ADVERTISEMENT

ವಡಗೇರಾ: ಎತ್ತುಗಳ ಪಾದ ಸುರಕ್ಷತೆಗೆ ‘ನಾಲು’

ಎತ್ತಿನ ಒಂದು ಕಾಲಿನ ಪಾದಕ್ಕೆ ಬೇಕು 2 ನಾಲು: ಒಂದು ನಾಲಿನ ಬೆಲೆ ₹100

ಪ್ರಜಾವಾಣಿ ವಿಶೇಷ
Published 28 ಜುಲೈ 2025, 6:07 IST
Last Updated 28 ಜುಲೈ 2025, 6:07 IST
ವಡಗೇರಾ ಪಟ್ಟಣದ ಕಂಬಾರಾಯ ದೇವಾಲಯದ ಆವರಣದಲ್ಲಿ ಎತ್ತಿನ ಪಾದಕ್ಕೆ ನಾಲು ಹೊಡೆಯುತ್ತಿರುವುದು
ವಡಗೇರಾ ಪಟ್ಟಣದ ಕಂಬಾರಾಯ ದೇವಾಲಯದ ಆವರಣದಲ್ಲಿ ಎತ್ತಿನ ಪಾದಕ್ಕೆ ನಾಲು ಹೊಡೆಯುತ್ತಿರುವುದು   

ವಡಗೇರಾ: ಪ್ರಕೃತಿಯು, ಎಲ್ಲ ಪ್ರಾಣಿ–ಪಕ್ಷಿಗಳು ಸುರಕ್ಷತೆಗಾಗಿ ಕಾಲಕಾಲಕ್ಕೆ ವ್ಯವಸ್ಥೆ ಮಾಡಿರುತ್ತದೆ. ರೈತರು, ಹೊಲವನ್ನು ಹದಗೊಳಿಸಲು, ಉಳುಮೆ ಮಾಡಲು ಸಾಂಪ್ರದಾಯಿಕ ಸಲಕರಣೆಗಳನ್ನು ಬಿಟ್ಟು, ಟ್ರ್ಯಾಕ್ಟರ್‌ ಹಾಗೂ ಇನ್ನಿತರ ನವೀನ ಯಂತ್ರಗಳನ್ನು ಬಳಸುತ್ತಿದ್ದಾರೆ.

ಹಾಗೆಯೇ ರೈತರು, ತಮ್ಮ ಜೀವನಾಡಿಯಾದ ಎತ್ತುಗಳ ಪಾದಗಳಿಗೆ ಮುಳ್ಳುಗಳು, ಹರಳುಗಳು ಚುಚ್ಚಬಾರದು, ಬಿಸಿಲಿನಲ್ಲಿ ಸುಡಬಾರದು ಎಂಬ ಸುರಕ್ಷತೆ ದೃಷ್ಟಿಯಿಂದ ಎತ್ತುಗಳ ತಳಪಾದಗಳಿಗೆ ನಾಲುಗಳನ್ನು ಹೊಡೆಸುತ್ತಾರೆ.

ನಾಲುಗಳ ಆಕಾರ, ಜೋಡಣೆ: ಅರ್ಧ ಚಂದ್ರಾಕಾರದಲ್ಲಿರುವ ಮಧ್ಯಮ ಗಾತ್ರದ ಕಬ್ಬಿಣದಿಂದ ಇವುಗಳನ್ನು ಸಿದ್ದಪಡಿಸುತ್ತಾರೆ. ಈ ನಾಲುಗಳನ್ನು ಎತ್ತುಗಳ ಪಾದಗಳಿಗೆ ಜೋಡಣೆ ಮಾಡಿ, ನಾಲುಗಳಿಗೆ ಇರುವ ರಂಧ್ರಗಳಲ್ಲಿ ಮೊಳೆಗಳನ್ನು ಇಟ್ಟು ಸುತ್ತಿಗೆಯಿಂದ ಹೊಡೆಯುತ್ತಾರೆ. ಹೀಗೆ ಎತ್ತಿನ ಪ್ರತಿ ಪಾದಕ್ಕೆ ಎರಡು ನಾಲು ಜೋಡಣೆ ಮಾಡುತ್ತಾರೆ.

ADVERTISEMENT

ನಾಲಿನ ಬೆಲೆ: ಎತ್ತಿನ ಒಂದು ಕಾಲಿನ ಪಾದಕ್ಕೆ 2 ನಾಲುಗಳು ಬೇಕು. ಒಂದು ಎತ್ತಿಗೆ ಸುಮಾರು 8 ನಾಲುಗಳು ಬೇಕಾಗುತ್ತವೆ. ಒಂದು ನಾಲಿನ ಬೆಲೆ ₹100, ಒಂದು ಎತ್ತಿನ 4 ಕಾಲುಗಳಿಗೆ ನಾಲು ಹೊಡೆಯಲು ತಗಲುವ ಖರ್ಚು ₹800.

ಒಂದು ವರ್ಷದಲ್ಲಿ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ನಾಲುಗಳನ್ನು ಎತ್ತುಗಳಿಗೆ ಹೊಡೆಸುತ್ತಾರೆ. ಏಕೆಂದರೆ ಎತ್ತುಗಳು ನಡೆದಂತೆಲ್ಲ ಹಾಗೂ ಭಾರ ಎಳೆಯುವ ಸಮಯದಲ್ಲಿ ಈ ನಾಲುಗಳು ಸವೆದು ಹೋಗುತ್ತವೆ.

ನಾಲುಗಳ ಉಪಯೋಗ: ದುಬಾರಿ ಬೆಲೆಯ ರಾಸುಗಳನ್ನು ರೈತರು ಖರೀದಿಸುತ್ತಾರೆ. ರಾಸುಗಳ ಪಾದಗಳು ಬಹಳ ಮೃದು ಆಗಿರುವುದರಿಂದ ಅವುಗಳ ಪಾದಗಳಿಗೆ ಹರಳು ಇಲ್ಲವೆ ಇನ್ನಿತರ ವಸ್ತುಗಳು ಚುಚ್ಚಿದರೆ ರಾಸುಗಳು ನೆಲಕ್ಕೆ ಬೀಳುತ್ತದೆ. ರಾಸುಗಳು ರೈತರ ಜತೆ ಜಮೀನುಗಳಲ್ಲಿ ದುಡಿಯುವಾಗ ಅವು ನೆಲಕ್ಕೆ ಬೀಳಬಾರದು ಎಂಬ ಉದ್ದೇಶದಿಂದ ರಾಸುಗಳ ಕಾಲುಗಳ ಪಾದುಗಳಿಗೆ ನಾಲನ್ನು ಹೊಡೆಸುತ್ತಾರೆ.

ಗುಜರಾತ್‌ನಿಂದ ಖರೀದಿ

1 ಕ್ವಿಂಟಲ್‌ ನಾಲುಗಳ ಬೆಳೆ ಸುಮಾರು ₹20000 ಇದೆ. ಹಿಂದೆ ನಾಲುಗಳ ಬೆಲೆ ಕಡಿಮೆಯಿತ್ತು. ನಾವು ಸಹ ರೈತರಿಂದ ಕಡಿಮೆ ಹಣ ಪಡೆದು ಎತ್ತುಗಳ ಪಾದಗಳಿಗೆ ನಾಲು ಹೊಡೆಯುತ್ತಿದ್ದೆವು. ಆದರೆ ಈಗ ನಾಲುಗಳು ಬಹಳ ದುಬಾರಿ ಆಗಿರುವುದರಿಂದ ಒಂದು ಎತ್ತಿನ ಪಾದಗಳಿಗೆ ನಾಲು ಹೊಡೆಯಲು ಸುಮಾರು ₹600 ರಿಂದ ₹800 ಪಡೆಯುತ್ತೇವೆ ಎಂದು ನಾಲು ಹೊಡೆಯುವವರು ಹೇಳುತ್ತಾರೆ. ವಡಗೇರಾ ತಾಲ್ಲೂಕು ವ್ಯಾಪ್ತಿಯಲ್ಲಿ ಎತ್ತುಗಳ ಪಾದಗಳಿಗೆ ನಾಲು ಹೊಡೆಯುವವರು ಇಲ್ಲದ ಕಾರಣ 8 ರಿಂದ 10 ಜೋಡಿ ಎತ್ತುಗಳು ಆದಾಗ ಶಹಾಪುರ ತಾಲ್ಲೂಕಿನ ಹೋತಪೇಟ್ ಗ್ರಾಮದಲ್ಲಿರುವ ನಾಲು ಹೊಡೆಯುವವರನ್ನು ಫೋನ್ ಮಾಡಿ ಕರೆಸುತ್ತಾರೆ. ಅವರು ಸ್ಥಳಕ್ಕೆ ಬಂದು ನಾಲು ಹೊಡೆದು ಹೋಗುತ್ತಾರೆ.

10 ವರ್ಷದಿಂದ ಈ ಕಾಯಕ ಮಾಡುತ್ತಿದ್ದೇನೆ. ರೈತರು ಫೋನ್ ಮಾಡಿ ಕರೆದಾಗ ಗ್ರಾಮಕ್ಕೆ ಹೋಗಿ ಎತ್ತುಗಳ ಪಾದಗಳಿಗೆ ನಾಲುಗಳನ್ನು ಹೊಡೆದು ಬರುತ್ತೇನೆ.
-ಸಲೀಂ ಹೋತಪೇಟ್, ಎತ್ತುಗಳಿಗೆ ನಾಲು ಹೊಡೆಯುವ ವ್ಯಕ್ತಿ
ಸುಮಾರು ಒಂದು ಒಂದೂವರೆ ಲಕ್ಷದ ಎತ್ತುಗಳನ್ನು ಖರೀದಿಸಿ ತರುತ್ತೇವೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಎತ್ತುಗಳ ಪಾದಗಳಿಗೆ ಏನು ಚುಚ್ಚಬಾರದು ಎಂಬ ಉದ್ದೇಶದಿಂದ ನಾಲುಗಳನ್ನು ಹೊಡೆಸುತ್ತೇವೆ
-ಹುಸೇನ್ ಸಾಬ್, ಕಳ್ಳಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.