ADVERTISEMENT

ಯರಗೋಳದಲ್ಲಿ ಪಶು ವೈದ್ಯರಿಲ್ಲದೆ ಜಾನುವಾರುಗಳ ನರಳಾಟ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 19:30 IST
Last Updated 30 ಆಗಸ್ಟ್ 2020, 19:30 IST
ಯರಗೋಳ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ
ಯರಗೋಳ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ   

ಯರಗೋಳ: ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ತಜ್ಞ ವೈದ್ಯರ ಕೊರತೆಯಿಂದಾಗಿ ಅನಾರೋಗ್ಯದಿಂದ ಬಳಲುತ್ತಿರುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೃಷಿ ಪ್ರಧಾನವಾಗಿರುವ ಈ ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ಆದರೆ ಪಶು ಚಿಕಿತ್ಸಾಲಯದಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದ ಕಾರಣ ಚಿಕಿತ್ಸೆ ಸಿಗದಂತಾಗಿದೆ. ಅಲ್ಲದೆ ಗುಲುಗುಂದಿ, ಮಲಕಪ್ಪನಳ್ಳಿ, ಲಿಂಗಸನಳ್ಳಿ, ಥಾವರುನಾಯಕ, ತಾನುನಾಯಕ, ಕೇಮುನಾಯಕ, ಅಡಮಡಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ರೈತರು ಜಾನುವಾರುಗಳನ್ನು ಚಿಕಿತ್ಸೆಗಾಗಿ ಇಲ್ಲಿಯೆ ಕರೆದುಕೊಂಡು ಬರುತ್ತಾರೆ.

3 ತಿಂಗಳ ಹಿಂದೆ ಡಾ.ಶಿವಾನಂದ ಯರಗೋಳ ಪಶು ಚಿಕಿತ್ಸಾಲಯದ ಹೆಚ್ಚುವರಿ ಪ್ರಭಾರಿ ಹುದ್ದೆ ವಹಿಸಿಕೊಂಡಿದ್ದಾರೆ. ಪಶು ಪರಿವೀಕ್ಷಕಿ ಮಲ್ಲಮ್ಮ 8 ದಿನಗಳ ಹಿಂದೆ ವರ್ಗಾವಣೆಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಡಿ ದರ್ಜೆ ನೌಕರ ಮಲ್ಲಿಕಾರ್ಜುನ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ಕೃಷಿಕರ ಸಂಕಷ್ಟ ನೋಡಿದ ಅಭಿವೃದ್ಧಿ ಅಧಿಕಾರಿ ರಾಮು ಪವಾರ ಅವರು ತಾಲ್ಲೂಕು ಪಶು ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ವೈದ್ಯರನ್ನು ನೇಮಿಸುವಂತೆ ವಿನಂತಿಸಿದ್ದಾರೆ.

‘ಇನ್ನೆರಡು ದಿನಗಳಲ್ಲಿ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಿಸದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಗ್ರಾಮದ ಮುಖಂಡ ಸಾಬಣ್ಣ ಬಾನರ ಎಚ್ಚರಿಸಿದರು.

‘ಇನ್ನೆರಡು ದಿನಗಳಲ್ಲಿ ಆಸ್ಪತ್ರೆಗೆ ಪಶು ಪರಿವೀಕ್ಷಕರನ್ನು ಕಳುಹಿಸಲಾಗುತ್ತದೆ. ಕೂಡಲೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಯಾದಗಿರಿ ಪಶುಪಾಲನೆ ಇಲಾಖೆ ಉಪನಿರ್ದೇಶಕ ಶರಣಭೂಪಾಲರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.