ADVERTISEMENT

ಸಮಗ್ರ ಮಾಹಿತಿಯೊಂದಿಗೆ ಹಾಜರಿರಲು ಅಧಿಕಾರಿಗಳಿಗೆ ಡಿಸಿ ಎಂ.ಕೂರ್ಮಾ ರಾವ್‌ ಸೂಚನೆ

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 16:07 IST
Last Updated 17 ಜೂನ್ 2019, 16:07 IST
ಯಾದಗಿರಿ ‌ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮಾತನಾಡಿದರು
ಯಾದಗಿರಿ ‌ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮಾತನಾಡಿದರು   

ಯಾದಗಿರಿ: ‘ಗುರುಮಠಕಲ್ ತಾಲ್ಲೂಕಿನ ಚಂಡರಕಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೂನ್ 21ರಂದು ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯದ ಅಂಗವಾಗಿ ನಡೆಯಲಿರುವ ಜನತಾದರ್ಶನದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿಗಳು ತಮ್ಮ ಇಲಾಖೆ ಯೋಜನೆಗಳ ಸಮಗ್ರ ಮಾಹಿತಿಯೊಂದಿಗೆ ಹಾಜರಿರಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಇನ್ನಿತರ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರಿ ಸೌಲಭ್ಯ ಹಾಗೂ ಇತರ ಸೌಲಭ್ಯಗಳಿಗಾಗಿ ವಿವಿಧ ಇಲಾಖೆಗಳಿಗೆ ಸಾರ್ವಜನಿಕರಿಂದ ಬಂದಿರುವ ಅರ್ಜಿಗಳು, ವಿಲೇವಾರಿ ಬಗ್ಗೆ ವರದಿ ಸಿದ್ಧಪಡಿಸಿಕೊಂಡಿರಬೇಕು. ಒಂದು ವೇಳೆ ಅರ್ಜಿ ವಿಲೇವಾರಿ ಮಾಡದಿದ್ದಲ್ಲಿ ಅದಕ್ಕೆ ಸಕಾರಣ ಹೊಂದಿರಬೇಕು. ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪಾಲನೆ ಹಾಗೂ ಕಾರ್ಯಕ್ರಮ ಯಶಸ್ವಿಗೆ ರಚಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯನ್ನು ಸಮನ್ವಯತೆಯಿಂದ ನಿರ್ವಹಿಸಬೇಕು’ ಎಂದು ಆದೇಶಿಸಿದರು.

ADVERTISEMENT

ನೀರು, ಊಟದ ವ್ಯವಸ್ಥೆ:
‘ಜನತಾದರ್ಶನಕ್ಕೆ ಆಗಮಿಸುವ ಜನರಿಗೆ ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಹಾಗಾಗಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸರತಿಸಾಲಿನಲ್ಲಿ ನಿಲ್ಲುವ ಸಾರ್ವಜನಿಕರಿಗಾಗಿ ಪ್ಯಾಕೆಟ್‌ ನೀರು ಕೊಡಬೇಕು. ವಾಹನಗಳ ನಿಲುಗಡೆ ಸ್ಥಳ, ಊಟದ ಸ್ಥಳ, ಅಡುಗೆ ಸ್ಥಳ, ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕುಳಿತುಕೊಳ್ಳುವ ಸ್ಥಳಗಳಲ್ಲಿ ನೀರಿನ ಕ್ಯಾನ್‍ಗಳನ್ನು ಇಟ್ಟು, ಪೇಪರ್ ಗ್ಲಾಸ್‍ಗಳಲ್ಲಿ ವಿತರಿಸಬೇಕು. ಇವುಗಳಲ್ಲದೆ ಅವಶ್ಯವಿರುವ ಕಡೆ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಸ್ಥಳ ಗುರುತಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜ್‍ಕುಮಾರ್ ಪತ್ತಾರ ಅವರಿಗೆ ಸೂಚಿಸಿದರು.

ಸರ್ಕಾರಿ ಸೌಲಭ್ಯಗಳ ಜಾಗೃತಿ:
‘ಮುಖ್ಯಮಂತ್ರಿಗಳ ಜನತಾದರ್ಶನ ಹಿನ್ನೆಲೆಯಲ್ಲಿ ಅಂದು ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಸ್ಟಾಲ್‍ಗಳನ್ನು ಹಾಕಲಾಗುತ್ತಿದೆ. ಕೃಷಿ, ತೋಟಗಾರಿಕೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಬ್ಯಾಂಕ್‍ಗೆ ತಲಾ ಒಂದೊಂದು ಸ್ಟಾಲ್‍ಗಳನ್ನು ನೀಡಲಾಗುವುದು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಜನತಾದರ್ಶನ ಕಾರ್ಯಕ್ರಮದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸ್ವಯಂ ಸೇವಕರು, ಸ್ವಚ್ಛತಾ ಸಿಬ್ಬಂದಿ ಹಾಗೂ ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ಟೀಶರ್ಟ್ ಮತ್ತು ಗುರುತಿನ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ವಿ.ಮುನಿರಾಜು, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.