ADVERTISEMENT

ವೃದ್ಧೆಯ ಪ್ರಜ್ಞೆ ತಪ್ಪಿಸಿ ಆಭರಣ ಕಳವು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 11:56 IST
Last Updated 26 ಡಿಸೆಂಬರ್ 2019, 11:56 IST
ಪರಮವ್ವ ಪೀರಗಾರ
ಪರಮವ್ವ ಪೀರಗಾರ   

ಕಕ್ಕೇರಾ: ಕಳ್ಳಿಯರು ವೃದ್ಧೆಯೊಬ್ಬರ ಪ್ರಜ್ಞೆ ತಪ್ಪಿಸಿ ಮೈಮೇಲಿನ ಆಭರಣಗಳನ್ನು ಹಾಡಹಗಲೇ ಕಳ್ಳತನ ಮಾಡಿದ ಘಟನೆ ಕೊಡೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಕ್ಕೇರಾ ಪಟ್ಟಣದ ಉರ್ದು ಶಾಲೆ ಮಾರ್ಗದಲ್ಲಿ ಬುಧವಾರ ಜರುಗಿದೆ.

ಸಮೀಪದ ಪೀರಗಾರದೊಡ್ಡಿಯ ನಿವಾಸಿ 68 ವಯೋಮಾನದ ಪರಮವ್ವ ಬುಧವಾರದ ಸಂತೆ ಮಾರುಕಟ್ಟೆಗೆ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮಾರ್ಗದ ಸಂದಿಯಲ್ಲಿ (ಕ್ಷೌರಿಕರ ಅಂಗಡಿ ಹಿಂದೆ) ಒಬ್ಬಂಟಿಯಾಗಿ 2 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದನ್ನು ಗಮನಿಸಿದ ಕಳ್ಳಿಯರು ಅಮ್ಮಾ, ಅಮ್ಮಾ, ನಿಮ್ಮಂಥ ಮುದುಕಿಯರಿಗೆ ಈ ವಸ್ತು ಚಲೋ ಕಾಣಿಸ್ತದಲ್ಲಾ ಎಂದು ಮೂಗಿನ ಮುಂದೆ ಹಿಡಿಯುತ್ತಿದ್ದಂತೆ ಪ್ರಜ್ಞೆ ತಪ್ಪಿ ನೆಲಕ್ಕೆ ಬೀಳುವಷ್ಟರಲ್ಲಿ ಕೊರಳಲಿದ್ದ ಅರ್ಧ ತೊಲಿಯ ಬಂಗಾರದ ಟಿಕ್ಕೆ ಹಾಗೂ ಎರಡು ಬೆಂಡೊಲೆಗಳನ್ನು ಬಿಡಿಸಿಕೊಂಡು ಮಾಯವಾಗಿದ್ದಾರೆ.

ಕಳ್ಳಿಯರು 30ರಿಂದ 40 ವಯೋಮಾನದವರಿದ್ದಾರೆ ಎಂದು ಪರಮವ್ವ ಪೀರಗಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

ಹಾಲು ಮಾರಿ ರೊಕ್ಕ ಕೂಡಿಟ್ಟು ಬಂಗಾರದ ಟಿಕ್ಕೆ ಮಾಡ್ಸಿಕೊಂಡಿದ್ದೆ. ಆದ್ರ ಕಳ್ಳರ ಪಾಲಾಯ್ತಲ್ಲಾ ಎಂದು ಅಳುತ್ತಿದ್ದ ಹಿರಿ ಜೀವಿಯ ಸಂಕಟ ನೋಡುಗರಿಗೆ ಅಯ್ಯೋ ಅಯ್ಯೋ ಪಾಪ ಎಂದೆನಿಸುತ್ತಿತ್ತು.

ಪತಿಯನ್ನು ಕಳೆದುಕೊಂಡಿರುವ ವೃದ್ಧೆಯ ಮಗ ಕೂಲಿ ಕೆಲಸ ಅರಸಿ ಬೆಂಗಳೂರಲ್ಲಿ ಇದ್ದಾನೆ ಎನ್ನಲಾಗಿದೆ.

ಪಟ್ಟಣದಲ್ಲಿ ಸೆಂತೆಗೆ ಸಾವಿರಾರು ಜನರು ಆಗಮಿಸುತ್ತಾರೆ. ಇಂಥ ಘಟನೆ ಮರುಕಳಿಸದಂತೆ ಪೊಲಿಸರು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಅಧ್ಯಕ್ಷ ಚಂದ್ರು ವಜ್ಜಲ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.