ಸುರಪುರ: ‘ಕಲಬುರಗಿಯಲ್ಲಿ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಅವರು ನೀಡಿದ ಹೇಳಿಕೆಗಳು ಖಂಡನೀಯ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಹೇಳಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಕುರಿತ ಬಳಸಿದ ಪದ ಮತ್ತು ರವಿಕುಮಾರ ಅವರ ಜಿಲ್ಲಾಧಿಕಾರಿ ಕುರಿತಾದ ಹೇಳಿಕೆಯನ್ನು ನಮ್ಮ ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ’ ಎಂದರು.
‘ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ಲೋಪ–ದೋಷಗಳ ಬಗ್ಗೆ ಮಾತಾಡಬೇಕು. ವೈಯಕ್ತಿಕ ವಿಚಾರಗಳ ಬಗ್ಗೆ ಅಲ್ಲ. ಜಿಲ್ಲಾಧಿಕಾರಿ ಒಬ್ಬ ದಕ್ಷ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸುಸೂತ್ರವಾಗಿ ನಡೆಸಿದ್ದಕ್ಕಾಗಿ ರಾಷ್ಟ್ರಪತಿಯಿಂದ ಪ್ರಶಸ್ತಿ ದೊರಕಿದೆ’ ಎಂದು ತಿಳಿಸಿದರು.
‘ನಾರಾಯಣಸ್ವಾಮಿ ಮತ್ತು ರವಿಕುಮಾರ ಅವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ಒತ್ತಾಯಿಸಿ ಜೂ.2 ರಂದು ಕಲಬುರಗಿಯ ಅಂಬೇಡ್ಕರ್ ವೃತ್ತದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಜಿಲ್ಲೆ, ತಾಲ್ಲೂಕುಗಳಿಂದ ನೂರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ’ ಎಂದರು.
ಮಹಾದೇವಪ್ಪ ಬಿಜಾಸಪೂರ ಮಾತನಾಡಿ, ‘ಒಂದು ಯೋಜನೆ ಇಟ್ಟುಕೊಂಡು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ನಾರಾಯಣಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಅಧೀನದಲ್ಲಿಯೇ ಬೆಳೆದು ಬಂದವರು. ಒಬ್ಬ ಮನುಷ್ಯನನ್ನು ವೈಯಕ್ತಿಕವಾಗಿ ಹೀಯಾಳಿಸುವುದು ತಪ್ಪು. ಕಲಬುರಗಿ ಜಿಲ್ಲಾಧಿಕಾರಿ ಬಗ್ಗೆ ಮಾತನಾಡಿರುವುದು ಕೂಡ ಖಂಡನೀಯ’ ಎಂದರು.
ಮುಖಂಡರಾದ ಮಾನಪ್ಪ ಕಟ್ಟಿಮನಿ, ಮಾನಪ್ಪ ಕರಡಕಲ್, ಬಸವರಾಜ ದೊಡ್ಡಮನಿ, ಖಾಜಾ ಹುಸೇನ್ ಗುಡಗುಂಟಿ, ವೀರಭದ್ರ ತಳವಾರಗೇರಾ, ಮೂರ್ತಿ ಬೊಮ್ಮನಳ್ಳಿ, ಬಸವರಾಜ ಬೊಮ್ಮನಳ್ಳಿ, ಮಹೇಶ ಯಾದಗಿರಿ, ರವಿಚಂದ್ರ ಬೊಮ್ಮನಳ್ಳಿ, ಹಣಮಂತ ಬಾಂಬೆ, ವಿಶ್ವನಾಥ ಹೊಸಮನಿ ಸೇರಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.