸನ್‌ಗೆ ಮೋಟ್ನಳ್ಳಿ ಗ್ರಾಮದ ಪೀರಜಾದೆ ಮನೆತನದ ಅಬ್ಬಸಾಮ ಎಂಬುವವರೊಂದಿಗೆ ಮದುವೆ ಮಾಡಿಸುತ್ತಾರೆ. ಮುಂದೆ ಅವರು ‘ಮೋಟ್ನಳಿ ಹಸನ್‌ ಸಾಹೇಬ’ ಎಂದು ಗುರುತಿಸಲ್ಪಡುತ್ತಾರೆ.

ಕವಿಯಾಗಿ, ತತ್ವಪದಕಾರರಾಗಿ, ಬಯಲಾಟ ಮಾಸ್ತರರಾಗಿ ಹೆಸರು ಮಾಡಿದ್ದ ‘ಹಸನ್ ವಸ್ತಾದೆಪ್ಪ’ ಅವರು ಉರ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಲೋಕಾನುಭವ, ಅಧ್ಯಾತ್ಮಿಕ ಶಕ್ತಿ, ಬಸವಾದಿ ಶರಣರ ಚಿಂತನೆಗಳನ್ನು ಒಳಗೊಂಡ 133 ಪದಗಳನ್ನು ರಚಿಸಿದರು ಎಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

‘ಇಟಪೂರೀಶಾ’ ಅಂಕಿತ ನಾಮದಿಂದ ತತ್ವಪದಗಳನ್ನು ರಚಿಸಿದ್ದಾರೆ.

‘ಹಂದರಕಿಯಲ್ಲಿ ಗುಗ್ಗುಳ ಹೊತ್ತಿಸಿ, ಮೋಟ್ನಳ್ಳಿ ಶರಣಪ್ಪನ ಅಹಂಕಾರ ಅಳಿಸಿ, ಕರ್ಣ ಕೋಟದಲ್ಲಿ ಬಯಲಾಟ ಕಲಿಸಿ, ಪವಾಡ ಮೆರೆದಿದ್ದಾರೆ’ ಎಂದು ಜನಪದರು ತಿಳಿಸುತ್ತಾರೆ.

ಅರಿಕೇರಾ ಕೆ, ಕಂದಕೂರ, ಚಿಂತನಳ್ಳಿ, ಗುಂಜನೂರು, ಚಿಂತಕುಂಟ, ಚಂಡ್ರಿಕಿ, ಕೆ.ಹೊಸಳ್ಳಿ, ಗಾಜರಕೋಟ ಗ್ರಾಮಗಳಲ್ಲಿ ಹಸನ್ ಸಾಹೇಬರು ಸುತ್ತಾಡಿದರು. ಶಿಷ್ಯ ಬಳಗವನ್ನು ಹೊಂದಿದ್ದರು.

‘ಬಹು ದೂರ, ಬಹು ದೂರ ಈ ಭವ ಸಾಗರ’ ಎಂದಿದ್ದ ಹಸನ್‌ ಸಾಹೇಬರು ತಮ್ಮ ಭವ ಸಾಗರ ದಾಟುವ ಹೊತ್ತು ಬಂದಾಗ ಶಿಷ್ಯ ಗುರಪ್ಪನಿಗೆ ಸಾವಿನ ಸುದ್ದಿ ತಿಳಿಸಿ, ಶಿಷ್ಯ ಬರುವವರೆಗೆ ಕಾದು, ಅವರನ್ನು ಅಪ್ಪಿಕೊಂಡು ಉಸಿರು ನಿಲ್ಲಿಸಿದರಂತೆ.

ಜಾತ್ರೆ: ವಿವಿಧ ಸ್ಪರ್ಧೆ
ಮಾ. 3 (ಬುಧವಾರ) ಜಾತ್ರೆ ಜರುಗಲಿದೆ. ರಾತ್ರಿ ಶರಣರ ಮನೆಯಿಂದ ವಸ್ತಾದೇಶ್ವರ ದರ್ಗಾದವರೆಗೆ ಗಂದೋತ್ಸವ, ನಡೆಯಲಿದೆ. ಗುರುವಾರ ರಾತ್ರಿ ದೀಪೋತ್ಸವ ಕಾರ್ಯಕ್ರಮ ಹಾಗೂ ಭಜನೆ ಜರುಗಲಿವೆ. ‌ಶನಿವಾರ (ಮಾ.6) ಕೈ ಕುಸ್ತಿ, ಉಸುಕಿನ ಚೀಲ ಎತ್ತುವ ಸ್ಪರ್ಧೆ ನಡೆಯಲಿದೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುವುದು ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.