ADVERTISEMENT

ಮೂಲಸೌಕರ್ಯ ವಂಚಿತ ರಾಂಪೂರು

ಹದಗೆಟ್ಟ ರಸ್ತೆ, ಕುಡಿಯುವ ನೀರಿನ ಸಮಸ್ಯೆ; ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹ

ಮಲ್ಲಿಕಾರ್ಜುನ ಅರಿಕೇರಕರ್
Published 21 ಏಪ್ರಿಲ್ 2021, 5:41 IST
Last Updated 21 ಏಪ್ರಿಲ್ 2021, 5:41 IST
ಸೈದಾಪುರ ಸಮೀಪದ ರಾಂಪೂರು ಕೆ ಗ್ರಾಮದ ಪ್ರವೇಶ ದ್ವಾರದ ಮುಖ್ಯ ರಸ್ತೆಯ ಮೇಲೆ ಚರಂಡಿಯ ನೀರು ಹರಿಯುತ್ತಿರುವುದು
ಸೈದಾಪುರ ಸಮೀಪದ ರಾಂಪೂರು ಕೆ ಗ್ರಾಮದ ಪ್ರವೇಶ ದ್ವಾರದ ಮುಖ್ಯ ರಸ್ತೆಯ ಮೇಲೆ ಚರಂಡಿಯ ನೀರು ಹರಿಯುತ್ತಿರುವುದು   

ರಾಂಪೂರು ಕೆ (ಸೈದಾಪುರ): ಸಮೀಪದ ರಾಂಪೂರು (ಕೆ) ಗ್ರಾಮವು ಮೂಲಸೌಕರ್ಯದಿಂದ ವಂಚಿತವಾಗಿದೆ. ಗ್ರಾಮಕ್ಕೆ ಪ್ರವೇಶ ಕಲ್ಪಿಸುವ ಮುಖ್ಯರಸ್ತೆಯು ಹದಗೆಟ್ಟಿದೆ.

ಗ್ರಾಮದಲ್ಲಿ ಸಿ.ಸಿ ರಸ್ತೆ ಇಲ್ಲದೆ ಸಾರ್ವಜನಿಕರು, ಗ್ರಾಮಸ್ಥರು ಓಡಾಡಲು ತೀವ್ರವಾದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಗ್ರಾಮದಲ್ಲಿ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಲಾದ ಚರಂಡಿಯಲ್ಲಿ ಸರಾಗವಾಗಿ ಸಾಗಬೇಕಾದ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ದ್ವಿಚಕ್ರ, ತ್ರಿಚಕ್ರ ವಾಹನಗಳು ಈ ಕೆಸರುಗದ್ದೆಯಾದ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆಯಲ್ಲಿ ದೊಡ್ಡದಾದ ತಗ್ಗು ಗುಂಡಿಗಳು ನಿರ್ಮಾಣವಾಗುತ್ತಿವೆ. ಇದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ನೀರು ನಿಂತಿರುವ ತಗ್ಗು ಗುಂಡಿಗಳಲ್ಲಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಸಂದರ್ಭದಲ್ಲಿಯೇ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟ ದಾಗಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ಜನರ ಆರೋಗ್ಯದ ಹಿತದೃಷ್ಟಿಯಿಂದ ಕುಡಿಯಲು ಶುದ್ಧ ನೀರನ್ನು ಒದಗಿಸಲು ಸರ್ಕಾರ ಪ್ರತಿಯೊಂದು ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿದೆ. ಆದರೆ ಈ ಗ್ರಾಮದಲ್ಲಿ ನಿರ್ಮಿಸಲಾದ ಘಟಕವು ಕೆಟ್ಟು ನಿಂತು ಸುಮಾರು ನಾಲ್ಕು ತಿಂಗಳು ಕಳೆದರೂ ಅದನ್ನು ದುರಸ್ತಿಗೊಳಿಸದೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮದ ಜನರಿಗೆ ಕೊಳವೆ ಬಾವಿಗಳ ನೀರೇ ಗತಿಯಾಗಿದೆ.

ಉಪಯೋಗಕ್ಕೆ ಬಾರದ ಓವರೆ ಹೆಡ್ ಟ್ಯಾಂಕ್: ಗ್ರಾಮದಲ್ಲಿ ನಿರ್ಮಿಸಲಾದ ಓವರ್ ಹೆಡ್ ಟ್ಯಾಂಕ್‍ನಲ್ಲಿ ನೀರು ಸಂಗ್ರಹಿಸದೆ ನಿರುಪಯುಕ್ತವಾಗಿದೆ. ಹೆಚ್ಚಿನ ನೀರು ಸಂಗ್ರಹಿಸಿ ಗ್ರಾಮದಲ್ಲಿರುವ ಮನೆ ಮನೆಗಳಿಗೆ ನಳಗಳ ಮೂಲಕ ನೀರು ಪೂರೈಸುವ ಉದ್ದೇಶದಿಂದ ಸ್ಥಾಪಿಸಲಾದ ಟ್ಯಾಂಕ್ ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.