ADVERTISEMENT

ರಾಷ್ಟ್ರೀಯ ಆರೋಗ್ಯ ಅಭಿಯಾನದ ಹೊರಗುತ್ತಿಗೆ ನೌಕರರಿಗೆ 3 ತಿಂಗಳಾದರೂ ಬಾರದ ವೇತನ

ಮಲ್ಲಿಕಾರ್ಜುನ ನಾಲವಾರ
Published 12 ಅಕ್ಟೋಬರ್ 2025, 1:27 IST
Last Updated 12 ಅಕ್ಟೋಬರ್ 2025, 1:27 IST
ಎನ್‌ಎಚ್‌ಎಂ
ಎನ್‌ಎಚ್‌ಎಂ   

ಯಾದಗಿರಿ: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್ಎಂ) ಅಡಿ ರಾಜ್ಯದ ಆರೋಗ್ಯ ಇಲಾಖೆ ಕಚೇರಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ, ಹೊರಗುತ್ತಿಗೆ  ಸಿಬ್ಬಂದಿಗೆ ಮೂರು ತಿಂಗಳಿಂದ ವೇತನ ಬಂದಿಲ್ಲ. ಸುಮಾರು 30 ಸಾವಿರ ನೌಕರರಿಗೆ ಹಬ್ಬಗಳ ಸಂಭ್ರಮ ಇಲ್ಲವಾಗಿದೆ.  

ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು, ಔಷಧ ವಿತರಕರು, ಆರೋಗ್ಯ ಸಂರಕ್ಷಣಾಧಿಕಾರಿ, ಆರೋಗ್ಯ ವ್ಯವಸ್ಥಾಪಕರು, ಸಂಯೋಜಕರು, ನೇತ್ರ ಸಹಾಯಕರು ಸೇರಿ 130ಕ್ಕೂ ಹೆಚ್ಚು ಹುದ್ದೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆಯಲ್ಲಿ ಈ ನೌಕರರು ಕೆಲಸ ಮಾಡುತ್ತಿದ್ದಾರೆ. ಸುಮಾರು 30 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಸಂಬಳವಿಲ್ಲದೆ ಪರದಾಡುತ್ತಾ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ.

‘ಅಕ್ಟೋಬರ್ ತಿಂಗಳು ಬಂದರೂ ಜುಲೈ ತಿಂಗಳ ವೇತನ ಬಂದಿಲ್ಲ. ಗಣೇಶ ಚತುರ್ಥಿ, ದಸರಾ ಹಬ್ಬಗಳನ್ನು ಹೇಗೋ ಕಳೆದಿದ್ದೇವೆ. ಮುಂಬರುವ ದೀಪಾವಳಿ ಹಬ್ಬವನ್ನು ಕತ್ತಲಲ್ಲಿ ಆಚರಿಸುವ ಸ್ಥಿತಿ ಬಂದಿದೆ. ಸರ್ಕಾರದ ಭಾಗವಾಗಿ ಕೆಲಸ ಮಾಡಿದ್ದರೂ ಸರಿಯಾಗಿ ಸಂಬಳ ಸಿಗದೆ ತಿಂಗಳ ಕೊನೆಯಲ್ಲಿ ಇನ್ನೊಬ್ಬರ ಮುಂದೆ ಹಣಕ್ಕಾಗಿ ಕೈಚಾಚುವ ಸ್ಥಿತಿ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಪದಾಧಿಕಾರಿಯೊಬ್ಬರು ಅಲವತ್ತುಕೊಂಡರು.

ADVERTISEMENT

‘ನಾಲ್ಕೈದು ನೌಕರರು ನನಗೆ ಕರೆ ಮಾಡಿ ₹5,000 ಮನೆ ಬಾಡಿಗೆಗೆ ಸಾಲ ಕೇಳಿದ್ದಾರೆ. ಮತ್ತೊಬ್ಬರು ಮಗಳ ಆಸ್ಪತ್ರೆಯ ವೆಚ್ಚಕ್ಕೆ ಕೈಚಾಚಿದ್ದಾರೆ. ಇನ್ನೊಬ್ಬರು ಮಕ್ಕಳ ಶಾಲೆಯ ಶುಲ್ಕ, ವಾಹನ ಬಾಡಿಗೆಗೆ ಹಣ ಕೇಳಿದ್ದಾರೆ. ಹೀಗೆ, ವೇತನ ಇಲ್ಲದೆ ಒಬ್ಬರಲ್ಲ ಒಬ್ಬರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಾತ್ರ ವೇತನ ಪಾವತಿಗೆ ಮುಂದಾಗುತ್ತಿಲ್ಲ’ ಎಂದು ದೂರಿದರು.

‘ಸಂಘದ ಗೌರವ ಅಧ್ಯಕ್ಷ ಆಯನೂರು ಮಂಜುನಾಥ್‌ ಅವರು ಯೋಜನೆಯ ನಿರ್ದೇಶಕರು, ಆರೋಗ್ಯ ಇಲಾಖೆಯ ಸಚಿವರನ್ನು ಭೇಟಿಯಾಗಿ ನೌಕರ ಸಂಕಷ್ಟವನ್ನು ಮನವರಿಕೆ ಮಾಡಿದ್ದಾರೆ. ವಿಳಂಬಕ್ಕೆ ತಾಂತ್ರಿಕ ಕಾರಣದ ನೆಪ ಹೇಳಿದ್ದಾರೆ. ಸರ್ಕಾರದ ಬಳಿಕ ಗುತ್ತಿಗೆ ನೌಕರರ ವಾರ್ಷಿಕ ₹56 ಕೋಟಿ ವೇತನ ಕೊಡುವಷ್ಟು ದುಡ್ಡಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಎನ್‌ಎಚ್‌ಎಂ ನಿರ್ದೇಶಕರು ಸಿಗಲಿಲ್ಲ.

ಅನುದಾನ ಬಾರದಕ್ಕೆ ವೇತನ ವಿಳಂಬವಾಗಿದೆ. ಈ ಬಗ್ಗೆ ವರದಿಯನ್ನು ಕಳುಹಿಸಿದ್ದು ಒಂದು ವಾರದಲ್ಲಿ ಪಾವತಿ ಆಗಲಿದೆ
ಡಾ.ಮಹೇಶ ಬಿರಾದಾರ ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

‘ಸ್ಪರ್ಶ ಖಾತೆಗೆ ಬದಲಾವಣೆಯ ನೆಪ’

"‘ನೌಕರರ ಈಗಿರುವ ಖಾತೆಗಳನ್ನು ಸ್ಪರ್ಶ ಖಾತೆಗೆ ಜೋಡಣೆ ಮಾಡಿ ಬದಲಾವಣೆ ಮಾಡುತ್ತಿರುವುದರಿಂದ ವೇತನ ವಿಳಂಬ ಆಗುತ್ತಿರುವುದಾಗಿ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಆದರೆ ವೇತನ ಮಾತ್ರ ಬಿಡುಗಡೆ ಮಾಡುತ್ತಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಅಧ್ಯಕ್ಷ ಶ್ರೀಕಾಂತ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ತಾಂತ್ರಿಕ ಕಾರಣಕ್ಕೆ ತಡವಾಗುತ್ತಿದ್ದು 10 ದಿನಗಳಲ್ಲಿ ಕೊಡುವುದಾಗಿ 20 ದಿನಗಳಿಂದ ಇದನ್ನೇ ಅಧಿಕಾರಿಗಳು ಉಚ್ಚರಿಸುತ್ತಿದ್ದಾರೆ. ಈ ಹಿಂದೆ ಇದೇ ರೀತಿ ತಡವಾಗಿದ್ದಾಗ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿಕೊಂಡು ಚೆಕ್ ಮೂಲಕ ಕೊಟ್ಟಿದ್ದರು. ಈಗಲೂ ಆ ಮಾದರಿ ಪಾಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.