ADVERTISEMENT

ಶಹಾಪುರ |ತ್ಯಾಜ್ಯ ತೆರವುಗೊಳಿಸದ ಆಡಳಿತ: ಕಾಲುವೆ ನೀರು ಹರಿಯುವುದಾದರೂ ಹೇಗೆ?

ಟಿ.ನಾಗೇಂದ್ರ
Published 6 ಜುಲೈ 2025, 7:00 IST
Last Updated 6 ಜುಲೈ 2025, 7:00 IST
<div class="paragraphs"><p>ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಗ್ರಾಮದ ಬಳಿ ವಿತರಣಾ ಕಾಲುವೆ ಸಂಖ್ಯೆ 23ರಲ್ಲಿ ಬೆಳೆದು ನಿಂತ ಕಸ</p></div>

ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಗ್ರಾಮದ ಬಳಿ ವಿತರಣಾ ಕಾಲುವೆ ಸಂಖ್ಯೆ 23ರಲ್ಲಿ ಬೆಳೆದು ನಿಂತ ಕಸ

   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಕೃಷಿ ಚಟುವಟಿಕೆಗಾಗಿ ಜುಲೈ 8ರಿಂದ ಮುಂಗಾರು ಹಂಗಾಮಿಗೆ ನೀರು ಹರಿಸಲು ಕೃಷ್ಣಾ ಮೆಲ್ದಂಡೆ ಯೋಜನೆಯ(ಯುಕೆಪಿ) ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಆದರೆ ಬೇಸಿಗೆ ಸಮಯದಲ್ಲಿ ಕ್ಲೋಸರ್ ಅವಧಿಯಲ್ಲಿ (ನೀರು ನಿಲುಗಡೆಯ ಸಮಯ) ಕಾಲುವೆ ದುರಸ್ತಿ, ಹೂಳೆತ್ತುವುದು, ಜಂಗಲ್ ಕಟಿಂಗ್, ಕೊಚ್ಚಿ ಹೋದ ಮಣ್ಣು ಹಾಕುವುದು, ಕಾಲುವೆಯಲ್ಲಿ ಬೆಳೆದು ನಿಂತ ಆಪು, ಜಬ್ಬಲ, ಹಾಗೂ ಕಸವನ್ನು ಇಂದಿಗೂ ಸ್ವಚ್ಛಗೊಳಿಸುವ ಕಾರ್ಯಕ್ಕೆ ನಿಗಮದ ಎಂಜಿನಿಯರ್‌ಗಳು ಮುಂದಾಗಿಲ್ಲ. ಇಷ್ಟೆಲ್ಲ ತ್ಯಾಜ್ಯ ವಸ್ತು ಸಂಗ್ರಹವಾಗಿರುವಾಗ ಕಾಲುವೆಯಲ್ಲಿ ನೀರು ಹರಿಯುವುದಾದರು ಹೇಗೆ ಎಂಬ ಪ್ರಶ್ನೆ ನೀರು ವಂಚಿತ ಕೆಳಭಾಗದ ರೈತರಲ್ಲಿ ಮೂಡಿದೆ.

ADVERTISEMENT

ಸಾಮಾನ್ಯವಾಗಿ ಹಿಂಗಾರು ಹಂಗಾಮಿನ ಸಮಯದಲ್ಲಿ ಮಾರ್ಚ್ ಅಂತ್ಯದವರೆಗೆ ನೀರು ಹರಿಸಿ ನಂತರ ನಾಲ್ಕು ತಿಂಗಳ ಕ್ಲೋಸರ್ ಅವಧಿಯಲ್ಲಿ ಕಾಲುವೆ ದುರಸ್ತಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು.

ಆದರೆ ಪ್ರಸಕ್ತ ವರ್ಷ ಈ ಹಿಂದೆ ಏಪ್ರಿಲ್‌ 5ರವರೆಗೆ ನೀರು ಹರಿಸಲಾಗಿತ್ತು. ಜತೆಗೆ ಮುಂಗಾರು ಹಂಗಾಮಿನ ಬೆಳೆಗೆ ಮತ್ತೆ 15 ದಿನ ಮುಂಚಿತವಾಗಿ ನೀರು ಹರಿಸುತ್ತಿದ್ದಾರೆ.

‘ಕೆಲವು ಕಡೆ ತರಾತುರಿಯಲ್ಲಿ ಕೆಲಸ ನಿರ್ವಹಿಸಿ ಬಿಲ್ ಎತ್ತಿಕೊಳ್ಳುವ ವಾಮಮಾರ್ಗ ಅನುಸರಿಸಲಾಗುತ್ತಿದೆ’’ ಎಂದು ರೈತ ಮುಖಂಡ ಶರಣುರಡ್ಡಿ ಹತ್ತಿಗುಡೂರ ಆರೋಪಿಸಿದರು.

ಕಾಲುವೆ ದುರಸ್ತಿಗೊಳಿಸದೆ ನೀರು ಹರಿಸುವುದರಿಂದ ನೀರು ಪೋಲಾಗುವುದರ ಜೊತೆಯಲ್ಲಿ ಸಮರ್ಪಕವಾಗಿ ಜಮೀನುಗಳಿಗೆ ತಲುಪುವುದಿಲ್ಲ. ಅಲ್ಲದೆ ಕಾಲುವೆ ಜಾಲದ ರೈತರು ಮತ್ತೆ ನೀರು ವಂಚಿತಗೊಳ್ಳುವಂತೆ ಆಗುತ್ತದೆ ಎಂಬ ಕೂಗು ಕೆಳಭಾಗದ ರೈತರದ್ದಾಗಿದೆ.

ಕಣ್ಣು ಮುಚ್ಚಿರುವ ಸಹಕಾರ ಸಂಘ: ಮಲ್ಲಾಬಾದಿ

ರೈತರು ತಮ್ಮ ಜಮೀನುಗಳಿಗೆ ನೀರು ಹರಿಸಿಕೊಳ್ಳಬೇಕು. ಸಣ್ಣಪುಟ್ಟ ದುರಸ್ತಿ ಕೆಲಸ ಮಾಡಿಸಿಕೊಂಡು ನೀರು ಪಡೆದುಕೊಳ್ಳಬೇಕು. ರೈತರ ನಡುವೆ ಸಮನ್ವಯತೆ ಸಾಧಿಸುವ ಉದ್ದೇಶದಿಂದ ಜನ್ಮ ತಾಳಿದ ನೀರಾವರಿ ಬಳಕೆದಾರರ ಸಹಕಾರ ಸಂಘಗಳು ಕಣ್ಣು ಮುಚ್ಚಿವೆ ಎಂದು ರೈತ ಮುಖಂಡ ಆಶೋಕರಾವ ಮಲ್ಲಾಬಾದಿ ಹೇಳುತ್ತಾರೆ.

ನೀರು ಬಳಕೆದಾರರ ಸಂಘಗಳು ಸಕ್ರಿಯವಾಗಿ ತಮ್ಮ ಜಮೀನುಗಳ ವ್ಯಾಪ್ತಿಯಲ್ಲಿ ಶ್ರಮದಾನ ಇಲ್ಲವೆ ತಮ್ಮಲ್ಲಿಯೇ ನಿಧಿ ಸಂಗ್ರಹಿಸಿಕೊಂಡು ಕಾಲುವೆ ದುರಸ್ತಿಗೊಳಿಸಿಕೊಂಡರೆ ಮಾತ್ರ ಜಮೀನುಗಳಿಗೆ ನೀರು ದೊರಕಲಿದೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸಿ ನಿಲ್ಲಿಸುವುದು ಬಿಡಿ ಎಂಬ ಸಲಹೆ ನೀಡಿದ್ದಾರೆ.

ವಸೂಲಿ ಆಗದ ಕರ
‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಸಮರ್ಕವಾಗಿ ಎರಡು ಬೆಳೆಗೆ ಸಾಕಾಗುವಷ್ಟು ನೀರು ಸೆಳೆದುಕೊಳ್ಳುತ್ತಾರೆ. ಉತ್ತಮ ಆದಾಯವನ್ನೂ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಆದರೆ ನೀರಾವರಿ ಕರವನ್ನು ಪಾವತಿಸಲು ರೈತರು ಮುಂದೆ ಬರುತ್ತಿಲ್ಲ. ಇದರಿಂದ ನೀರಾವರಿ ಕರ ಬಾಕಿ ಹನುಮಂತನ ಬಾಲದಂತೆ ಬೆಳೆದು ನಿಂತಿದೆ’ ಎಂದು ನಿಗಮದ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
ನೀರು ಸ್ಥಗಿತಗೊಂಡ ಬಳಿಕ ಕಾಲುವೆ ದುರಸ್ತಿಗೆ ನಿಗಮವು ಮುಂದಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಈಗ ತರಾತುರಿಯಲ್ಲಿ ಕೆಲ ಕಡೆ ಕೆಲಸ ನಿರ್ವಹಿಸಿ ಬಿಲ್ ಪಾವತಿಸಿಕೊಳ್ಳುವ ಕೆಲಸವಾಗಿದೆ
ಶರಣುರಡ್ಡಿ ಹತ್ತಿಗೂಡೂರ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.