ವಡಗೇರಾ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಶ್ರದ್ಧೆ–ಭಕ್ತಿಯಿಂದ ಮೊಹರಂ ಆಚರಿಸಲಾಯಿತು.
ಭಾನುವಾರ ರಾತ್ರಿಯಿಂದಲೇ ಅಲಾಯಿ ದೇವರಿಗೆ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ಭಕ್ತರು ಅಲಾಯಿ ದೇವರಿಗೆ ನೈವೇದ್ಯ ಸಮರ್ಪಿಸಿ ತಮ್ಮ ಹರಕೆ ತೀರಿಸಿದರು.
ಮಕ್ಕಳು, ಯುವಕರು ಜಾತಿ ಭೇದ ಮರೆತು ಹುಲಿ ಹಾಗೂ ಹೆಣ್ಣಿನ ವೇಷಧರಿಸಿ ತಮಟೆ (ಹಲಿಗೆ) ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ ಗಮನ ಸೆಳೆದರು. ಕರಡಿ ಕುಣಿತ, ಬಯಲಾಟ ವೇಷಧಾರಿಗಳು ಜನಮನಸೂರೆಗೊಂಡರು.
ಘೋರ ಕರ್ಬಲಾ ಕಾಳಗದ ವರ್ಣನೆ, ಅನ್ಯಾಯ, ವಂಚನೆ, ಶೌರ್ಯ, ಬಲಿದಾನಗಳ ಐತಿಹಾಸಿಕ ಕಥನವನ್ನು ಗ್ರಾಮದ ಜಾನಪದ ಹಾಡುಗಾರರು ‘ಸವಾಲ್ ಜವಾಬ್’ ಹಾಡುಗಳಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.
ವಡಗೇರಾ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ಪುಷ್ಪಗಳಿಂದ ಸಿಂಗರಿಸಿದ್ದ ಪಂಜಾಗಳನ್ನು ಸೋಮವಾರ ಮೆರವಣಿಗೆ ನಡೆಸಿ, ದಫನ್ ಕಾರ್ಯಕ್ರಮದ ಮೂಲಕ ಮೊಹರಂ ಆಚರಣೆ ಸಂಪನ್ನಗೊಂಡಿತು. ಅಲಾಯಿ ದೇವರ ಮೆರವಣಿಗೆಯಲ್ಲಿ ಹಿಂದೂ–ಮುಸ್ಲಿಮರು ಪಾಲ್ಗೊಂಡು ಭಾವೈಕ್ಯ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.