ADVERTISEMENT

ಕೋಣಸಿರಸಿಗಿ: ಸ್ವಚ್ಚತೆ ಮರಿಚೀಕೆ

ಗ್ರಾಮದ ಪ್ರಮುಖ ರಸ್ತೆಯ ಮೇಲೆಯೇ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 10:18 IST
Last Updated 18 ಜನವರಿ 2020, 10:18 IST
ಕೋಣಸಿರಸಿಗಿ ಗ್ರಾಮದ ಅಂಬೇಡ್ಕರ್ ವಾರ್ಡ್‍ನಲ್ಲಿ ರಸ್ತೆ ಮೇಲೆ ನೀರು ತುಂಬಿ ರಸ್ತೆ ಹದಗೆಟ್ಟಿರುವುದು
ಕೋಣಸಿರಸಿಗಿ ಗ್ರಾಮದ ಅಂಬೇಡ್ಕರ್ ವಾರ್ಡ್‍ನಲ್ಲಿ ರಸ್ತೆ ಮೇಲೆ ನೀರು ತುಂಬಿ ರಸ್ತೆ ಹದಗೆಟ್ಟಿರುವುದು   

ಯಡ್ರಾಮಿ: ರಸ್ತೆ ಮೇಲೆ ಚರಂಡಿ ನೀರು, ಸೊಳ್ಳೆಗಳ ಕಾಟ, ಹಂದಿಗಳ ಹಾವಳಿ, ಗಬ್ಬು ವಾಸನೆ ನಡುವೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೋಣಸಿರಸಿಗಿ ಗ್ರಾಮದ ವಾರ್ಡ್2ಕ್ಕೆ ಹೋಗುವ ರಸ್ತೆ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಗ್ರಾಮಸ್ಥರು ಇವುಗಳ ನಡುವೆ ಜೀವನ ನಡೆಸಬೇಕಾಗಿದೆ.

ಗ್ರಾಮದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ರಸ್ತೆ ಪಕ್ಕದಲ್ಲಿ ಒಳಚರಂಡಿ ವ್ಯವಸ್ಥೆ ಮಾಡದ ಕಾರಣ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಹಲವು ವರ್ಷಗಳಿಂದ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಒಳಚರಂಡಿ, ನೀರು, ಬೀದಿ ದೀಪ ಹಾಗೂ ಇತರೆ ಸೌಲಭ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಲಾಗಿದೆ. ಚರಂಡಿಗಳಲ್ಲಿ ಮನೆಯ ಕಸ, ಪ್ಲಾಸ್ಟಿಕ್,ಒಡೆದ ಗಾಜುಗಳು, ಹಳೆಯ ವಸ್ತ್ರಗಳು, ತ್ಯಾಜ್ಯ ಕಣ್ಣಿಗೆ ರಾಚುತ್ತದೆ.

ADVERTISEMENT

ಗ್ರಾಮದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಚರಂಡಿ ನೀರು ಸರಾಗವಾಗಿ ಹರಿಯದೆ ಸೊಳ್ಳೆ ಕಾಟ ಹೆಚ್ಚಾಗಿದೆ. ಗ್ರಾಮದಲ್ಲಿ ಕಸ ತೊಟ್ಟಿ ತುಂಬಿ ರಸ್ತೆ ಮೇಲೆ ಚೆಲ್ಲಾಡುತ್ತಿರುವುದು ಒಂದೆಡೆಯಾದರೆ, ಮೊತ್ತೊಂದೆಡೆ ಹಂದಿಗಳಿಗೆ ಮುಖ್ಯ ರಸ್ತೆಯ ಚರಂಡಿಯೇ ವಾಸಸ್ಥಾನವಾಗಿದೆ.

ಗ್ರಾಮ ಸ್ವಚ್ಛತೆ ಅಭಿಯಾನ ಒಂದೆಡೆ ಮರೀಚಿಕೆಯಾದರೆ, ಇನ್ನೊಂದಡೆ ಗ್ರಾಮ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ವೆಚ್ಚ ಮಾಡುತ್ತಿದೆ. ಆದರೆ ಅನುದಾನ ಸದ್ಬಳಕೆ ಆಗುತ್ತಿಲ್ಲ. ಸಂಬಂಧಪಟ್ಟ ಗ್ರಾ.ಪಂ, ಪಿಡಿಒ, ಸದಸ್ಯರು ಗಮನ ಹರಿಸುತ್ತಿಲ್ಲ. ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಗಮನಕ್ಕೆ ತಂದರು ಸಮಸ್ಯೆಗಳು ಮಾತ್ರ ಪರಿಹಾರವಾಗಿಲ್ಲ. ಜನಗಳು ಕಷ್ಟದಲ್ಲಿ ಜೀವನ ನಡೆಸಬೇಕಾಗಿದೆ. ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಎಚ್ಚತ್ತುಕೊಂಡು ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿ ದೇವೇಂದ್ರ ಸಿಂಗೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.