ADVERTISEMENT

122 ಗ್ರಾ.ಪಂಗಳಲ್ಲಿ ನರೇಗಾ ಕಾಮಗಾರಿ

ನರೇಗಾ ಕಾಮಗಾರಿಯಿಂದ ಕೃಷಿ ಹೊಂಡ, ಬದು ನಿರ್ಮಾಣದಲ್ಲಿ ನೀರು ಸಂಗ್ರಹ

ಬಿ.ಜಿ.ಪ್ರವೀಣಕುಮಾರ
Published 3 ಜೂನ್ 2020, 17:16 IST
Last Updated 3 ಜೂನ್ 2020, 17:16 IST
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಮಂಗಳವಾರ ಸುರಿದ ಮಳೆಯಿಂದ ನೀರು ತುಂಬಿಕೊಂಡ ಕೃಷಿಹೊಂಡ
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಮಂಗಳವಾರ ಸುರಿದ ಮಳೆಯಿಂದ ನೀರು ತುಂಬಿಕೊಂಡ ಕೃಷಿಹೊಂಡ   

ಯಾದಗಿರಿ: ಜಿಲ್ಲೆಯಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ನರೇಗಾ ಕಾಮಗಾರಿ ಭರದಿಂದ ಸಾಗಿದ್ದು,26,444 ಜನ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಜಿಲ್ಲೆಯ ಎಲ್ಲಾ 122 ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡುತ್ತ ಜಿಲ್ಲೆಯ ಕೂಲಿಕಾರರಿಗೆ ಶೇಕಡ 100ರಷ್ಟು ಗ್ರಾಪಂಗಳು ಕೆಲಸ ನೀಡಿದಂತೆ ಆಗಿದೆ.

ಜಿಲ್ಲೆಗೆ ಸಾವಿರಾರು ವಲಸೆ ಕಾರ್ಮಿಕರು ಬೇರೆ ಬೇರೆ ಕಡೆಯಿಂದ ಬಂದಿದ್ದಾರೆ. ಅವರನ್ನು ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿಕೊಡುವುದು ಜಿಲ್ಲಾಡಳಿತದ ಕೆಲಸವಾಗಿದೆ. ಹೀಗಾಗಿ ಅವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದಿನಕ್ಕೆ ₹275 ಕೂಲಿ ಕೆಲಸ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ನೀಡುವಂತ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಕೃಷಿ ಹೊಂಡ, ಬದು ನಿರ್ಮಾಣದಲ್ಲಿ ನೀರು ಸಂಗ್ರಹ: ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯ ಶಹಾಪುರ, ಸುರಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ನರೇಗಾ ಕಾಮಗಾರಿಯಲ್ಲಿ ನಿರ್ಮಿಸಿದಕೃಷಿಹೊಂಡ, ಬದುನಿರ್ಮಾಣ ಮತ್ತು ಕೆರೆ ಹೂಳೆತ್ತಿದ್ದರಿಂದ ನೀರು ತುಂಬಿ ಕೊಂಡಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಳವಾಗುತ್ತದೆ. ಇದು ಕೂಲಿ ಕಾರ್ಮಿಕರು ಮಾಡಿದ ಸಾರ್ಥಕ ಕೆಲಸವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ADVERTISEMENT

ದುರ್ಬಳಕೆಗೆ ಅವಕಾಶವಿಲ್ಲ: ‘ಸ್ವಲ್ಪ ಹಣ ಕೂಲಿ ನೀಡಿ ಉಳಿದ ಹಣ ಪಿಡಿಒ ಮತ್ತಿತರರು ನುಂಗುತ್ತಾರೆ ಎನ್ನುವ ಭಾವನೆ ಬೇಡ. ಕೂಲಿಕಾರರ ಖಾತೆಗೆ ಹಣ ನೇರವಾಗಿ ಜಮೆ ಆಗುತ್ತದೆ. ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಪಾವತಿ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಪಾವತಿ ಆಗುವುದರಿಂದ ದುರ್ಬಳಕೆಗೆ ಅವಕಾಶ ಇಲ್ಲ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಹೇಳುತ್ತಾರೆ.

‘ಬೆಳಿಗ್ಗೆ6 ರಿಂದ7 ಗಂಟೆಯ ವರೆಗೆ ಪ್ರತಿದಿನ ಕೂಲಿ ಪಾವತಿಯಾಗಿರುವ ಬಗ್ಗೆ ಪರಿಶೀಲಿಸುವೆ. ಹೀಗಾಗಿ ಇದರಲ್ಲಿ ಅವ್ಯಹಾರ ನಡೆಯುವುದಿಲ್ಲ’ ಎನ್ನುತ್ತಾರೆ ಅವರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಜೊತೆಗೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಕೂಲಿ ಕೆಲಸ ನೀಡಲಾಗುತ್ತಿದೆ ಎಂದು ಜಿಪಂ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಹೇಳಿದರು.

7 ದಿನಕ್ಕೊಮ್ಮೆ ನರೇಗಾ ಕೂಲಿಕಾರರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ಹೆಚ್ಚು ಮಾನವ ದಿನಗಳು ಸೃಷ್ಟಿಯಾಗಿವೆ ಎಂದು ಜಿ.ಪಂ ಸಿಇಒ ಶಿಲ್ಪಾಶರ್ಮಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.