ADVERTISEMENT

ರೈತರು ಬೆಳೆಗೆ ನ್ಯಾನೊ ರಸಗೊಬ್ಬರ ಬಳಸಲಿ: ರಾಮನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:03 IST
Last Updated 28 ಜುಲೈ 2025, 6:03 IST
ಸುರಪುರದಲ್ಲಿ ಶನಿವಾರ ರೈತರಿಗೆ ನ್ಯಾನೊ ಡಿಎಪಿ ಮತ್ತು ನ್ಯಾನೊ ರಸಗೊಬ್ಬರ ಬಳಕೆ ಕುರಿತು ಅರಿವು ಮೂಡಿಸಲಾಯಿತು 
ಸುರಪುರದಲ್ಲಿ ಶನಿವಾರ ರೈತರಿಗೆ ನ್ಯಾನೊ ಡಿಎಪಿ ಮತ್ತು ನ್ಯಾನೊ ರಸಗೊಬ್ಬರ ಬಳಕೆ ಕುರಿತು ಅರಿವು ಮೂಡಿಸಲಾಯಿತು    

ಸುರಪುರ: ‘ರೈತರು ಬೆಳೆಗೆ ನ್ಯಾನೊ ಡಿಎಪಿ ಮತ್ತು ನ್ಯಾನೊ ರಸಗೊಬ್ಬರ ಬಳಕೆ ಮಾಡಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ಆತ್ಮಯೋಜನೆ ಅಡಿಯಲ್ಲಿ ನ್ಯಾನೊ ರಸಗೊಬ್ಬರ ಮತ್ತು ಸೂಕ್ಷ್ಮ ಪೋಷಕಾಂಶಗಳ ಬಳಕೆ ಕುರಿತು ಗ್ರಾಮ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಕ್ಷೇತ್ರದಲ್ಲಿ ಶೇ 75ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ 25ರಷ್ಟು ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

ADVERTISEMENT

ಈಗಾಗಲೇ ಬಿತ್ತನೆಯಾದ ಬೆಳೆಗೆ ಮೇಲು ಗೊಬ್ಬರವಾಗಿ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರ ಬಳಸುವುದು ವಾಡಿಕೆಯಾಗಿದೆ. ಆದರೆ ವಿಶ್ವದಲ್ಲಿ ಯುದ್ದದ ಕಾರ್ಮೋಡ ಕವಿದಿರುವುದರಿಂದ ರಸಗೊಬ್ಬರ ತಯಾರಿಕೆ ಕಚ್ಚಾ ವಸ್ತುಗಳು ವಿದೇಶಗಳಿಂದ ಪೂರೈಕೆಯಾಗುತ್ತಿಲ್ಲ’ ಎಂದರು.

‘ನೂತನವಾಗಿ ಆವಿಷ್ಕರಿಸಲಾದ ನ್ಯಾನೊ ಯೂರಿಯಾ ಹಾಗೂ ನ್ಯಾನೊ ಡಿಎಪಿ ರಸಗೊಬ್ಬರಗಳನ್ನು ರೈತರು ಬಳಸಬಹುದು. ಕೀಟನಾಶಕ ಸಿಂಪಡಣೆ ಮಾಡುವಾಗ ಸದರಿ ದ್ರಾವಣಗಳನ್ನು ಸೇರ್ಪಡಿಸಿ ಸಿಂಪಡಿಸಿದಲ್ಲಿ ಖರ್ಚು, ವೆಚ್ಚ ತಗ್ಗಿಸಬಹುದು. ಕೃಷಿ ಪರಿಕರ ಮಾರಾಟಗಾರರಲ್ಲಿ ನ್ಯಾನೊ ಯೂರಿಯಾ ಹಾಗೂ ನ್ಯಾನೊ ಡಿಎಪಿ ಲಭ್ಯವಿದ್ದು ಬಿತ್ತನೆಯಾದ 25-30 ದಿನ ಹಾಗೂ 40-50 ದಿನಗಳ ಅಂತರದಲ್ಲಿ ಸಿಂಪಡಣೆ ಮಾಡಬಹುದು. ಪ್ರತಿ ಲೀಟರ್ ನೀರಿಗೆ 5 ಎಂಎಲ್ ದ್ರಾವಣ ಬೆರಸಿ ಸಿಂಪಡಣೆ ಮಾಡಿದಲ್ಲಿ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರದ ಫಲಿತಾಂಶವನ್ನು ದ್ರವರೂಪದ ರಸಗೊಬ್ಬರದಲ್ಲಿಯೂ ಕಾಣಬಹುದಾಗಿದೆ’ ಎಂದು ಹೇಳಿದರು. ಕೃಷಿ ಅಧಿಕಾರಿಗಳು,  ಕಾರ್ಯತರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.