ADVERTISEMENT

ಕೈಗಾರಿಕಾ ಚಟುವಟಿಕೆ ಆರಂಭಿಸಲು ಸೂಚನೆ

ಕೈಗಾರಿಕೋದ್ಯಮಿಗಳ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್.

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 16:17 IST
Last Updated 30 ಸೆಪ್ಟೆಂಬರ್ 2020, 16:17 IST
ಡಾ. ರಾಗಪ್ರಿಯಾ ಆರ್.,
ಡಾ. ರಾಗಪ್ರಿಯಾ ಆರ್.,   

ಯಾದಗಿರಿ: ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದ್ದು, ಉದ್ಯಮಿಗಳು ಶೀಘ್ರವಾಗಿ ಚಟುವಟಿಕೆಗಳನ್ನು ಆರಂಭಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿರುವ ನಿವೇಶನ ಪಡೆದ ಕೈಗಾರಿಕೋದ್ಯಮಿಗಳ ಸಮಸ್ಯೆ ಆಲಿಸಿ ಮಾತನಾಡಿದರು.

ಕಡೇಚೂರಿನ ಕೈಗಾರಿಕಾ ಪ್ರದೇಶದಲ್ಲಿ ಚಟುವಟಿಕೆ ಆರಂಭವಾದಲ್ಲಿ ಜಿಲ್ಲೆಯ ಜನರಿಗೆ ಉದ್ಯೋಗ ದೊರೆಯಲಿದೆ. ಉದ್ಯಮಿಗಳಿಗೆ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲು ಜಿಲ್ಲಾ ಕೈಗಾರಿಕಾ ಕೇಂದ್ರದವರು ನೆರವು ನೀಡಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆ ಆರಂಭವಾಗಬೇಕೆಂದರು.

ADVERTISEMENT

ಕೈಗಾರಿಕೆ ಆರಂಭಿಸಲು ಆಸಕ್ತರಿರುವರಿಗೆ ಇಲಾಖೆ ವತಿಯಿಂದ ನೆರವು ನೀಡಬೇಕು. ನೂತನ ಕೈಗಾರಿಕಾ ನೀತಿಯ ನಿಯಮಗಳು ಹಾಗೂ ಪ್ರಕ್ರಿಯೆಗಳನ್ನು ತಿಳಿಸಿಕೊಡಬೇಕು. ಎರಡರಿಂದ ಮೂರು ತಿಂಗಳಿನಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ವಾತಾವರಣ ಸೃಷ್ಟಿಯಾಗಬೇಕು ಎಂದರು.

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ 116 ಯುನಿಟ್‍ಗಳಿದ್ದು, ಇದರಲ್ಲಿ 62 ಯುನಿಟ್‍ಗಳಿಗೆ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಪ್ರಸ್ತುತ 2 ಯುನಿಟ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್ ರಘೋಜಿ ತಿಳಿಸಿದರು.

ಸಭೆಯಲ್ಲಿ ಕೆಐಎಡಿಬಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶುಭಾಷ ನಾಯಕ, ಸಹಾಯಕ ನಿರ್ದೇಶಕಿ ರೇಖಾ ಎನ್.ಮ್ಯಾಗೇರಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಎಸ್.ವೆಂಕಟೇಶ ಸೇರಿದಂತೆ ಕೈಗಾರಿಕೋದ್ಯಮಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.