ಸುರಪುರ: ನಗರದಿಂದ 5 ಕಿ.ಮೀ. ಅಂತರದಲ್ಲಿರುವ ತಳವಾರಗೇರಿ ಗ್ರಾಮದಲ್ಲಿ ಮುಸ್ಲಿಮರು ಇಲ್ಲ. ಆದರೂ ಇಲ್ಲಿ ಕಳೆದ ಒಂದು ಶತಮಾನದಿಂದ ಮೊಹರಂ ಹಬ್ಬವನ್ನು ಹಿಂದೂಗಳು ಆಚರಿಸುತ್ತಾ ಬಂದಿದ್ದು ಭಾವೈಕ್ಯತೆ ಮೆರೆಯುತ್ತಿದ್ದಾರೆ.
ಗ್ರಾಮಸ್ಥರಿಗೆ ಸಂಕ್ರಾಂತಿ, ಯುಗಾದಿ, ದಸರಾ, ದೀಪಾವಳಿ ಜೊತೆಗೆ ಮೊಹರಂ ಹಬ್ಬವೂ ಸೇರಿಕೊಂಡಿದೆ. ಮೊಹರಂ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ಕೊಟ್ಟು ಒಗ್ಗಟ್ಟಿನಿಂದ ಆಚರಿಸುತ್ತಿರುವುದು ಮಾದರಿಯಾಗಿದೆ.
ಒಟ್ಟು ಆರು ದಿನ ನಡೆಯುವ ಮೊಹರಂಗೆ ಒಂದು ತಿಂಗಳಿನಿಂದ ತಯಾರಿ ಮಾಡಿಕೊಳ್ಳಲಾಗುತ್ತದೆ. ಆಶುರಖಾನಾಕ್ಕೆ ಸುಣ್ಣಬಣ್ಣ, ಪೀರಾಗಳಿಗೆ ಹೊಸ ಬಟ್ಟೆ, ಆಶುರಖಾನಾ ಸುತ್ತಮುತ್ತಲೂ ಸ್ವಚ್ಛತೆ, ಮುಂದುಗಡೆ ಅಗ್ನಿಕುಂಡ ತಯಾರು ಮಾಡಿಕೊಳ್ಳಲಾಗುತ್ತಿದೆ.
ಹಸೇನಿ, ಹುಸೇನಿ, ಸೈಯದ್ ಕಾಸೀಂ, ಲಾಲಸಾಬ, ಮೌಲಾಲಿ ಎಂಬ ಐದು ಪೀರಾಗಳನ್ನು ಕೂಡಿಸಲಾಗುತ್ತದೆ. ಪಕ್ಕದ ವಾಗಣಗೇರಿ ಗ್ರಾಮದಲ್ಲಿ ವಾಸವಿರುವ ಮುಸ್ತಫಾ ಸಿಪಾಯಿ ಎಂಬುವವರು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಾರೆ. ಪೀರಾಗಳ ಸವಾರಿಯನ್ನು ರಮೇಶ ಮಡಿವಾಳ, ಶಾಂತಪ್ಪ ಕಕ್ಕೇರಿ, ಸಣ್ಣದೇವಪ್ಪ ತೆಳಗೇರಿ, ಶಶಿಕುಮಾರಸ್ವಾಮಿ ಗಣಾಚಾರಿ ಎಂಬುವವರು ಮಾಡುತ್ತಿರುವುದು ವಿಶೇಷ.
ನಿತ್ಯವೂ ಕೆಲ ಗ್ರಾಮಸ್ಥರು ಪೀರಾಗಳಿಗೆ ಹೂವುಗಳನ್ನು ಸಲ್ಲಿಸುತ್ತಾರೆ. ಕೆಲವರು ಹೋಳಿಗೆ, ಇತರ ಖಾದ್ಯಗಳ ನೈವೇದ್ಯ ಸಲ್ಲಿಸುತ್ತಾರೆ. ಮುಸ್ತಫಾ ಪಂಜಾಗಳಿಗೆ ಪೂಜೆ ಸಲ್ಲಿಸಿ, ಲೋಬಾನ ಹಾಕುತ್ತಾರೆ.
ಈ ಪಂಜಾಗಳ ಖ್ಯಾತಿ ಸುತ್ತಮುತ್ತಲೂ ಇದೆ. ಅನಾರೋಗ್ಯ ಪೀಡಿತ ಜನರು, ಚಿಕ್ಕ ಮಕ್ಕಳು, ಸಂತಾನ ಇಲ್ಲದವರು ಇಲ್ಲಿಗೆ ಬಂದು ಮಂತ್ರ ಹಾಕಿಸಿಕೊಳ್ಳುತ್ತಾರೆ. ಸಕ್ಕರೆ, ದಕ್ಷಿಣೆ ನೀಡುತ್ತಾರೆ.
50 ರಿಂದ 60 ಯುವಕರು ಮೊಹರಂ ಹಾಡುಗಳನ್ನು ಕಲಿತಿದ್ದಾರೆ. ಹಾಡು ಹಾಡುತ್ತಾ ಅದಕ್ಕೆ ತಕ್ಕಂತೆ ಚಂದದ ಹೆಜ್ಜೆ (ನೃತ್ಯ) ಹಾಕುತ್ತಾರೆ. ನಿತ್ಯವೂ ರಾತ್ರಿ 8 ರಿಂದ 10 ಗಂಟೆವರೆಗೆ ಈ ಕಾರ್ಯಕ್ರಮ ನಡೆಯುತ್ತದೆ. ಹಲಗೆ ವಾದನದ ಸಾಥ್ ಇರುತ್ತದೆ. ವೀಕ್ಷಿಸಲು ಗ್ರಾಮಸ್ಥರ ದಂಡೇ ಸೇರಿರುತ್ತದೆ.
ಮಂಗಳವಾರ (ಜುಲೈ 1) ರಂದು ಪೀರಾಗಳನ್ನು ಕೂಡಿಸಲಾಗಿದೆ. ಜುಲೈ 5ರಂದು ಕತಲ್ ರಾತ್ರಿ ಇದೆ. ಜುಲೈ 6 ರಂದು ದಫನ್‍ನೊಂದಿಗೆ ಮೊಹರಂ ಸಮಾಪ್ತವಾಗುತ್ತದೆ. ದಫನ್ ದಿನ ಪೀರಾಗಳು ಗ್ರಾಮ ಪ್ರದಕ್ಷಿಣೆ ಮಾಡುತ್ತವೆ. ಜನರು ಹಾರ ಹಾಕಿ ಹರಕೆ ತೀರಿಸುತ್ತಾರೆ. ಒಂದು ವಾರವಿಡೀ ಗ್ರಾಮಸ್ಥರಲ್ಲಿ ಭಕ್ತಿಯ ಭಾವ ಮನೆ ಮಾಡಿರುತ್ತದೆ.
ಸಂಕ್ರಾಂತಿ, ಯುಗಾದಿ, ದಸರಾ, ದೀಪಾವಳಿಯಂತೆಯೇ ಮೊಹರಂ ಆಚರಣೆ ಒಟ್ಟು ಆರು ದಿನ ನಡೆಯುವ ಮೊಹರಂ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ
ನಮ್ಮ ತಂದೆಯವರ ಕಾಲದಲ್ಲಿ ಆರಂಭವಾದ ಮೊಹರಂ ಹಬ್ಬದಲ್ಲಿ ಕಳೆದ 60 ವರ್ಷಗಳಿಂದ ನಾನೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಗ್ರಾಮಕ್ಕೆ ಒಳ್ಳೆಯದಾಗಿದೆ- ಬಸನಗೌಡ ಗುರುಲಿಂಗಪ್ಪಗೌಡ ಪಾಟೀಲ ಗ್ರಾಮದ ಹಿರಿಯರು
ಕಳೆದ 10 ವರ್ಷಗಳಿಂದ ಸೈಯದ್ ಕಾಸೀಮ ಪೀರಾ ಸವಾರಿ ಮಾಡುತ್ತಿದ್ದೇನೆ. ಪೀರಾ ನಮಗೆ ಸಂಪೂರ್ಣ ಆಶೀರ್ವಾದ ಮಾಡಿದ್ದಾನೆ. ನಮ್ಮ ಕುಟುಂಬ ಸುಖವಾಗಿದೆ-ರಮೇಶ ಮಡಿವಾಳ ಪೀರಾ ಸವಾರಿ ಹಿಡಿಯುವವರು
- ಸ್ವಪ್ನದಲ್ಲಿ ಬಂದ ಪೀರಾಗಳು ಅದು 1925ರ ಸಮಯ. ಮಳೆ ಬೆಳೆ ಇಲ್ಲದೆ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದರು. ಪ್ಲೇಗ್ ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಒಂದು ದಿನ ಗ್ರಾಮದ ಮುಖ್ಯಸ್ಥರಾಗಿದ್ದ ಗುರುಲಿಂಗಪ್ಪಗೌಡ ಪಾಟೀಲ ಅವರ ಕನಸಿನಲ್ಲಿ ಪೀರಾಗಳ ದರ್ಶನವಾಗುತ್ತದೆ. ನಮ್ಮನ್ನು ಪ್ರತಿಷ್ಠಾಪಿಸಿ ಮೋಹರಂ ಆಚರಿಸಿ ನಿಮ್ಮ ಕಷ್ಟಗಳು ತೊಲಗುತ್ತವೆ ಎಂಬ ವಾಣಿಯಾಗುತ್ತದೆ. ಗ್ರಾಮಸ್ಥರಿಗೆ ವಿಷಯ ತಿಳಿಸಿದ ಗೌಡರು ಅವರೆಲ್ಲರ ಸಹಕಾರದಿಂದ ಅದೇ ವರ್ಷದಿಂದ ಮೊಹರಂ ಆಚರಣೆ ಆರಂಭಿಸುತ್ತಾರೆ. ಪವಾಡವೆಂಬಂತೆ ಮಳೆ ಬೆಳೆ ಚೆನ್ನಾಗಿ ಆಗಿ ಗ್ರಾಮ ಸುಭಿಕ್ಷವಾಗುತ್ತದೆ. ರೋಗ ರುಜಿನಗಳು ದೂರವಾಗುತ್ತವೆ. ಅಲ್ಲಿಂದ ಇಲ್ಲಿಯವೆಗೂ ಗ್ರಾಮಸ್ಥರು ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾ ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.