ADVERTISEMENT

ಯಾದಗಿರಿ: ಸಂಕಷ್ಟ ಮೆಟ್ಟಿನಿಂತ ಪತ್ರಿಕಾ ವಿತರಕರು

ಕೋವಿಡ್‌ ಕಾಲದಲ್ಲಿ ಎದೆಗುಂದದ ಏಜೆಂಟರು; ಮನೆಮನೆಗೆ ಪತ್ರಿಕೆ ತಲುಪಿಸಿದರು

ಬಿ.ಜಿ.ಪ್ರವೀಣಕುಮಾರ
Published 4 ಸೆಪ್ಟೆಂಬರ್ 2020, 1:44 IST
Last Updated 4 ಸೆಪ್ಟೆಂಬರ್ 2020, 1:44 IST
ವೆಂಕಟೇಶ ದಯಾಳ, ಯಾದಗಿರಿ ನಗರ
ವೆಂಕಟೇಶ ದಯಾಳ, ಯಾದಗಿರಿ ನಗರ   

ಯಾದಗಿರಿ: ಕಣ್ಣಿಗೆ ಕಾಣಿಸದ ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಿಸಿದೆ. ಜೊತೆಗೆ ಎಲ್ಲ ವರ್ಗದ ಜನರು ಜರ್ಝಿತರಾಗುವಂತೆ ಮಾಡಿದೆ. ಪತ್ರಿಕಾ ವಿತರಕರು/ಏಜೆಂಟರು ಇದಕ್ಕೆ ಹೊರತಲ್ಲ. ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಎಲ್ಲರೂ ಮನೆ ಸೇರಿಕೊಂಡರೆ ವಿತರಕರು ಮಾತ್ರ ಮನೆಮನೆಗೆ ಪತ್ರಿಕೆಗಳನ್ನು ಮುಟ್ಟಿಸುತ್ತಿದ್ದರು. ಅವರೂ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ.

ಸೀಲ್‌ಡೌನ್‌, ಲಾಕ್‌ಡೌನ್‌ ಪ್ರದೇಶದಲ್ಲಿ ಪತ್ರಿಕೆಗಳನ್ನು ಮುಟ್ಟಿಸಲು ಹರಸಾಹಸವನ್ನೆ ಮಾಡಲಾಯಿತು. ಪತ್ರಿಕೆತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಯಾವುದೇ ಸಮಸ್ಯೆಗಳು ಆಗಿರಲಿಲ್ಲ. ಆದರೆ, ಖಾಲಿ ಸೈಕಲ್‌, ವಾಹನದಲ್ಲಿ ಬರುವಾಗ ಪೊಲೀಸರಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿತ್ತು. ವಿತರಕರು ಎನ್ನಲು ಎಲ್ಲ ಪತ್ರಿಕೆಗಳು ಖಾಲಿಯಾದಾಗ ದೃಢಪಡಿಸುವುದೇ ಸಮಸ್ಯೆಯಾಗಿತ್ತು ಎಂದು ವಿತರಕರು ಮೆಲಕು ಹಾಕುತ್ತಾರೆ.

ಓದುಗರಲ್ಲಿ ಕೊರೊನಾ ಭಯ: ‘ಪತ್ರಿಕೆಗಳಿಂದ ಕೊರೊನಾ ಹರಡುವುದಿಲ್ಲ ಎಂಬ ಸುದ್ದಿ ಗೊತ್ತಿದ್ದರೂ ಅನೇಕರು ಪತ್ರಿಕೆಗಳನ್ನು ತಮ್ಮ ಮನೆಗಳಿಗೆ ಪತ್ರಿಕೆ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಇನ್ನೂ ಕೆಲವರು ಗೇಟಿನ ಆಚೆ ನಿಂತೆ ಪತ್ರಿಕೆ ತೆಗೆದುಕೊಳ್ಳುತ್ತಿದ್ದರು. ನಮ್ಮನ್ನು ಹತ್ತಿರಕ್ಕೂ ಬರುಗೊಡಿಸುತ್ತಿರಲಿಲ್ಲ. ಇಂಥದೆಲ್ಲವನ್ನು ಸಹಿಸಿಕೊಂಡು ನಾವು ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ’ ಎನ್ನುತ್ತಾರೆ ವಿತರಕರು.

ADVERTISEMENT

ಆ್ಯಪ್‌ ಮೊರೆ ಹೋದ ಓದುಗರು: ಕೊರೊನಾ ಕಾಲಕ್ಕಿಂತ ಮುಂಚೆ ಪತ್ರಿಕೆ ಬಿಲ್‌ ಅನ್ನು ರಸೀದಿ ಮೂಲಕ ಓದುಗರಿಗೆ ತಲುಪಿಸಲಾಗುತ್ತಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣದಿಂದಓದುಗರು ಆನ್‌ಲೈನ್‌ ಮೂಲಕ ಬಿಲ್‌ ಪಾವತಿಸಿದ್ದಾರೆ. ಈ ಬಗ್ಗೆ ವಿತರಕರು ಮಾಹಿತಿ ಹಂಚಿಕೊಂಡಿದ್ದಾರೆ.

‘ಈ ಮೊದಲು ಬಿಲ್‌ಗಾಗಿ ರಸೀದಿ ನೀಡಲಾಗುತ್ತಿತ್ತು. ಆದರೆ, ಓದುಗರು ಆ್ಯಪ್‌ಗಳ ಮೂಲಕ ಹಣ ಸಂದಾಯ ಮಾಡಿದ್ದಾರೆ. ಇನ್ನು ಕೆಲವರು ಕೈಗೆ ನಗದು ಹಣ ನೀಡಿದ್ದಾರೆ’ ಎನ್ನುತ್ತಾರೆ ವಿತರಕ ದಯಾನಂದ ಹಿರೇಮಠ.

ಪತ್ರಿಕೆಗಳಿಗೆ ಕರಾಳ ದಿನಗಳು: ‘ತಮ್ಮ ತಂದೆಯವರ ಕಾಲದಿಂದಲೂ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಕೊರೊನಾ ದಿನಗಳಂತದ್ದೂ ಎಂದೂಕಂಡಿಲ್ಲ. ಕೆಲವರು ಒಂದು ತಿಂಗಳು ಪತ್ರಿಕೆ ಹಾಕಬೇಡಿ ಎಂದರು. ಪತ್ರಿಕೆ ಹಾಕುವ ಹುಡುಗರು ಪತ್ರಿಕೆಗಳನ್ನು ಹಾಕುವುದನ್ನು ಬಿಟ್ಟು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ಹೇಗೋ ಅವರಿಗೆ ತಿಳಿ ಹೇಳಲಾಯಿತು. ಇದು ಈ ಹಿಂದೆ ಸೇವೆ ಎನ್ನುವ ವಾತಾವರಣ ಇತ್ತು.ಈಗ ವ್ಯಾಪಾರ ಮನೋಭಾವ ಬಂದಿದೆ. ಪತ್ರಿಕೆಗಳನ್ನು ಹಾಕಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಕೊರೊನಾ ಕಾಲದ ಕಷ್ಟಗಳನ್ನು ಎದುರಿಸಿ ಮುನ್ನುಗ್ಗುತ್ತಿದ್ದೇವೆ’ ಎನ್ನುತ್ತಾರೆ ವಿತರಕರಾದಪ್ರಹ್ಲಾದ್ ರುಘುನಾಥ್‌ರಾವ್‌ ತಿಳಗೋಳ ಅವರು.

‘ಓದುಗರಲ್ಲಿಕೊರೊನಾ ಭಯ ಓಡಿಸಲು ಸ್ಯಾನಿಟೈಸ್‌, ಕೈಗಳಿಗೆ ಗ್ಲೌಸ್‌ ಹಾಕಿಕೊಂಡು ವಿತರಣೆ ಮಾಡಿದ್ದೇವೆ. ಆದರೂ ಕೆಲವರು ಬೇಡ
ಎನ್ನುತ್ತಿದ್ದರು. ಇದಕ್ಕೆಲ್ಲ ಭಯವೇ ಕಾರಣವಾಗಿತ್ತು. ಆದರೂ ನಾವು ನಮ್ಮ ಕೆಲಸದಲ್ಲಿ ಶ್ರದ್ಧೆ ವಹಿಸಿ ಕೆಲಸ ಮಾಡಿದ್ದೇವೆ’ ಎಂದು ಶಿವಕುಮಾರ ಅಕ್ಕಿ ಹೇಳುತ್ತಾರೆ.

‘ಸರ್ಕಾರ ಪತ್ರಿಕಾ ವಿತರಕರನ್ನು ಗುರುತಿಸಬೇಕು. ಅವರಿಗೆ ಸರ್ಕಾರದ ಸೌಲಭ್ಯ ಯಾವುದು ತಲುಪಿಲ್ಲ. ಬೇರೆ ಸಮುದಾಯ, ವೃತ್ತಿಯವರಿಗೆ ಲಾಕ್‌ಡೌನ್‌ ಪರಿಹಾರ ಧನ ನೀಡಲಾಗಿದೆ. ಆದರೆ, ಪತ್ರಿಕಾ ವಿತರಕರಿಗೆಸರ್ಕಾರದಿಂದ ಯಾವುದೇ ಪರಿಹಾರ ವಿತರಿಸಲಿಲ್ಲ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕಾರ್ಮಿಕರೆಂದು ಪರಿಹಾರ ನೀಡಬೇಕು’ಎನ್ನುತ್ತಾರೆ ತೋಟೇಂದ್ರ ಎಸ್.ಮಾಕಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.